2025ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಗೌರವ ಹೆಚ್ಚಾಗಿದೆ.
 
                                2025ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಗೌರವ ಹೆಚ್ಚಾಗಿದೆ.
ನವೆಂಬರ್ ಒಂದರಂದು ಕನ್ನಡಿಗರ ಆತ್ಮಸಮ್ಮಾನದ ದಿನ
ಈ ದಿನವು ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ ಮತ್ತು ಸಮಾಜ ಇನ್ನಿತರೆ ಸೇವೆಯ ಸಾಧನೆಗಳನ್ನು ಗೌರವಿಸುವುದು ಒಂದು ಹೆಮ್ಮೆ. ಪ್ರತಿ ಬಾರಿ
ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಂದ ಯುವಪೀಳಿಗೆಗೆ ಸ್ಫೂರ್ತಿ ದೊರೆಯಲಿದೆ ಎನ್ನುವುದರಲ್ಲಿ ಉರುಳಿಲ್ಲ.
ಈ ಬಾರಿ 2025ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ಬಹು ವಿಶಿಷ್ಟ, ವಿಭಿನ್ನವಾಗಿದ್ದು ಯಾರಿಂದಲೂ ಅರ್ಜಿ ಆಹ್ವಾನಿಸದೆ, ನೇರವಾಗಿ ಸರ್ಕಾರದ ಆಯ್ಕೆ ಸಮಿತಿಯು ಎಲ್ಲಾ ಜಿಲ್ಲೆಗಳ ಸಮತೋಲನ, ಮಹಿಳಾ ಸಾಧನೆ, ಸಾಮಾಜಿಕ ನ್ಯಾಯ ಇನ್ನಿತರ ಅಂಶಗಳನ್ನು ಪರಿಗಣಿಸಿ ಅರ್ಹ ವ್ಯಕ್ತಿಗಳನ್ನು ಆಯ್ಕೆಗೊಳಿಸಿದೆ ಹಾಗಾಗಿ ಸರ್ಕಾರ ಮತ್ತು ಆಯ್ಕೆ ಸಮಿತಿಯ ಸರ್ವರೂ ಅಭಿನಂದನಾರ್ಹರು.
ಸೂಲಗಿತ್ತಿ ಈರಮ್ಮ (ವಿಜಯನಗರ) ಇವರಂತಹ ಹಿರಿಯರನ್ನು ಗುರುತಿಸಿ ಗೌರವ ನೀಡುತ್ತಿರುವುದು ನಿಜಕ್ಕೂ ಇತರರಿಗೆ ಸ್ಫೂರ್ತಿದಾಯಕವು ಹೌದು. ಹಾಗೆಯೇ ಈ ಸಲದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪಡೆದವರಲ್ಲಿ ಬಹುತೇಕರು ನಾಡಿಗೆ ತಮ್ಮದೇ ಕ್ಷೇತ್ರದಲ್ಲಿ ಆದ ಕೊಡುಗೆಗಳನ್ನು ನೀಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆನ್ ಲೈನ್ ಅಥವಾ ಆಫ್ ಲೈನ್ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದನ್ನು ನಿರ್ವಹಿಸಿದೆ.
ಈ ಹಿಂದೆ ಹೊಸ ವ್ಯವಸ್ಥೆಯನ್ನು ತಂದು, ಮೆಚ್ಚುಗೆಯನ್ನು ಪಡೆದಿದ್ದರು.
2022ರಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸುವ , ಶಿಫಾರಸು ಮಾಡುವ ವ್ಯವಸ್ಥೆ ಯನ್ನು ಸ್ಥಗಿತ ಮಾಡಲಾಯಿತು. ಮತ್ತೊಂದು ಹೊಸ ವಿಧಾನವನ್ನು ಜಾರಿಗೆ ತರಲಾಯಿತು. ಆ ಪ್ರಕಾರ ಹಲವು ಸಮಿತಿಗಳನ್ನು ನೇಮಿಸಿ ರಾಜ್ಯ ಪ್ರವಾಸ ನಡೆಸಿ ಸಮಿತಿಯೆ ಪ್ರಶಸ್ತಿಗೆ ಸೂಕ್ತ ಆದವರನ್ನು ಆಯ್ಕೆ ಮಾಡುವ ವಿಧಾನದ ಮೂಲಕ 2022ರ ರಾಜ್ಯೋತಸ್ವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ ಮಾಡಲಾಯಿತು.
ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ವೆಂದು ಹೇಳಿ ಸರ್ಕಾರವೇ ತಂನ್ನೊಂದಿಗೆ ನಾಡಿನ ಗಣ್ಯರನ್ನು ಸೇರಿಸಿ ಸಮಿತಿ ಮಾಡಿಕೊಂಡು ನಾಡಿನ ಸಾಧಕರನ್ನು ಗುರುತಿಸಿ 2025ರ ಪ್ರಶಸ್ತಿಗೆ ಅತ್ಯುತ್ತಮರನ್ನು ಆಯ್ಕೆ ಮಾಡಿದೆ ಎಂದರೆ ಉತ್ಪ್ರೇಕ್ಷೆ ಆಗಲಾರದು.
ಕಲೆ, ಸಾಹಿತ್ಯ, ನೃತ್ಯ, ರಂಗಭೂಮಿ, ಸಿನಿಮಾ, ಸಂಗೀತ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಜಾನಪದ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ, ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಂತೆ ಪ್ರತಿ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸುವುದು ಪ್ರತೀತವಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಮಟ್ಟದಲ್ಲಿ 1966ರಿಂದ ಕೊಡಲು ಆರಂಭಿಸಲಾಯಿತು. ಪ್ರತಿ ವರ್ಷ ಪ್ರಶಸ್ತಿಯನ್ನು ನವಂಬರ್ ಒಂದರಂದು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ.
ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳಸಿಕೊಂಡು ಹೋಗಲು ಹಾಗೂ ಸಾಧಕರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮುಂದಿನ ಪೀಳಿಗೆಗೆ ಸ್ಫೂರ್ತಿ ಹೆಚ್ಚಿಸಲು ಇಂತಹ ಪ್ರಶಸ್ತಿಗಳು ಅತೀ ಅವಶ್ಯಕ ಎನ್ನಬಹುದು.
ಮುಗಿಸುವ ಮುನ್ನ
ಕಳೆದ ನಾಲ್ಕು ಐದು ವರ್ಷಗಳಿಂದ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಬಹುತೇಕರು ಬದುಕಿನ ಅಂತಿಮ ಘಟ್ಟದಲ್ಲಿರುವವರೇ ಆಗಿದ್ದಾರೆ. ಇದರಿಂದ ಜೀವಮಾನ ಪೂರ್ತಿ ಯಾವುದೋ ಒಂದು ಸೇವೆ ಮಾಡುತ್ತಾ ಹೇಗೋ ಬದುಕನ್ನು ಸಾಗಿಸಿರುತ್ತಾರೆ. ಅವರ ಬದುಕಿಗೆ ಒಂದು ಭದ್ರತೆ ಇದ್ದರೂ ಇರಬಹುದು ಇಲ್ಲದೇ ಇರಬಹುದು. ಉದಾಹರಣೆಗೆ
ಸೂಲಗಿತ್ತಿ ಈರಮ್ಮ (ವಿಜಯನಗರ) ಇವರನ್ನು ಗುರುತಿಸಿದ್ದು ತುಂಬಾ ಹೆಮ್ಮೆಯ ಸಂಗತಿ. ಆದರೆ 103ನೇ ವಯಸ್ಸಿನಲ್ಲಿ ಮೌಲ್ಯಯುತವಾದ ಪ್ರಶಸ್ತಿ ಮೊತ್ತ ಗೌರವಪೂರ್ವಕವಾಗಿ ನೀಡುವುದು. ಉಡುಗೊರೆಯಾಗಿ ಸ್ವರ್ಣ ಪದಕವನ್ನು ನೀಡಲಾಗುತ್ತದೆ. ಆದರೆ ಪ್ರಶಸ್ತಿ ಪುರಸ್ಕೃತರು ಈ ವಯಸ್ಸಿನಲ್ಲಿ ಯಾವ ಪುರುಷಾರ್ಥಕ್ಕಾಗಿ ಗೌರವಧನದ ಹಣವನ್ನು ಬಳಸಿಕೊಳ್ಳಬೇಕು!? ಈ ವಯಸ್ಸಿನಲ್ಲಿ ಬಂಗಾರವನ್ನು ಮೈ ಮೇಲೆ ಹಾಕಿ ಕೊಂಡು ಹೇಗೆ ಖುಷಿಪಡಬೇಕು!?
