ಶಿಕ್ಷಕ ಸಾಹಿತಿ ಲಿಂಗಾರೆಡ್ಡಿ ಶೇರಿಯವರ ಕಿರು ಪರಿಚಯ
ಶಿಕ್ಷಕ ಸಾಹಿತಿ ಲಿಂಗಾರೆಡ್ಡಿ ಶೇರಿಯವರ
೧-೪-೧೯೫೧ ರಲ್ಲಿ ಸೇಡಂ ತಾಲೂಕಿನ ಜಾಕನಹಳ್ಳಿ ಯ ರೈತ ಕುಟುಂಬದಲ್ಲಿ ಜನನ. ತಾಯಿ - ವೀರಮ್ಮ , ತಂದೆ - ಬಸರೆಡ್ಡಿ. ಕಲಬುರಗಿ ಯ ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬಿ. ಎ. ಪದವಿಯನ್ನು ೧೯೭೨ ರಲ್ಲಿ ಪಡೆದು , ಬರಗಾಲದ ನಿಮಿತ್ತ ಓದು ನಿಲ್ಲಿಸಿ ನೌಕರಿಗಾಗಿ ಅಲೆದು , ಕೊನೆಗೆ ಸಿರಿಗೆರೆ ಯ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯಲ್ಲಿ ೧೯೭೩ ರಿಂದ ಕನ್ನಡ ಶಿಕ್ಷಕ ವೃತ್ತಿ ಆರಂಭ. ಮೊದಲ ಶಾಲೆ ಆಗಿನ ಧಾರವಾಡ ಜಿಲ್ಲೆಯ ಸವಣೂರು ತಾಲ್ಲೂಕಿನ ಕಡಕೋಳ ದ ಕೆ.ಜಿ.ಎಲ್. ಪ್ರೌಢಶಾಲೆ .
ಸೇವೆಯಲ್ಲಿ ಇದ್ದಾಗಲೇ ಎಂ.ಎ. (ಕನ್ನಡ) , ಬಿ.ಈಡಿ. , ತೆಲುಗು ಡಿಪ್ಲೊಮಾ ಮಾಡಿಕೊಂಡರು. ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಅನೇಕ ಪತ್ರಿಕೆಗಳಲ್ಲಿ ಕವನ , ಕಥೆ, ಲೇಖನ ಗಳು ಪ್ರಕಟವಾದವು. ನಿತ್ಯಾನಂದ ತತ್ವಪದಗಳು ಎನ್ನುವ ಭಜನಾ ಹಾಡುಗಳನ್ನು ಸಂಗ್ರಹಿಸಿ ೧೯೮೩ ರಲ್ಲಿ ಪ್ರಕಟಿಸಿದ್ದಾರೆ.
ನಂತರ ರಾಣೇಬೆನ್ನೂರು ತಾಲೂಕಿನ ಸುಣಕಲ್ ಬಿದರಿ , ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತೂಲಹಳ್ಳಿ , ಕಡೂರು ತಾಲೂಕಿನ ಸಿಂಗಟಗೆರೆ ಯಲ್ಲಿ ಸಹಶಿಕ್ಷಕರಾಗಿ ಮತ್ತು ಬಿಸಿಲೇ ಹಳ್ಳಿ ಪ್ರೌಢಶಾಲೆ ಯಲ್ಲಿ ಮುಖ್ಯ ಶಿಕ್ಷಕರಾಗಿ ೩೭ ವರ್ಷ ೧೦ ತಿಂಗಳು ಸೇವೆ ಸಲ್ಲಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಇವರಿಂದ ಶಿಕ್ಷಣ ಪಡೆದಿದ್ದಾರೆ.
ವೃತ್ತಿಯಿಂದ ಕನ್ನಡ ಶಿಕ್ಷಕರಾಗಿ ಪ್ರವೃತ್ತಿಯಿಂದ ಲೇಖಕರಾಗಿ , ಸಂಘಟಕರಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇಲ್ಲಿಯವರೆಗೆ ಮುಖ್ಯವಾಗಿ ಏಳು ಕವನಸಂಕಲನಗಳನ್ನು, ಎರಡು ವಚನ ಸಂಕಲನಗಳನ್ನು , ಎರಡು ವಿಮರ್ಶಾ ಕೃತಿಗಳನ್ನು ಒಂದು ಕಥಾಸಂಕಲನ ವನ್ನು , ಏಳು ಸಂಪಾದಿತ ಕೃತಿ ಗಳನ್ನು , ನಾಲ್ಕು ಇತರೆ ಕೃತಿಗಳು ಸೇರಿ ಒಟ್ಟು ಇಪ್ಪತ್ತು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಂಘಟನೆ : ೧. ಸುಣಕಲ್ ಬಿದರಿ ಯಲ್ಲಿದ್ಧಾಗ " ಕನ್ನಡ ಸಾಹಿತ್ಯ ವೇದಿಕೆ" (೧೯೮೮) ಪ್ರಾರಂಭಿಸಿ ಅಧ್ಯಕ್ಷ ರಾಗಿ ಗ್ರಾಮೀಣ ಪರಿಸರದಲ್ಲಿ ಸಾಹಿತ್ಯ ಪ್ರಸಾರ ಮಾಡುವ ಪ್ರಯತ್ನ ಮಾಡಿದ್ದಾರೆ.
