ಕರ್ನಾಟಕ ಮೊದಲು – ಸ್ಥಳೀಯ ಜನರಿಗೆ ಮೊದಲು ಮನೆ: ಅಕ್ರಮ ನುಸುಳಿಗರಿಗೆ ಆಶ್ರಯ ಒಪ್ಪಲಾಗದು – ಸಿದ್ದಲಿಂಗ ಸ್ವಾಮಿ, ಶಿವಸೇನಾ ರಾಜ್ಯ ಅಧ್ಯಕ್ಷರು
ಕರ್ನಾಟಕ ಮೊದಲು – ಸ್ಥಳೀಯ ಜನರಿಗೆ ಮೊದಲು ಮನೆ: ಅಕ್ರಮ ನುಸುಳಿಗರಿಗೆ ಆಶ್ರಯ ಒಪ್ಪಲಾಗದು– ಸಿದ್ದಲಿಂಗ ಸ್ವಾಮಿ, ಶಿವಸೇನಾ ರಾಜ್ಯ ಅಧ್ಯಕ್ಷರು
ಕಲಬುರಗಿ/ಬೆಂಗಳೂರು: ಡಿಸೆಂಬರ್ 31ರಂದು ಬೆಂಗಳೂರಿನಲ್ಲಿ ಹೊಸವರ್ಷ ಆಚರಣೆಗೆ ಅನುಮತಿ ನೀಡುವ ಮೂಲಕ ಸರ್ಕಾರ ಯುವತಿಯರ ಮಾನಕ್ಕೆ ಧಕ್ಕೆ ಉಂಟಾಗುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿ, ಸಾವಿರಾರು ಕೋಟಿ ಹಣ ಸಂಗ್ರಹಿಸುವತ್ತ ಗಮನಹರಿಸಿದೆ. ಆದರೆ ಅದೇ ಸರ್ಕಾರ ಸಾಮಾನ್ಯ ಜನರ, ಕಾರ್ಮಿಕರ ಮತ್ತು ಸ್ಥಳೀಯರ ಬದುಕಿನ ಸಮಸ್ಯೆಗಳತ್ತ ಕಣ್ಣುಮುಚ್ಚಿದೆ ಎಂದು ಶಿವಸೇನಾ ರಾಜ್ಯ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
2017ರಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆಗೆ ಪ್ರಚೋದನೆ ನೀಡಿದರೆಂದು ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಆಗಿನ ಕಾಂಗ್ರೆಸ್ ಸರ್ಕಾರ, MIM, SDPI ಸೇರಿದಂತೆ ಕೆಲ ಸಂಘಟನೆಗಳ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಏಕಪಕ್ಷೀಯವಾಗಿ ವರ್ತಿಸಿತು. ಜೀವರ್ಗಿ ತಾಲೂಕಿನ ಕೆಲ್ಲೂರ ಬಳಿ ನಡೆದ ಕಲ್ಲು ತೂರಾಟ ಮತ್ತು ಲಾಠಿ ಚಾರ್ಜ್ ವೇಳೆ ಅಂದಿನ ಐಜಿಪಿ ಅಲೋಕ ಕುಮಾರ್ ಅವರು ನಮ್ಮ ಮಠಕ್ಕೆ ಬಂದು ಹಿರಿಯರನ್ನು ಮಾಧ್ಯಮಗಳ ಮುಂದೆ ಅವಮಾನಿಸಿ, ಮಠದ ಕಟ್ಟಡದ ಬಗ್ಗೆ ಹಗುರವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯ ಎಂದು ಅವರು ಹೇಳಿದರು.
ಘಟನೆಯ ಮೂಲ ಕಾರಣನಾಗಿದ್ದ ಯುವಕನ ಮನೆಗೆ ಐಜಿಪಿ ಭೇಟಿ ನೀಡದೇ, ನಿರಪರಾಧಿಗಳನ್ನು ಗುರಿಯಾಗಿಸಿಕೊಂಡರು. ನಂತರದ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತ್ತಿಗೆ ಒಳಗಾದರು. ನ್ಯಾಯಾಲಯವು ನಮ್ಮನ್ನು ಸಂಪೂರ್ಣವಾಗಿ ಆರೋಪಮುಕ್ತಗೊಳಿಸಿ, ನಿಂದಕರಿಗೆ ತಕ್ಕ ಉತ್ತರ ನೀಡಿರುವುದು ಸತ್ಯಕ್ಕೆ ಜಯವಾಗಿದೆ ಎಂದು ಸಿದ್ದಲಿಂಗ ಸ್ವಾಮಿ ತಿಳಿಸಿದರು.
