ಲಿಂಗರಾಜಪ್ಪ, ತಿವಾರಿ, ದಸ್ತಿಗೆ ಗೌರವ ಡಾಕ್ಟರೇಟ್ ೧೨ ರಂದು ಗುಲಬರ್ಗಾ ವಿವಿ ಘಟಿಕೋತ್ಸವ

ಲಿಂಗರಾಜಪ್ಪ, ತಿವಾರಿ, ದಸ್ತಿಗೆ ಗೌರವ ಡಾಕ್ಟರೇಟ್ ೧೨ ರಂದು ಗುಲಬರ್ಗಾ ವಿವಿ ಘಟಿಕೋತ್ಸವ

ಲಿಂಗರಾಜಪ್ಪ, ತಿವಾರಿ, ದಸ್ತಿಗೆ ಗೌರವ ಡಾಕ್ಟರೇಟ್

೧೨ ರಂದು ಗುಲಬರ್ಗಾ ವಿವಿ ಘಟಿಕೋತ್ಸವ

 ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ೪೨ನೇ ವಾರ್ಷಿಕ ಘಟಿಕೋತ್ಸವವು ದಿ. ೧೨ ರಂದು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಲಾಗಿದೆ ಎಂದು ಗುಲಬರ್ಗಾ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಪ್ರಕಟಿಸಿದರು.

 ಗುಲಬರ್ಗಾ ವಿವಿ ಆಡಳಿತ ರಾಧಾಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ಜ್ಞಾನಗಂಗಾ ಕ್ಯಾಂಪಸ್‌ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ, ಘಟಿಕೋತ್ಸವ, ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದರು.

     ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಗುರುತರ ಸೇವೆ ಪರಿಗಣಿಸಿ ಅರ್ಚನಾ ಪ್ರದೀಪ ತಿವಾರಿ, ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನಿರಂತರ ಹೋರಾಟ ಮತ್ತು ಸಾಮಾಜಿಕ ಸೇವೆ ಸಲ್ಲಿಸಿದ ಹೋರಾಟಗಾರ ಬೀದರ ಮೂಲದ ಲಕ್ಷ್ಮಣ ದಸ್ತಿ, ಶಿಕ್ಷಣ, ಕೃಷಿ ಮತ್ತು ಕೃಷಿ ಉದ್ದಿಮೆಗಳ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಲಿಂಗರಾಜಪ್ಪ ಅಪ್ಪ ಅವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ. ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ತು, ವಿಷಯ ಪರಿಣಿತರ ಸಭೆಯ ತೀರ್ಮಾನದಂತೆ ೧೨ ಜನ ಸಾಧಕರ ಪಟ್ಟಿಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು ಎಂದು ಮಾಹಿತಿ ನೀಡಿದರು.

       ಗೋವಾದ ಡೋನಾಪೌಲಾ ಸಿಎಸ್‌ಐಆರ್, ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯ ನಿರ್ದೇಶಕ ಪ್ರೊ. ಸುನೀಲಕುಮಾರ ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

 ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯಪಾಲ ಥಾವರ್‌ಚೆಂದ ಗೆಹ್ಲೋಟ್ ಅಧ್ಯಕ್ಷತೆವಹಿಸುವರು. ಸಮಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