೨. ಕೊಟ್ಟೂರಿನಲ್ಲಿ (ಕೂಡ್ಲಿಗಿ ತಾಲೂಕ) ಗೆಳೆಯರೊಂದಿಗೆ *ಬಯಲು ಸಾಹಿತ್ಯ ವೇದಿಕೆ* (೧೯೯೪) ಕಟ್ಟಿ ಸ್ಥಾಪಕ ಕಾರ್ಯದರ್ಶಿಯಾಗಿ ತಾಲೂಕಿನಾದ್ಯಂತ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾಹಿತ್ಯದ ವಾತಾವರಣ ಮೂಡಲು ಪ್ರಯತ್ನಿಸಿದ್ದಾರೆ. ಮತ್ತು ೧೯೯೮ ರಿಂದ ೨೦೦೨ ರ ವರೆಗೆ ಕೂಡ್ಲಿಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ರಾಗಿ ಅನೇಕ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಏರ್ಪಡಿಸಿದ್ದಾರೆ. ಅದೇ ಅವಧಿಯಲ್ಲಿ " ತಾಲೂಕು ಕರ್ನಾಟಕ ಇತಿಹಾಸ ಅಕಾಡೆಮಿ" ಸಂಚಾಲಕರಾಗಿ ಕೆಲಸ ನಿರ್ವಹಿಸಿದ್ದಾರೆ. ೨೦೦೦- ೨೦೦೨ ರ ಅವಧಿಯಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯರಾಗಿದ್ದಾರೆ . ಆಯಾ ತಾಲೂಕಿನ ಶಾಲೆ ಯಲ್ಲಿದ್ದಾಗ ವೃತ್ತಿ ಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ನಿರತರಾಗಿದ್ದು ಸಾಮಾಜಮುಖಿ ವಿಚಾರಗಳನ್ನು ಹಂಚಿಕೊಳ್ಳಲು ಅನೇಕ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವ ಇವರು ೧೯೮೯ ರಿಂದ ಒಂದು ಅವಧಿಗೆ ರಾಣೇಬೆನ್ನೂರು ತಾಲೂಕಿನ "ಬಂಡಾಯ ಸಾಹಿತ್ಯ ಸಂಘಟನೆ " ಯ ಸಂಚಾಲಕರಾಗಿದ್ದಾರೆ. ಇವರ ಅವಧಿಯಲ್ಲಿ ರಾಣೇಬೆನ್ನೂರು ನಲ್ಲಿ ಬೆಳಗಾವಿ "ವಲಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ " ನಡೆದದ್ದು ವಿಶೇಷ.
ಕೊಟ್ಟೂರಿನಲ್ಲಿದ್ದಾಗ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗಳ ಸಹಯೋಗದಲ್ಲಿ ಅನೇಕ ವಿಚಾರ ಸಂಕಿರಣ, ಕವಿಗೋಷ್ಠಿ, ಮತ್ತು ಉಪನ್ಯಾಸ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ.
