ಮಳೆ ಮತ್ತು ಪ್ರವಾಹದಿಂದಾದ ಹಾನಿ ಬಗ್ಗೆ ನಿಖರ ಮಾಹಿತಿ ಕೊಡಿ -ಬಿ.ಫೌಜಿಯಾ ತರನ್ನುಮ್
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ:
ಮಳೆ ಮತ್ತು ಪ್ರವಾಹದಿಂದಾದ ಹಾನಿ ಬಗ್ಗೆ ನಿಖರ ಮಾಹಿತಿ ಕೊಡಿ -ಬಿ.ಫೌಜಿಯಾ ತರನ್ನುಮ್
ಕಲಬುರಗಿ: ಕಳೆದ ಜೂನ್ 1 ರಿಂದ ಇಲ್ಲಿಯವರೆಗೆ ಮಳೆ ಮತ್ತು ಇತ್ತೀಚಿನ ಭೀಮಾ ನದಿ ಪ್ರವಾಹದಿಂದಾದ ಹಾನಿಯಾದ ಬಗ್ಗೆ ನಿಖರವಾದ ಮಾಹಿತಿ ಕೂಡಲೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ, ಸೇತುವೆ, ಶಾಲಾ-ಅಂಗನವಾಡಿ ಕಟ್ಟಡ, ವಿದ್ಯುತ್ ಕಂಬ, ಕೆರೆ ಹಾನಿ ಬಗ್ಗೆ ಕೂಡಲೆ ವರದಿ ನೀಡಬೇಕು ಎಂದರು.
ಲೋಕೋಪಯೋಗಿ, ಪಂಚಾಯತ್ ರಾಜ್, ಜೆಸ್ಕಾಂ, ಕೆ.ಎನ್.ಎನ್.ಎಲ್, ಡಿ.ಡಿ.ಪಿ.ಐ ಅವರು ತಮ್ಮ ಇಲಾಖಾ ವ್ಯಾಪ್ತಿಯಲ್ಲಿನ ಹಾನಿಯಾದ ಬಗ್ಗೆ ಮಾಹಿತಿ ನೀಡಿದರು. ತಾಲೂಕಾದಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗವಹಿಸಿದ ತಹಶೀಲ್ದಾರರು ತಮ್ಮ ತಾಲೂಕಾದಲ್ಲಿ ಹಾನಿಯಾದ ಬಗ್ಗೆ ಮಾಹಿತಿ ನೀಡಿದರು.
ಮಳೆಯಿಂದ ಮನೆಗಳುವಸಣ್ಣ ಪ್ರಮಾಣದ ಹಾನಿಯಾಗಿದಲ್ಲಿ ತಕ್ಷಣವೇ ಮನೆ ಮಾಲೀಕರಿಗೆ ಆಗಸ್ಟ್ 8ರ ರಾಜ್ಯ ಸರ್ಕಾರದ ಸುತ್ತೋಲೆಯಂತೆ ಪರಿಹಾರ ಹಣ ಕೊಡಬೇಕು. ಹೆಚ್ಚಿನ ಪ್ರಮಾಣದ ಹಾನಿಯಾದಲ್ಲಿ ಪಕ್ಕಾ ಮನೆ ನಿರ್ಮಾಣಕ್ಕೆ ರಾಜೀವ ಗಾಂಧಿ ಪೋರ್ಟಲ್ ನಲ್ಲಿ ವಿವರ ದಾಖಲಿಸಬೇಕು ಎಂದರು.
ಎಫ್.ಆರ್.ಎಲ್. ನಂತೆ ನೀರು ಹರಿಬಿಡಬೇಕು
ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲೆಯ ಬ್ರಿಡ್ಜ್ ಕಂ ಬ್ಯಾರೇಜುಗಳಿಗೆ ನೀರಿನ ಒಳಹರಿವು ಆಧರಿಸಿ ಮತ್ತು ಎಫ್.ಆರ್.ಎಲ್ ನಂತೆ ನೀರು ಸಂಗ್ರಹಿಸಿಟ್ಟುಕೊಂಡ ನಂತರವೇ ಕೆಳ ಹಂತದ ಪ್ರದೇಶಗಳಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಬೇಕು. ಅವೈಜ್ಞಾನಿಕವಾಗಿ ಅನಗತ್ಯ ನೀರು ನದಿಗೆ ಬಿಡಬಾರದು. ಮುಂದೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತೆ. ಇಂಜಿನೀಯರ್ ಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಪಮಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಪ್ರಭುರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಾ ಕೇಂದ್ರದಿಂದ ತಹಶೀಲ್ದಾರರು ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.