          ೭೬ ವಿದ್ಯಾರ್ಥಿಗಳಿಗೆ ೧೬೮ ಚಿನ್ನದ ಪದಕ

        ಈ ಬಾರಿ ೫೨ ವಿದ್ಯಾರ್ಥಿನಿಯರು, ೨೨ ವಿದ್ಯಾರ್ಥಿಗಳು ಸೇರಿ ಒಟ್ಟು ೭೪ ವಿದ್ಯಾರ್ಥಿಗಳಿಗೆ ೧೬೮ ಚಿನ್ನದ ಪದಕ, ೯ ಜನರಿಗೆ ಚಿನ್ನದ ಪದಕ ಪರಿವರ್ತಿಸಿ ನಗದು ಬಹುಮಾನ ನೀಡಲಾಗುತ್ತಿದೆ. ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಆನಂದಮ್ಮ-೧೩ ಚಿನ್ನದ ಪದಕ, ಪ್ರಾಣಿಶಾಸ್ತ್ರ ವಿಭಾಗದ ಪೂರ್ವಕ ಗದ್ವಾಲ- ೭ ಚಿನ್ನದ ಪದಕ, ಎಂಬಿಎ ಅಧ್ಯಯನ ವಿಭಾಗದ ಅಭಿಷೇಕ-೬ ಚಿನ್ನದ ಪದಕ, ಸಮಾಜಕಾರ್ಯ ವಿಭಾಗದ ಅಂಬಿಕಾ-೬ ಚಿನ್ನದ ಪದಕ, ರಾಜ್ಯಶಾಸ್ತ್ರ ವಿಭಾಗದ ಪಲ್ಲವಿ-೬ ಚಿನ್ನದ ಪದಕ, ಸಸ್ಯಶಾಸ್ತ್ರ ವಿಭಾಗದ ಆಫ್ರಿನ್ ಸುಲ್ತಾನ, ಜೀವರಸಾಯನ ಶಾಸ್ತ್ರ ವಿಭಾಗದ ವಿಷ್ಣುಕಾಂತ, ಎಂಸಿಎ ವಿಭಾಗದ ಮಲ್ಕಮ್ಮ, ಸೂಕ್ಷö್ಮಜೀವಶಾಸ್ತ್ರ ವಿಭಾಗದ ಭಾಗ್ಯ ಕ್ರಮವಾಗಿ ೫ ಚಿನ್ನದ ಪದಕ ಪಡೆದಿದ್ದಾರೆ ಎಂದು ಮೌಲ್ಯಮಾಪನ ಪ್ರೊ. ಕುಲಸಚಿವೆ ಮೇಧಾವಿನಿ ಕಟ್ಟಿ ಮಾಹಿತಿ ನೀಡಿದರು.

 ಈ ಘಟಿಕೋತ್ಸವದಲ್ಲಿ ಒಟ್ಟು ೨೯,೩೦೭ ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪಡೆಯಲಿದ್ದು, ಈ ಪೈಕಿ ೧೫,೮೬೯ ಪುರುಷ, ೧೩,೪೩೮ ಮಹಿಳೆಯರಿದ್ದಾರೆ. ವಿವಿಧ ನಿಕಾಯಗಳು ಸೇರಿ ೧೧೩ ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗುವುದು ಕಲಾ ನಿಕಾಯ-೩೮ ಪಿಎಚ್‌ಡಿ, ಸಮಾಜ ವಿಜ್ಞಾನ ನಿಕಾಯ- ೨೯ ಪಿಎಚ್‌ಡಿ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-೨೬ ಪಿಎಚ್‌ಡಿ, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯ- ೧೧ಪಿಎಚ್‌ಡಿ, ಶಿಕ್ಷಣ ನಿಕಾಯ-೦೯ ಪಿಎಚ್‌ಡಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು. ಕುಲಸಚಿವ ಪ್ರೊ. ಲಕ್ಷ್ಮಣ ರಾಜನಾಳಕರ್, ಮೌಲ್ಯಮಾಪನ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ಹಣಕಾಸು ಅಧಿಕಾರಿ ಕು. ಗಾಯಾತ್ರಿ ಇದ್ದರು.

     ಈಗಾಗಲೇ ಘಟಿಕೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಆಹಾರ, ಸಾರಿಗೆ, ಮಾಧ್ಯಮ, ವೇದಿಕೆ ಸೇರಿ ೧೬ ಉಪಸಮಿತಿ ರಚಿಸಲಾಗಿದೆ ಎಂದು ಪ್ರೋ ಲಕ್ಷ್ಮಣ ರಾಜನಳಕರ್ ತಿಳಿಸಿದರು.

  ಪ್ರೊ. ದಯಾನಂದ ಅಗಸರ್ ಮಾತನಾಡಿ, ಗುಲಬರ್ಗಾ ವಿವಿ ವ್ಯಾಪ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು ಸೇರಿ ಒಟ್ಟು ೧೫೫ ಬೋಧಕ ಹುದ್ದೆ, ೨೦೬ ಬೋಧಕೇತರ ಹುದ್ದೆಗಳ ಮಂಜೂರಾತಿಯಲ್ಲಿ ಡಿ-ಗ್ರುಪ್ ಚಾಲಕ ಹೊರತುಪಡಿಸಿ ೧೫೦ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು. ಮೀಸಲಾತಿ ರೋಸ್ಟರ್ ಬಿಂದು, ಹಣಕಾಸು ಇಲಾಖೆಯಿಂದ ಸಹಮತ ಸಿಕ್ಕಿದೆ. ಶೀಘ್ರದಲ್ಲಿ ಅಧಿಸೂಚನೆ ಹೊರಬೀಳಲಿದೆ ಎಂದರು.