ಬೆಂಗಳೂರು ನಗರವನ್ನು ಹೊರಗಿನವರು ಅಲ್ಲ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಕಾರ್ಮಿಕರು ತಮ್ಮ ಬೆವರಿನಿಂದ ಕಟ್ಟಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಅದೇ ಕಾರ್ಮಿಕರು ಕುಡಿಯುವ ನೀರು, ಶಾಶ್ವತ ಮನೆ, ಮೂಲಭೂತ ಸೌಲಭ್ಯಗಳಿಲ್ಲದೆ ಅತೀ ದುಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇದು ರಾಜ್ಯದ ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ ಎಂದರು.
ಇಂತಹ ಸಂದರ್ಭದಲ್ಲಿ, ಕೇರಳ ಸರ್ಕಾರದ ಒತ್ತಡಕ್ಕೆ ಮಣಿದು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ನುಸುಳಿಗರು ಆಶ್ರಯ ನೀಡುವ ಕುರಿತು ಚರ್ಚೆ ನಡೆಯುತ್ತಿರುವುದು ಅತ್ಯಂತ ಆಘಾತಕಾರಿ ಮತ್ತು ಅಸ್ವೀಕಾರಾರ್ಹ. ಕರ್ನಾಟಕ ನಿರ್ಮಾಣದಲ್ಲಿ ಬಾಂಗ್ಲಾದೇಶ ಕೊಡುಗೆ ಏನು? ರಾಜ್ಯದ ಅಭಿವೃದ್ಧಿಗೆ ಅವರು ನೀಡಿದ ಸೇವೆ ಯಾವುದು? ಕಾನೂನುಬಾಹಿರವಾಗಿ ದೇಶಕ್ಕೆ ನುಸುಳಿದವರಿಗೆ ಆಶ್ರಯ ನೀಡುವುದು ಯಾವ ಸಂವಿಧಾನಾತ್ಮಕ ತತ್ವದ ಮೇಲೆ ಎಂದು ಅವರು ಪ್ರಶ್ನಿಸಿದರು.
ಕೋಗಿಲು ಸೇರಿದಂತೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವವರಿಗೆ ಯಾವುದೇ ರೀತಿಯ ಆಶ್ರಯ ನೀಡಬಾರದು. ಆ ಭೂಮಿಯನ್ನು ನಿಜವಾದ ಹಕ್ಕುದಾರರಾದ ಆಶ್ರಯವಿಲ್ಲದ ಕರ್ನಾಟಕದ ಜನರಿಗೆ ಶಾಶ್ವತ ವಸತಿ ಯೋಜನೆಗಳಿಗೆ ಬಳಸಬೇಕು. ಇದು ರಾಜಕೀಯ ವಿಷಯವಲ್ಲ; ಇದು ನ್ಯಾಯ, ಸಂವಿಧಾನ, ರಾಜ್ಯದ ಗೌರವ ಮತ್ತು ಸ್ಥಳೀಯ ಜನರ ಬದುಕಿನ ಪ್ರಶ್ನೆಯಾಗಿದೆ.
ಕರ್ನಾಟಕ ಮೊದಲು. ಕರ್ನಾಟಕದ ಜನರಿಗೆ ಮೊದಲು ಮನೆ. ಅಕ್ರಮ ನುಸುಳಿಗರಿಗೆಲ್ಲ ಯಾವುದೇ ರಿಯಾಯಿತಿ ಇಲ್ಲ ಎಂದು ಸಿದ್ದಲಿಂಗ ಸ್ವಾಮಿ ಸ್ಪಷ್ಟವಾಗಿ ಹೇಳಿದರು.