ಇವರು ನಿವೃತ್ತಿ ನಂತರ ಸೇಡಂ ಗೆ ಬಂದು ನೆಲೆಸಿದರು. ಇಲ್ಲಿ ೨೦೧೩ ರಲ್ಲಿ " ಸಮ ಸಾಹಿತ್ಯ ವೇದಿಕೆ" ಸ್ಥಾಪಕ ಸಂಚಾಲಕರಾಗಿ ಸಮಾನ ಮನಸ್ಕರ ರೊಡನೆ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿರುವರು. ವೇದಿಕೆಯಿಂದ ಅನೇಕ ಉದಯೋನ್ಮುಖ ಹಾಗೂ ಹಿರಿಯ ಲೇಖಕರ ಪುಸ್ತಕಗಳು ಬಿಡುಗಡೆಯಾಗಿವೆ. ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಸಾಹಿತ್ಯದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ವೇದಿಕೆಯು " ಕವಿ ಕಾವ್ಯ" ಕುರಿತು ಆನ್ ಲೈನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ . ಕರೋನ ಪೀಡಿತ ಕಾಲದಲ್ಲಿ ಇದು ಮಹತ್ವದ ಕಾರ್ಯಕ್ರಮ ಎನಿಸಿತು. *ಸಮ ಸಾಹಿತ್ಯ ವೇದಿಕೆ* ಯ ವ್ಯಾಟ್ಸಪ್ (೨೦೧೬ ರಿಂದ ) ಗೆಳೆಯರ ಬಳಗದಲ್ಲಿ ಅನೇಕರು ತಮ್ಮ ಬರಹಗಳನ್ನು ದಿನ ನಿತ್ಯ ಹಂಚಿಕೊಳ್ಳುತ್ತಿದ್ದಾರೆ. ಉದಯೋನ್ಮುಖ ಲೇಖಕರಿಗೆ ಹಿರಿಯರು ಮಾರ್ಗದರ್ಶನ ಮಾಡುತ್ತಿದ್ದಾರೆ. ಕಲೆ, ಸಾಹಿತ್ಯ, ಸಂಗೀತ, ಮತ್ತಿತರೆ ಜ್ಞಾನದ ಸಂವಹನ ನಡೆಸುತ್ತಿದೆ. ರಾಜ್ಯದ ಸುಮಾರು ಹತ್ತು ಜಿಲ್ಲೆಗಳ (ಸು. ೨೩೦) ಬರಹಗಾರರ ಬಳಗವಿದಾಗಿದೆ. ಇದರ ಸ್ಥಾಪಕ ಮುಖ್ಯ ಅಡ್ಮಿನ್ ಲಿಂಗಾರೆಡ್ಡಿ ಶೇರಿಯವರು.
ಲಿಂಗಾರೆಡ್ಡಿ ಶೇರಿ ಯವರ ಸಾಹಿತ್ಯಿಕ, ಸಾಮಾಜಿಕ ಸೇವೆ ಗುರುತಿಸಿ ಅನೇಕ ಪ್ರಶಸ್ತಿಗಳು ಬಂದಿವೆ . ಮುಖ್ಯ ವಾಗಿ, ಸಂಕ್ರಮಣ ಕಾವ್ಯ ಬಹುಮಾನ , ಉತ್ತಮ ಸಂಘಟಕ ಪ್ರಶಸ್ತಿ , ಅಮ್ಮ ಗೌರವ ಪ್ರಶಸ್ತಿ , ಸಾಹಿತ್ಯ ಸಾರಥಿ ಪ್ರಶಸ್ತಿ , ಬಸವ ಪುರಸ್ಕಾರ , ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ , ಉತ್ತಮ ಕೃತಿ ಪ್ರಶಸ್ತಿ , ಕಾವ್ಯ ಶ್ರೀ ಪ್ರಶಸ್ತಿ , ಬಸವ ಗೌರವ ಪ್ರಶಸ್ತಿ , .... ಇತ್ಯಾದಿ. ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ಇವರು ಅನೇಕ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ , ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ.
ಇವರ ಸಾಹಿತ್ಯ ಸಾಧನೆ ಕುರಿತು ಬೆಳಗಾವಿ ಜಿಲ್ಲೆಯ ರಾಯಭಾಗದ ಶ್ರೀ ಉತ್ತಮ ವಡಗೋಲೆ ಯವರು " ಲಿಂಗಾರೆಡ್ಡಿ ಶೇರಿ ಅವರ ಸಾಹಿತ್ಯ ಮತ್ತು ಬಂಡಾಯದ ಸಂಘರ್ಷಾತ್ಮಕ ನೆಲೆಗಳು" ಎನ್ನುವ ಸಂಶೋಧನಾ ಮಹಾಪ್ರಬಂಧ ಮಂಡಿಸಿ *ಕುವೆಂಪು ವಿಶ್ವವಿದ್ಯಾಲಯ* ದಿಂದ ೨೦೨೩ ರಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಇವರ ಮಾರ್ಗದರ್ಶಕರು ಕುವೆಂಪು ವಿಶ್ವವಿದ್ಯಾಲಯದ ಡಾ. ಶಿವಾನಂದ ಕೆಳಗಿನಮನಿ ಯವರು.
ಸೇಡಂ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ತಾಲೂಕಿನ ಸಾಹಿತಿಗಳು ಅಭಿಮಾನಿಗಳು ತಾಲೂಕಿನ ಮಹಾಜನತೆ ಲಿಂಗಾರೆಡ್ಡಿ ಶೇರಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಲೇಖಕರು. ದಯಾನಂದ ಪಾಟೀಲ ಅಧ್ಯಕ್ಷರು, ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ...