ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೇ, ಮಾನಸಿಕ ಆರೋಗ್ಯಕ್ಕೂ ಮದ್ದು : ಗುರುನಾಥ ಮೂಲಗೆ
ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೇ, ಮಾನಸಿಕ ಆರೋಗ್ಯಕ್ಕೂ ಮದ್ದು : ಗುರುನಾಥ ಮೂಲಗೆ
ಬೀದರ :ಜಗತ್ತಿಗೆ ಭಾರತ ನೀಡಿದ ಉನ್ನತ ಕೊಡುಗೆಯೆಂದರೆ ಅದು ಪತಂಜಲಿ ಯೋಗ. ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಮತ್ತು ಇವೆರಡನ್ನೂ ಸಮತೋಲನದಲ್ಲಿರಿಸುವ ಪ್ರಾಚೀನ ಕಲೆಯೇ ಯೋಗ ಎಂದು ,ಯೋಗ ತರಬೇತಿದಾರ ಹಾಗೂ ನಿವೃತ್ತ ಉಪನ್ಯಾಸಕರಾದ ಶ್ರೀ ಗುರುನಾಥ ಮೂಲಗೆ ಅವರು ಹೇಳಿದರು.
ಇಂದು ಬೀದರ್ ,ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮೂರು ದಿಸವಗಳ ಯೋಗ ಶಿಬಿರದಲ್ಲಿ ಮಾತನಾಡಿದ ಅವರು ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವಾತನಿಗೆ ಯಾವುದೇ ದೈಹಿಕ ಕಾಯಿಲೆಗಳು ಬಾಧಿಸುವುದಿಲ್ಲ ಎನ್ನುವುದು ಎಷ್ಟು ಸತ್ಯವೋ, ಮಾನಸಿಕ ಆರೋಗ್ಯ ಕೂಡಾ ಸ್ಥಿರವಾಗಿರುತ್ತದೆ ಎಂಬುದು ಅಷ್ಟೇ ಸತ್ಯ. ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೇ, ಮಾನಸಿಕ ಆರೋಗ್ಯಕ್ಕೂ ಮದ್ದು. ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡುವುದರ ಮೂಲಕ ದೇಹ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಬಹುದು. ಕೋಪ, ಏಕಾಗ್ರತೆಯ ಕೊರತೆ, ಒತ್ತಡ ಮುಂತಾದ ಮಾನಸಿಕ ಸಮಸ್ಯೆಗಳಿಗೆ ದಿನನಿತ್ಯ ಯೋಗ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಿದ್ಯಾರ್ಥಿ ಜೀವನದಿಂದಲೇ ನಿತ್ಯ ಯೋಗಾಸನಗಳನ್ನು ಅಭ್ಯಾಸ ಮಾಡಿದರೆ, ದೇಹ ಮತ್ತು ಮನಸ್ಸು ಹಿಡಿತದಲ್ಲಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ನಿತ್ಯ ಯೋಗ ಅಭ್ಯಾಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಶಿಬಿರದ ನಿರ್ದೇಶಕರಾದ ರಾಜಕುಮಾರ ಸಿಂಧೆ ಮಾತನಾಡಿ ಯೋಗವು ಮಾನಸಿಕ ಆರೋಗ್ಯವನ್ನು ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ನಿಯಮಿತ ಯೋಗದ ಮೂಲಕ ವ್ಯಕ್ತಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.
ಶಿಬಿರದಲ್ಲಿ ಉಪನ್ಯಾಸಕರಾದ ಡಾ. ಸಂತೋಷಕುಮಾರ ಸಜ್ಜನ, ವೀಣಾ ಜಲಾದೆ, ಶಿಲ್ಪಾ ಹಿಪ್ಪರಗಿ, ಪಾಂಡುರಂಗ ಕುಂಬಾರ, ನೂರಪಾಶಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಾಟೀಲ ಪಾರ್ವತಿ ಸ್ವಾಗತಿಸಿದರು, ಪ್ರಿಯಾಂಕಾ ವಂದಿಸಿದರು, ಶಿವಶರಣಪ್ಪಾ ನಿರೂಪಿಸಿದರು.
ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್