ಏನಿದು ವಕ್ಫ್ ಮಂಡಳಿ ವಿವಾದ ? ರೈತರ, ಮಠ ಮಂದಿರಗಳ ಹಾಗೂ ಇತರರ ಜಮೀನು ವಕ್ಫ್ ಮಂಡಳಿ ವಶಪಡಿಸಿಕೊಳ್ಳತ್ತಿರುವುದೆಕೆ?
ಏನಿದು ವಕ್ಫ್ ಮಂಡಳಿ ವಿವಾದ ? ರೈತರ, ಮಠ ಮಂದಿರಗಳ ಹಾಗೂ ಇತರರ ಜಮೀನು ವಕ್ಫ್ ಮಂಡಳಿ ವಶಪಡಿಸಿಕೊಳ್ಳತ್ತಿರುವುದೆಕೆ?
ಕಲಬುರಗಿ : ವಕ್ಫ್ ಮಂಡಳಿ ಆಸ್ತಿ ನಮ್ಮ ದೇಶದಲ್ಲಿ ಎಷ್ಟಿದೇ? ಎಂಬುದಕ್ಕೆ ಸರಿಯಾದ ಉತ್ತರ ಇಲ್ಲವೇ ಇಲ್ಲ. ಏಕೆಂದರೆ ಒಂದು ಅಂದಾಜಿನ ಪ್ರಕಾರ ದೇಶಾದ್ಯಂತ ಒಟ್ಟು 9 ಲಕ್ಷ ಕೋಟಿಗೂ ಅಧಿಕ ಮೌಲ್ಯದ ವಕ್ಫ್ ಆಸ್ತಿ ಇದೆ ಎನ್ನಲಾಗುತ್ತಿದೆ.
ಅದರಲ್ಲೂ ತಮಿಳುನಾಡಿನ
ತಿರುಚೆಂದೂರೈ ಎಂಬ ಸಂಪೂರ್ಣ ಹಳ್ಳಿ ಕರ್ನಾಟಕದ ವಿಧಾನಸೌಧ, ಜಗತ್ತಿನ ವಿಸ್ಮಯಗಳಲ್ಲಿ ಒಂದಾದ ತಾಜ್ ಮಹಲ್, ದೆಹಲಿ ವಿಮಾನ ನಿಲ್ದಾಣ ಹೊಸ ಸಂಸತ್ತು ಭವನ ಹೀಗೆ ಹಲವು ಐತಿಹಾಸಿಕ ನಂಟು ಹೊಂದಿರುವ ಭೂಮಿಗಳು ವಕ್ಫ್ ಮಂಡಳಿಯ ಆಸ್ತಿ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಕ್ಫ್ ಮಂಡಳಿಯ ಕಾನೂನಿಗೆ ತನ್ನ ಹೊಸ ಕಾಯಿದೆಯ ಮೂಲಕ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದೆ. ಈ ನಡುವೆ ವಿಜಯಪುರ ಜಿಲ್ಲೆಯ ನೂರಾರು ರೈತರ ಜಮೀನು ಒಡೆತನಕ್ಕೆ ವಕ್ಫ್ ಮಂಡಳಿಯು ಹಕ್ಕು ಮಂಡಿಸಿದ್ದು, ರೈತರ ಆಕ್ರೋಶ ಹಾಗೂ ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ವಿಜಯಪುರ ಜಿಲ್ಲೆಯ ರೈತರ ಜಮೀನು ಒಡೆತನಕ್ಕೆ ಹಕ್ಕು ಮಂಡಿಸಿದ ನಂತರ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.
ಹೊನವಾಡ ಗ್ರಾಮದ ರೈತರಿಗೆ ಅಕ್ಟೋಬರ್ 4 ರಂದು ತಹಸೀಲ್ದಾರ್ ಅವರಿಂದ ತಮ್ಮ ಪೂರ್ವಜರ ಭೂಮಿಯನ್ನು ವಕ್ಫ್ ಮಂಡಳಿಗೆ ಮರುಹಂಚಿಕೆ ಮಾಡಲಾಗುತ್ತಿದೆ ಎಂಬ ಪತ್ರ ಬಂದಿದೆ.
ಇದೇ ಸಂದರ್ಭದಲ್ಲಿ ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರು ವಕ್ಪ್ ಅದಾಲತ್ ನಡೆಸಿ ಎಲ್ಲ ಜಿಲ್ಲಾಧಿಕಾರಿಗಳಿಗೆ, ವಕ್ಫ್ ಆಸ್ತಿಯ ಭೂಮಿ ಸರ್ವೆ ಮತ್ತು ಫ್ಲ್ಯಾಗಿಂಗ್ ಕಾರ್ಯ ಮಾಡಿ ನಂತರ ಖಾತೆ ಬದಲಾವಣೆಗೆ ಮಾಡಬೇಕೆಂದು ಕಟ್ಟುನಿಟ್ಟಾಗಿ ಆದೇಶ ನೀಡಿದ್ದರು.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆಯಾ ತಾಲೂಕುಗಳ ತಹಶೀಲ್ದಾರರು ರೈತರಿಗೆ ನಿಮ್ಮ ಜಮೀನನನ್ನು ವಕ್ಪ್ ಆಸ್ತಿ ಕರ್ನಾಟಕ ಸರ್ಕಾರ
ಅಂತ ನಮೂದು ಮಾಡುವ ಕುರಿತು ನೊಟೀಸ್ ಜಾರಿ ಗೊಳಿಸಿದ್ದಾರೆ.
