ಶಾಂತಾ ಬಾಬು ಹೊನ್ನಾನಾಯಕ ದಂಪತಿಗಳ ಆದರ್ಶ ಜೀವನಕೆ ಐವತ್ತರ ಸಂಭ್ರಮ

ಶಾಂತಾ ಬಾಬು ಹೊನ್ನಾನಾಯಕ ದಂಪತಿಗಳ ಆದರ್ಶ ಜೀವನಕೆ ಐವತ್ತರ ಸಂಭ್ರಮ

 ಶಾಂತಾ ಬಾಬು ಹೊನ್ನಾನಾಯಕ ದಂಪತಿಗಳ ಆದರ್ಶ ಜೀವನಕೆ ಐವತ್ತರ ಸಂಭ್ರಮ

ಕಲ್ಯಾಣ ಕರ್ನಾಟಕ ಪ್ರದೇಶದ ರಾಜಕೀಯ ಕ್ಷೇತ್ರದಲ್ಲಿ ಹಲವರು ಮುಂಚೂಣಿಯಲ್ಲಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಲಂಬಾಣಿ ಜನಾಂಗವು ಒಂದು, ಸರಳ, ಸಜ್ಜನಿಕೆಯ ವ್ಯಕ್ತಿ ಶಕ್ತಿ ಶ್ರೀ ಬಾಬು ಹೊನ್ನ ನಾಯಕ. ಇವರು ಮೂಲತಃ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಎಕಲೂರ ತಾಂಡಾ (ಈಗಿನ ಹಾಮುನಗರ) ದಲ್ಲಿ ಕೃಷಿಕ ಕುಟುಂಬದ ಶ್ರೀಮತಿ ಪ್ರೇಮಲಾಬಾಯಿ ಮತ್ತು ಶ್ರೀ ಹೊನ್ನಾ ರಾಮಚಂದ್ರ ನಾಯಕ ಅವರ ಜೇಷ್ಠ ಸುಪುತ್ರರಾಗಿ ದಿನಾಂಕ 14-12-1955 ರಂದು ಜನಿಸಿದರು.

ಶಿಕ್ಷಣ

ಇವರು ಸರಕಾರಿ ಪ್ರಾಥಮಿಕ ಶಾಲೆ ಎಕಲೂರ ತಾಂಡಾ ಮತ್ತು ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಮುಡಬಿ ಹಾಗೂ ಬಸವಕಲ್ಯಾಣ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಉತ್ತೀರ್ಣರಾಗಿ, ಮುಂದೆ ಎಸ್.ಎಸ್. ಖೂಬಾ ಬಸವೇಶ್ವರ ಮಹಾವಿದ್ಯಾಲಯ, ಬಸವಕಲ್ಯಾಣದಲ್ಲಿ ಪಿ.ಯು.ಸಿ. ಶಿಕ್ಷಣ ಪಡೆಯುತ್ತಿರುವಾಗಲೇ ಕಮಲಾಪುರದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರ (ಬಿ.ಟಿ.ಐ) ದಲ್ಲಿ ಶಿಕ್ಷಕರ ತರಬೇತಿ ಪಡೆದಿರುತ್ತಾರೆ.

ವೃತ್ತಿ ಜೀವನ :

 ದಿನಾಂಕ 26-11-1977 ರಂದು ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ, ಮರಕುಂದಾ, ತಾ.ಜಿ, ಬೀದರದಲ್ಲಿ ಶಿಕ್ಷಕರಾಗಿ ಸೇವೆಗೆ ಹಾಜರಾಗಿ ಸೇವೆ ಸಲ್ಲಿಸಿ, ಭಾಲ್ಕಿ ತಾಲೂಕಿನ ಹರನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಬಸವಕಲ್ಯಾಣ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ, ಮುಡಬಿ ವಾಡಿಯಲ್ಲಿ, ಬಸವಕಲ್ಯಾಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ದಿನಾಂಕ 01-11-1986 ರಂದು ತಮ್ಮ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಶಾಸಕರು ಮತ್ತು ಮಾಜಿ ಸಚಿವರಾದ ಶ್ರೀ ಬಸವರಾಜ ಪಾಟೀಲ ಆಟ್ಟೂರರವರ ನೇತೃತ್ವದಲ್ಲಿ ರಾಜಕೀಯ ಪ್ರವೇಶ ಮಾಡಿದರು.

