ಸಂಪಾದಕೀಯ| ಕರ್ನಾಟಕದ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ - ಜೆಡಿಎಸ್ ಗೆಲುವಿನ ಲೆಕ್ಕಾಚಾರ ಕುರಿತು ಅವಲೋಕನ

ಸಂಪಾದಕೀಯ|  ಕರ್ನಾಟಕದ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ - ಜೆಡಿಎಸ್ ಗೆಲುವಿನ ಲೆಕ್ಕಾಚಾರ ಕುರಿತು ಅವಲೋಕನ

ಕರ್ನಾಟಕದಲ್ಲಿ ನಡೆಯುತ್ತಿರುವ ಸಂಡೂರು ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಮತಕ್ಷೇತ್ರಗಳ ಉಪ ಚುನಾವಣೆಯು ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ ಗೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, 

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಸಚಿವ ಸಂತೋಷ್ ಲಾಡ್, ಸಚಿವ ಜಮೀರ್ ಅಹಮದ್ ಖಾನ್, ಮಾಜಿ ಸಚಿವ ಜಿ ಜನಾರ್ದನ್ ರೆಡ್ಡಿ, ವಿಧಾನ ಪರಿಷತ್ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ರಾಜಕಾರಣಿಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. 

ಈ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಶತಾಯಗತಾಯ ಗೆಲ್ಲಿಸಿಕೊಂಡು ಬರಬೇಕೆಂಬ ಉತ್ಸಾಹದಲ್ಲಿದ್ದಾರೆ.

  ಈ ಚುನಾವಣೆಯು ಪ್ರಮುಖ ನಾಯಕರುಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಉಪಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿ ಚನ್ನಪಟ್ಟಣದಲ್ಲಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಪುತ್ರ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಚನ್ನಪಟ್ಟಣದಲ್ಲಿ ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

 ಹಾಗೆಯೇ ಸಂಡೂರಿನಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಸಂಸದ ಈ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರು ಕಣದಲ್ಲಿದ್ದಾರೆ. ಇನ್ನು ಬಿಜೆಪಿಯ ಬಂಗಾರು ಹನುಮಂತು ಅವರನ್ನು ಗೆಲ್ಲಿಸಲೇಬೇಕೆಂದು ಮಾಜಿ ಸಚಿವ ಜಿ ಜನಾರ್ದನ್ ರೆಡ್ಡಿ ತಮ್ಮ ಪ್ರತಿಷ್ಠೆಯನ್ನು ಪಣಕ್ಕೆ ಇಟ್ಟಿದ್ದಾರೆ. 

ಆದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಬಿಗಿ ಹಿಡಿತವನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಇನ್ನೂ ಮುಸ್ಲಿಂ ಬಾಹುಳ್ಯದ ಕ್ಷೇತ್ರವಾಗಿರುವ ಶಿಗ್ಗಾಂವಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಬಂಡಾಯ ಶಮನದ ನಡುವೆಯೂ ಒಳೆಟೀನ ಭೀತಿಯನ್ನು ಎದುರಿಸುತ್ತಿದೆ.

ಇಲ್ಲಿಯ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಪಠಾಣ್ ಖಾನ್ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಉದ್ಯಮಿ ಭರತ್ ಬೊಮ್ಮಾಯಿ ಅವರಿಗೆ ನೇರ ಸ್ಪರ್ಧೆಯನ್ನು ಒಡ್ಡಿದ್ದಾರೆ. 

ಇಲ್ಲಿ ಬಸವರಾಜ್ ಬೊಮ್ಮಾಯಿ ಅವರು ಈ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿ ಜನರಿಗೆ ಅನುಕೂಲ ಕಲ್ಪಿಸಿರುವುದು ಅವರಿಗೆ ಸಕಾರಾತ್ಮಕ ಅಂಶವಾಗಿದೆ ಗೋಚರಿಸುತ್ತಿದೆ ಎನ್ನಬಹುದು.

ಈ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮೈ ಬಣ್ಣದ ಕುರಿತು ಆಡಿರುವ ಮಾತುಗಳು ಕಾಂಗ್ರೆಸ್ ಪಕ್ಷಕ್ಕೆ ಎಷ್ಟರಮಟ್ಟಿಗೆ ನಷ್ಟ ಉಂಟುಮಾಡಲಿದೆ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.

ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಎಲ್ಲ ಸಚಿವರಿಗೆ ಜವಾಬ್ದಾರಿಯನ್ನು ನೀಡಿದ್ದು, ಒಂದು ವೇಳೆ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದರೆ ಚುನಾವಣೆಯ ಉಸ್ತುವಾರಿ ಹೊತ್ತಿರುವ ಸಚಿವರ ಮಂತ್ರಿಗಿರಿಗೆ ಕೊಕ್ಕೆ ಬೀಳಲಿದೆ ಎಂಬ ಸಂದೇಶ ಪರೋಕ್ಷವಾಗಿ ಈಗಾಗಲೇ ರವಾನಿಸಿದ್ದಾರೆ.

ಕರ್ನಾಟಕದ ಈ ಮೂರು ಉಪ ಚುನಾವಣೆಗಳನ್ನು ಕುಲಂಕಷವಾಗಿ ಅವಲೋಕಿಸಿದಾಗ ಮೂರು ಪಕ್ಷಗಳು ಸಮಬಲ ಸಾಧಿಸುವ ಸ್ಪಷ್ಟ ಲಕ್ಷಣಗಳು ಗೋಚರಿಸಿದ್ದು, ಸಂಡೂರಿನಲ್ಲಿ ಕಾಂಗ್ರೆಸ್, ಶಿಗ್ಗಾಂವಿ ಯಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷ ಮುನ್ನಡೆ ಸಾಧಿಸುವುದು ಖಚಿತ ಎನ್ನಲಾಗುತ್ತಿದೆ. 

ಆದರೆ ಚುನಾವಣೆಯ ಕೊನೆ ಕ್ಷಣದಲ್ಲಿ ಮತದಾರ ಯಾರಿಗೆ ಜೈಕಾರ ಹಾಕಲಿದ್ದಾನೆ ಎಂಬುದು ನವೆಂಬರ್ 23 ರ ಫಲಿತಾಂಶ ಖಚಿತಪಡಿಸಲಿದೆ.

-ಪ್ರೊ| ಯಶವಂತರಾಯ ಅಷ್ಠಗಿ

ಉಪ ಸಂಪಾದಕರು, ಕಲ್ಯಾಣ ಕಹಳೆ ಪತ್ರಿಕೆ, ಕಲಬುರಗಿ