ಅಡವಿಯಲ್ಲಿ ಅಡಕೆ ಕುಟ್ಟಿದರೆ ಅಡವಿ ಪಾಲು ಅಂತಾರಲ್ಲ ಹಾಗೆ ಇಡೀ ಜೀವಮಾನ ದುಡಿದು ಮಾಡಿದ ಸಾಧನೆಯ ಗೌರವಧನ ಇನ್ಯಾರಿಗೋ ತಲುಪುತ್ತದೆ ಅಲ್ಲವೇ!!?
ಈ ದಿಸೆಯಲ್ಲಿ ಯಾವುದೇ ಒಬ್ಬ ಸಾಧಕನನ್ನು ಪ್ರೆರೇಪಿಸಲು ಕನಿಷ್ಠ 35 ವರ್ಷಗಳ ನಂತರ ಗುರುತಿಸುವುದು ಹಿತವೇನೋ!
ಏಕೆಂದರೆ ಯಾವುದೇ ಸಾಧಕನ ಬದುಕು ಬಿಂದಾಸ ಆಗಿ ಇರುವುದಿಲ್ಲ. ಕೌಟುಂಬಿಕ, ಸಾಮಾಜಿಕ, ಆರ್ಥಿಕ ಹೀಗೆ ಒಂದಿಲ್ಲಲ್ಲೊಂದು ಸಮಸ್ಯೆಗಳ ಸುಳಿಯಿಂದಲೇ ತಿರುಗಿ ತಿರುಗಿ ( ಸುಂಟಗಾಳಿಯ ಹಾಗೆ )ಮೇಲೆ ಬರಬೇಕಾಗಿರುತ್ತದೆ.
ಇಂತಹ ಸಂದರ್ಭದಲ್ಲಿ ಸರ್ಕಾರ ಗುರುತಿಸಿ ಗೌರವಿಸಿದರೆ ಆರ್ಥಿಕ ನೆರವು ನೀಡಿದಂತಾಗುತ್ತದೆ ಈ ಮೂಲಕ ಪ್ರೇರಣೆ ಪಡೆದು ಮುಂದೆ ಹೊಸ ಹೊಸ ಯೋಚನೆಗಳ ಮೂಲಕ ಅಧಮ್ಯವಾದುದನ್ನು ಸಾಧಿಸಲು ಪ್ರಯತ್ನ ಮಾಡುತ್ತಾರಲ್ಲವೇ!!?
ಆದುದರಿಂದ ಮುಂದಿನ ವರ್ಷದಲ್ಲಿ 35 ವರ್ಷ ಮೇಲ್ಪಟ್ಟ ಯುವ ಜನತೆಯನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಬಾರದೇಕೆ!?? ಈ ಮೂಲಕ ಯುವ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ.
ಒಟ್ಟಾರೆಯಾಗಿ 2025ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಗೆ ಹೃದಯಪೂರ್ವಕ ಅಭಿನಂದನೆಗಳು ಸರ್ವರಿಗೂ 2025ನೇ ಸಾಲಿನ ಕನ್ನಡ ಹಬ್ಬದ ಶುಭಾಶಯಗಳು.
ಡಾ.ಉಮೇಶ್ ಬಾಬು ಮಠದ್(ಉಬಾಮ) ಕನಕ ಯುವ ಪುರಸ್ಕೃತ ಸಾಹಿತಿ ಹಾಗೂ ಚಿಂತಕರು, ವಿಜಯನಗರ
9606363449
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