ಶಿಕ್ಷಣ ಸಂಸ್ಥೆ ಸ್ಥಾಪನೆ :

 ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಗ್ರಾಮೀಣ ಪ್ರದೇಶದ ಜನರಿಗಾಗಿ 1987 ರಲ್ಲಿ ಹೊನ್ನಾನಾಯಕ ಜನತಾ ಎಜ್ಯುಕೇಷನ್ ಸೊಸೈಟಿ, ಬಸವಕಲ್ಯಾಣ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. 1987-88ನೇ ಸಾಲಿನಿಂದ ಕನ್ನಡ ಮತ್ತು ಉರ್ದು ಮಾಧ್ಯಮಗಳಲ್ಲಿ ಎರಡು ಪೂರ್ವ ಪ್ರಾಥಮಿಕ ಶಾಲೆ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಮೂರು ಪ್ರಾಥಮಿಕ ಶಾಲೆಗಳು, ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಎರಡು ಹಿರಿಯ ಪ್ರಾಥಮಿಕ ಶಾಲೆಗಳು, ಕನ್ನಡ ಮತ್ತು ಮರಾತಿ ಮಾಧ್ಯಮಗಳಲ್ಲಿ ಐದು ಪ್ರೌಢ ಶಾಲೆಗಳು, ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ಒಂದು ಪದವಿ ಪೂರ್ವ ಕಾಲೇಜು, ಕಲಾ ಮತ್ತು ವಾಣಿಜ್ಯ ವಿಭಾಗಗಳ ಒಂದು ಪಡೆಎ ಬಿ.ಎ., ಬಿ.ಕಾಂ. ಮಹಾವಿದ್ಯಾಲಯ, ಫಿಟ್ಟರ್, ಎಲೆಕ್ನಿಷಿಯನ್, ಡೀಸೆಲ್ ಮೆಕ್ಯಾನಿಕ್ ಕೋರ್ಸ್ ಹೊಂದಿದ ಒಂದು ಕೈಗಾರಿಕಾ ತರಬೇತಿ ಕೇಂದ್ರ ಕಾಲೇಜುಗಳನ್ನು ಸರ್ಕಾರದಿಂದ ಮಾನ್ಯತೆ ಪಡೆದು ಮೈಸಲಗಾ, ಸಸ್ತಾಪುರ, ಬೇಲೂರು, ಡಾವರಗಾಂವ್ ಗ್ರಾಮಗಳಲ್ಲಿ ಮತ್ತು ಬಸವಕಲ್ಯಾಣ ನಗರದಲ್ಲಿ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ಹಲವು ಬಡ ಕುಟುಂಬಗಳಿಗೆ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊಟ್ಟು ಜೀವನ ನಿರ್ವಹಣೆಗೆ ಆಸರೆಯಾಗಿದ್ದಾರೆ.

ರಾಜಕೀಯ ರಂಗ : 

ಅಂದಿನ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಸಚಿವರಾದ ಸನ್ಮಾನ್ಯ ಶ್ರೀ ಬಸವರಾಜ ಪಾಟೀಲ ಆಟ್ಟೂರ್ ಅವರ ಒತ್ತಾಸೆಯ ಮೇರೆಗೆ 1986 ರಲ್ಲಿ ಬೀದರ ಜಿಲ್ಲಾ ಪರಿಷತ್ ಚುನಾವಣೆಗೆ ಮುಡಬಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದಾಗ ಕೇವಲ 52 ಮತಗಳಿಂದ ಪರಾಭವ ಹೊಂದಿದರು. ತಾಲೂಕು ಜನತಾಪಕ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಮಾಡಿದರು. ಶ್ರೀ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿರುವಾಗ ಬಸವಕಲ್ಯಾಣ ಕಂದಾಯ ಉಪ ವಿಭಾಗದಲ್ಲಿ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಸರಕಾರದ ನಾಮನಿರ್ದೇಶನ ಹೊಂದಿ ನ್ಯಾಯದ ಮಾರ್ಗದಲ್ಲಿ ಕಾರ್ಯ ನಿರ್ವಹಿಸಿ ಜನ ಮೆಚ್ಚುಗೆ ಪಡೆದಿರುತ್ತಾರೆ. 1995 ರಲ್ಲಿ ಬಸವಕಲ್ಯಾಣ ತಾಲೂಕಾ ಪಂಚಾಯತ್ ಚುನಾವಣೆಯಲ್ಲಿ ಎಕಲೂರು ಮೀಸಲು ಕ್ಷೇತ್ರದಿಂದ ಜನತಾ ದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗಿ 1995-2000 ಅವಧಿಯಲ್ಲಿ ತಾಲೂಕು ಪಂಚಾಯತ ಸದಸ್ಯರಾಗಿ 20 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಜನಪರ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಿದರು. ಶ್ರೀ ಜೆ.ಎಚ್.ಪಟೇಲ್ ಮುಖ್ಯಮಂತ್ರಿಗಳಾಗಿರುವಾಗ ಕೆ.ಎಸ್.ಆರ್.ಟಿ.ಸಿ. ಬೆಂಗಳೂರು ಕೇಂದ್ರ ಸ್ಥಾನದ ಅಧಿಕಾರೇತರ ನಿರ್ದೇಶಕರಾಗಿ, ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಇಲಾಖೆಯ ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಿರುತ್ತಾರೆ. ಬೀದರ ಜಿಲ್ಲಾ ಜನತಾದಳ ಜಿಲ್ಲಾಧ್ಯಕ್ಷರಾಗಿ ಸುಮಾರು ಮೂರು ವರ್ಷಗಳ ಕಾಲ ಪಕ್ಷದ ಪ್ರಮುಖ ಮುಖಂಡರ ಮತ್ತು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಇದ್ದು, ಪಕ್ಷ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಶ್ರೀ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳಾಗಿರುವಾಗ ಎಕಲೂರು ತಾಂಡಾವನ್ನು ಹಾಮುನಗರ ಕಂದಾಯ ಗ್ರಾಮವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಜನತಾದಳ ಪಕ್ಷದ ಸಂಘಟನೆ ಉಸ್ತುವಾರಿ ವೀಕ್ಷಕರಾಗಿ ಇಂದಿನ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರೊಂದಿಗೆ 1998ರಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹುಲಸೂರು ವಿಧಾನಸಭೆ ಮತಕ್ಷೇತ್ರ, ಕಲಬುರಗಿ ಗ್ರಾಮೀಣ ವಿಧಾನಸಭೆ ಮತಕ್ಷೇತ್ರದಿಂದ, ಬೀದರ ಮತ್ತು ಗುಲಬರ್ಗಾ ಲೋಕಸಭಾ ಕ್ಷೇತ್ರಗಳಿಂದ ಚುನಾವಣೆಗಳಿಗೆ ಸ್ಪರ್ಧಿಸಿ ಪರಾಭವಗೊಂಡಿರುವ ಇವರು ಸೋಲಿನಿಂದ ಧೃತಿಗೆಡದೇ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುತ್ತಾರೆ.

ಸಮಾಜ ಸೇವೆ : 

ಹೊನ್ನಾನಾಯಕ ಅವರು ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡ ಅಪರೂಪದ ಜೀವಿ, ಎಕಲೂರು ತಾಂಡಾವನ್ನು ಹಾಮುನಗರ ಕಂದಾಯ ಗ್ರಾಮ ಮಾಡುವಲ್ಲಿ ಪಾತ್ರವಹಿಸಿರುವ ಇವರು ತಮ್ಮ ಹುಟ್ಟೂರಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯವನ್ನು ಪಡೆಯುವಲ್ಲಿ ಯಶಸ್ವಿಯಾದವರು, ಕಲಾ ಅಭಿಮಾನಿಯಾಗಿರುವ ಇವರು ಹಲವು ಸಾಮಾಜಿಕ ನಾಟಕಗಳಲ್ಲಿ ಪ್ರಮುಖ ಪಾತ್ರವಹಿಸಿ ಉತ್ತಮ ಅಭಿನಯವನ್ನು ಪ್ರದರ್ಶಿಸಿದವರು. ಅಪಾರ ಪುಸ್ತಕ ಓದಿದ ಪುಸ್ತಕ ಪ್ರೇಮಿ, ಸಾಂಸ್ಕೃತಿಕವಾಗಿಯೂ ಮುಂದೆ ಬಂದವರು. ಎಲ್ಲ ಜನ ಸಮುದಾಯದವರ ಜೊತೆಗಿನ ಅನ್ನೋ ಸಂಬಂಧ ಹೊಂದಿರುವ ಇವರು ಅಜಾತಶತ್ರು,

