ಸಂಸ್ಕೃತಿ ಸನ್ಮಾನ್ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಗೆ ಡಾ.ಸ್ವಾಮಿರಾವ ಕುಲಕರ್ಣಿ, ಮಹಿಪಾಲರೆಡ್ಡಿ ಮುನ್ನೂರ ಆಯ್ಕೆ
ಸಂಸ್ಕೃತಿ ಸನ್ಮಾನ್ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಗೆ ಡಾ.ಸ್ವಾಮಿರಾವ ಕುಲಕರ್ಣಿ, ಮಹಿಪಾಲರೆಡ್ಡಿ ಮುನ್ನೂರ ಆಯ್ಕೆ
ಸೇಡಂ : ಇಲ್ಲಿನ ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಕೊಡಮಾಡುವ *ಸಂಸ್ಕೃತಿ* *ಸಮ್ಮಾನ್* ಪ್ರಶಸ್ತಿಗೆ ದಾಸ ಸಾಹಿತ್ಯದ ವಿದ್ವಾಂಸರಾದ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಹಾಗೂ *ಸೀಗಿ* *ಸಾಹಿತ್ಯ* *ಪ್ರಶಸ್ತಿಗೆ* ಕ್ರಿಯಾಶೀಲ ಬರಹಗಾರ, ಲೇಖಕ-ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಜೋಶಿ ತಿಳಿಸಿದ್ದಾರೆ.
ಸಂಸ್ಕೃತಿ ಪ್ರಕಾಶನದ 35 ನೆಯ ವಾರ್ಷಿಕೋತ್ಸವ ಅಂಗವಾಗಿ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ.
ಸಂಸ್ಕೃತಿ ಪ್ರಕಾಶನದ ಬೆಳ್ಳಿ ಹಬ್ಬದ ಸಂದರ್ಭದಿಂದ ಕೊಡಲಾಗುತ್ತಿರುವ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿಯನ್ನು ಒಟ್ಟಾರೆ ಸಾಹಿತ್ಯ-ಸಂಸ್ಕೃತಿಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ನೀಡಲಾಗುತ್ತದೆ. ಡಾ. ಸ್ವಾಮಿರಾವ ಕುಲಕರ್ಣಿ ಅವರು, ದಾಸ ಸಾಹಿತ್ಯ, ಆಧುನಿಕ ಸಾಹಿತ್ಯ, ರಂಗ ಸಾಹಿತ್ಯ, ಹಾಸ್ಯ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಮತ್ತು ಸಾರಸ್ವತ ಲೋಕಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಸಂಸ್ಕೃತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಸ್ಥಾಪಕ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಸೀತಾಗೀತಾ ಸ್ಮರಣಾರ್ಥ ಸೀಗಿ ಸಾಹಿತ್ಯ ಪ್ರಶಸ್ತಿಯನ್ನು ಕಳೆದ ವರ್ಷದಿಂದ ಕೊಡಲಾಗುತ್ತಿದ್ದು ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕಲೆ, ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಸಿನಿಮಾ, ಸಾಹಿತ್ಯ ಸಂಘಟನೆ, ಪ್ರಕಾಶನ ಮೊದಲಾದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪ್ರತಿಭಾವಂತ ಲೇಖಕ ಮಹಿಪಾಲರೆಡ್ಡಿ ಮುನ್ನೂರ ಅವರಿಗೆ ನೀಡಿ ಗೌರವಿಸಲಾಗುವುದು.
ಸಂಸ್ಕೃತಿ ಸಮ್ಮಾನವನ್ನು ಈ ವರೆಗೆ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲೇಪುರಂ ಜಿ.ವೆಂಕಟೇಶ ಹಾಗೂ ದಾಸ ಸಾಹಿತ್ಯ ವಿದ್ವಾನ್ ಡಾ.ವಾಸುದೇವ ಅಗ್ನಿಹೋತ್ರಿ ಸ್ವೀಕರಿಸಿದ್ದಾರೆ.
ಕಳೆದ ವರ್ಷದಿಂದ ಕೊಡಲಾಗುತ್ತಿರುವ ಸೀಗಿ ಸಾಹಿತ್ಯ ಪ್ರಶಸ್ತಿಯನ್ನು ಸಹಸ್ರಾರು ಪುಸ್ತಕಗಳನ್ನು ಪ್ರಕಟಿಸಿರುವ
ಹಿರಿಯ ಪ್ರಕಾಶಕರಾದ ಬಸವರಾಜ ಕೊನೇಕ ಸ್ವೀಕರಿಸಿದ್ದಾರೆ.
ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು
ಸೇಡಂನಲ್ಲಿ ಡಿ.15 ರಂದು ಜರುಗುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಒಂದು ಸಾವಿರದ ಒಂದು ನೂರು ರೂಪಾಯಿಗಳ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.