ಸುವರ್ಣ ದಾಂಪತ್ಯ :

 ಶ್ರೀ ಬಾಬು ಹೊನ್ನಾನಾಯಕ ಅವರು 13-02-1976 ರಂದು ಎಕಲೂರ ತಾಂಡಾದ ಶ್ರೀಮತಿ ರಮಕಾಬಾಯಿ ಮತ್ತು ಶ್ರೀ ಗೋಪಾದಾಮಾ ಚವ್ಹಾಣ ಅವರ ಐದು ಜನ ಗಂಡು ಮಕ್ಕಳ ಜೊತೆಗೆ ಏಕೈಕ ಸುಪುತ್ರಿಯಾಗಿರುವ ಶಾಂತಾಬಾಯಿ ಅವರೊಂದಿಗೆ ವಿವಾಹವಾದರು. ಅಂದಿನಿಂದ ಇಂದಿನವರೆಗೂ ಸತಿ-ಪತಿಗಳು ಒಂದಾಗಿ ನಡೆದು, ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸಿ: ಅವರ ಕುಟುಂಬದ ಏಳಿಗೆಗೆ ಪ್ರಮುಖ ಪಾತ್ರವಹಿಸಿದವರು. 

ಇವರಿಗೆ‌ ವನಿತಾ ಹಿರಿಯ ಮಗಳು,ಪತಿ ಧನರಾಜ ಚವ್ಹಾಣ,ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು. ಇವರಿಗೆ ಜಗದೀಶ ಬಿ.ಇ.ಸಿವಿಲ್, ಕೀರ್ತಿ ಬಿ.ಇ. ಶ್ರವಣಕುಮಾರ ಎಂ.ಬಿ.ಎಸ್

ಮೂರು ಜನ ಮಕ್ಕಳು. ಮಗ ಡಾ.ಸಂತೋಷ ನಾಯಕ ಆಯುರ್ವೇದಿಕ್ ಡಾಕ್ಟರ್ ಇವರಿಗೆ ಪುನೀತ್ ಕಾರ,ಸನೈ,ತನುಜಾ ಮಕ್ಕಳು. ಲಲಿತಾ ಮಗಳಿಗೆ ಭರತಲಾಲ ಜಾಧವ್ ಅವರಿಗೆ‌ಕೊಟ್ಟಿದ್ದಾರೆ.ಇವರಿಗೆ ಸಂಯೋಗಿತಾ,ಸಂದರ್ಶನ,ಹರ್ಷವರ್ಧನ ಮೂವರು ಬಿ.ಇ.ಸಿವಿಲ್ ಇಂಜಿನಿಯರ್, ಆನಂದ ಮಗ ಗುತ್ತಿಗೆದಾರರಾಗಿ ಸೇವೆ,ಸೊಸೆ ಪ್ರವೀಣಾ ಇವರಿಗೆ ರಿಮಾಶ್ರೀ ಎಂಟೆಕ್,ದೊರೆಸ್ವಾಮಿ, ಹೇಮಾಶ್ರೀ,ಯೋಗೇಶ

ನಾಲ್ಕು ಜನ ಮಕ್ಕಳು. ಹೀಗೆ ತುಂಬು ಸಂಸಾರ,ಮನೆ- ಪತಿ ಸೇವೆ ಮಾಡುತ್ತ ಶ್ರೀಮತಿ ಶಾಂತಾಬಾಯಿ ಹೆಗಲಿಗೆ ಹೆಗಲಾಗಿ ಮನೆಯ ಜವಾಬ್ದಾರಿ ಹೊತ್ತವರು.ಬಂಧು- ಬಳಗ ಎಲ್ಲರನ್ನೂ ನೋಡಿಕೊಂಡು ಹೋಗುತ್ತಿದ್ದಾರೆ. ಹೊನ್ನಾನಾಯಕ ಅವರು ಸಮಾಜ- ರಾಜಕೀಯ ಸೇವೆ ತಲ್ಲೀನರಾದಾಗ ಇಡಿ ಮನೆ,ಮಕ್ಕಳ ಎಲ್ಲ ಜವಾಬ್ದಾರಿ ಹೊಂದಿದ್ದಲ್ಲದೇ, ಪತಿಯ ಕಾರ್ಯಗಳಿಗೆ ಬೆಂಬಲ ನಿಂತವರು.ಸದಾ ಅವರ ಏಳ್ಗೆ ಬಯಸಿದವರು.ಕಷ್ಟ - ಸುಖ ಗಳಲ್ಲಿ ಸಮಪಾಲಾಗಿ ಸ್ವೀಕರಿಸಿ, ಅವರ ಪ್ರತಿ ಕಾರ್ಯಕ್ಕೆ ಪ್ರೇರಣೆ ನೀಡಿ.ಹೊನ್ನಾನಾಯಕ ಅವರ ಎಲ್ಲಾ ಕಾರ್ಯ ಗಳಿಗೆ ಬೆನ್ನ ಹಿಂದಿನ ಬೆಳಕಾದವರು.ಇಂತಹ ತುಂಬು ದಾಂಪತ್ಯ ಹೊತ್ತ ಅವರ‌ ಬದುಕು ಆದರ್ಶ. 

ಶ್ರೀಮತಿ ಶಾಂತಾಬಾಯಿ ಅವರು, ತುಂಬು ಕುಟುಂಬ, ಸಮಾಜ, ಬಂಧು ಬಾಂಧವರು ಅಪಾರ ಜನಪ್ರಿಯತೆ ಹೊಂದಿರುವ ಇವರು 'ಸತಿ-ಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎನ್ನುವ ಹಾಗೆ ಐವತ್ತು ವಸಂತ ಕಂಡವರು, ಇವರು ದಿನಾಂಕ 13-02-2026 ರಂದು ವಿವಾಹ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿದ್ದಾರೆ.

ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಡಾ. ಮಲ್ಲಿಕಾರ್ಜುನ ಖರ್ಗೇಜಿಯವರು, ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ಅವರು ಕೆಲಬುರಗಿ ಮತ್ತು ಬೀದರ ಜಿಲ್ಲೆಯ ಸನ್ಮಾನ್ಯ ಸಚಿವರುಗಳು, ಶಾಸಕರುಗಳು, ಲೋಕಸಭೆ ಸದಸ್ಯರುಗಳು, ಮುಖಂಡರು ಶ್ರೀ ಬಾಬು ಹೊನ್ನಾನಾಯಕರವರ ಪಕ್ಷ ನಿಷ್ಠೆಯನ್ನು ಪರಿಗಣಿಸಿ ಕರ್ನಾಟಕ ಸರಕಾರದ (ಕೃಷ್ಣಾ ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡ ಯೋಜನೆ, ಭೀಮರಾಯನಗುಡಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಇದೊಂದು ಐತಿಹಾಸಿಕ ಸಂಗತಿ.

ಶ್ರೀಯುತರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಇವರೊಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಎಲ್ಲ ಸಮಾಜದವರೊಂದಿಗೆ ಆತ್ಮೀಯ ಬಂಧುಗಳಾಗಿ ಬದುಕನ್ನು ಗಂಧದಂತೆ ಸವೆಸಿದವರು. ಇವರ ವೈವಾಹಿಕ ಜೀವನ ಐವತ್ತು ವಸಂತಗಳು ತುಂಬಿರುವ ಪ್ರಯುಕ್ತ ಇವರ ಸುವರ್ಣ ದಾಂಪತ್ಯ ವಿವಾಹ ಮಹೋತ್ಸವ ಆಚರಿಸುವ ಹೊತ್ತಿಗೆ ನಮ್ಮ ಹಾರಕೂಡ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಡಾ. ಚೆನ್ನವೀರ ಶಿವಾಚಾರ್ಯರ ಆಶೀರ್ವಾದದಂತೆ "ಹೊನ್ನಕಿರಣ" ಎಂಬ ಗ್ರಂಥವನ್ನು ದಿನಾಂಕ 13-02-2026 ರಂದು ಸಮರ್ಪಿಸಲಾಗುತ್ತದೆ.

ಲೇಖಕರು:ಡಾ.ಗವಿಸಿದ್ಧಪ್ಪ ಎಚ್.ಪಾಟೀಲಸಾಹಿತಿಗಳು

ಪ್ಲಾಟ್ ನಂ:೩೫&೩೬ "ಸನ್ನತಿ"ಕೃಷ್ಣಾ ನಗರ,ಕುಸನೂರು ರಸ್ತೆ

ಕಲಬುರಗಿ-೫೮೫೧೦೬ ,ಮೊ.೯೫೩೫೯೧೧೩೧೫