ಏನಿದು ವಕ್ಫ್ ಆಸ್ತಿ ವಿವಾದ?
ವಕ್ಫ್ ವಿರುದ್ಧವೇ ಕಿಡಿಕಾರಿದ ಮುಸ್ಲಿಂ ಮುಖಂಡರೊಬ್ಬರು ಮಾಜಿ ಸಚಿವ ಹಾಗೂ ಶಾಸಕ ಯತ್ನಾಳ್ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ರಾಷ್ಟ್ರದಾದ್ಯಂತ ಸುದ್ದಿ ಮಾಡುತ್ತಿರುವ ವಕ್ಫ್ ವಿವಾದ!
ವಿಜಯಪುರ ರೈತರನ್ನು ಇಂದು ಭೇಟಿಯಾಗಲಿದ್ದಾರೆ ವಕ್ಫ್ ಜೆಪಿಸಿ ಮುಖ್ಯಸ್ಥ.
ವಕ್ಫ್ ಜಾರಿಗೊಳಿಸಿದ ನೋಟಿಸ್‌ಗೆ ಸಚಿವರಲ್ಲೆ ಅಸಮಾಧಾನ ಭುಗಿಲೆದ್ದಿದೆ.
ಜಮೀರ್ ವಿರುದ್ಧ ರಾಜ್ಯ ಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಡಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ನೀಡಿದ್ದಾರೆ.
ವಿಜಯಪುರ ಜಿಲ್ಲಾ ವಕ್ಫ್ ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 14,201 ಎಕರೆ ಜಮೀನು ವಕ್ಪ್ ಸೇರಿದೆ. ಈ ಪೈಕಿ 1354 ಎಕರೆ ಒತ್ತುವರಿಯಾಗಿದೆ ಎನ್ನುವ ಮಾತಿದೆ.
ಉಳಿದ ಜಮೀನು ವಕ್ಫ್ ಸಂಸ್ಥೆಗಳಿಗೆ, ಇನಾಮಿ ಭೂಮಿ, ಭೂ ಸುಧಾರಣೆ ಹಾಗೂ ವಕ್ಪ್ ಆ್ಯಕ್ಟ್ ವಶದಲ್ಲಿದೆ ಎಂದು ತಿಳಿಸಿದೆ.
ಆದರೆ ಜಿಲ್ಲಾ ವಕ್ಫ್ ಬೋರ್ಡ್ ಆಸ್ತಿಯಲ್ಲಿ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ 1200 ಎಕರೆ ಜಮೀನು ಶಾ ಅಮೀನುದ್ದೀನ್ ದರ್ಗಾಕ್ಕೆ ಸೇರಿದ್ದು ಎಂದು ಹಲವು ತಾಲೂಕಿನ ರೈತರಿಗೆ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಆದರೆ ಹೊನವಾಡ ಗ್ರಾಮದಲ್ಲಿ ಶಾ ಅಮೀನುದ್ದೀನ್ ದರ್ಗಾವೇ ಇಲ್ಲ.
ಆದರೂ 13 ತಾಲೂಕಿನ ರೈತರಿಗೆ “ನಿಮ್ಮ ಜಮೀನುಗಳು ವಕ್ಫ್ ಬೋರ್ಡ್ ಆಸ್ತಿಯೆಂದು” ಸ್ಥಳೀಯ ತಹಶೀಲ್ದಾರ್ ಕಚೇರಿಯಿಂದ ತಿಳವಳಿಕೆ ಪತ್ರ ನೀಡಲಾಗಿದೆ.
ಇದಲ್ಲದೇ, ಇನ್ನೂ ನೂರಾರು ರೈತರಿಗೆ ನೊಟೀಸ್ ಜಾರಿ ಮಾಡಲು ತಹಶೀಲ್ದಾರರು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದರ ನಡುವೆ ಬಿಜೆಪಿ ಒಂದು ಸಮುದಾಯದ ತುಷ್ಟೀಕರಣ ಮಾಡಲು ನಾಡಿನ ಅನ್ನದಾತರನ್ನು ಒಕ್ಕಲೆಬ್ಬಿಸಲು ಹೊರಟಿದೆ ಎಂದು ಆರೋಪಿಸುತ್ತಿದ್ದು,
ಸಿ.ಟಿ.ರವಿ, ತೇಜಸ್ವಿ ಸೂರ್ಯ, ಬಸನಗೌಡ ಯತ್ನಾಳ್, ಛಲವಾದಿ ನಾರಾಯಣಸ್ವಾಮಿ ಹೀಗೆ ಅನೇಕ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಕಾಂಗ್ರೆಸ್ ನಾಯಕರು ಸರ್ಕಾರದ ಈ ನಡೆಯನ್ನು ಸಮರ್ಥಿಸಿ ಕೊಳ್ಳುತ್ತಾ ಒಂದೇ ಒಂದು ಇಂಚು ರೈತರ ಜಾಗವನ್ನೂ ಕೂಡಾ ದಾಖಲೆಗಳಿಲ್ಲದೆ ವಕ್ಫ್ ಆಸ್ತಿ ಎಂದು ಸೇರಿಸಲ್ಲ. ಈ ಬಗ್ಗೆ ಸಭೆ ನಡೆಸಿ, ಎಲ್ಲಾ ಗೊಂದಲಗಳಿಗೆ ಉತ್ತರ ಕೊಡ್ತೀವಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್, ಎಂ.ಬಿ. ಪಾಟೀಲ ಹಾಗೂ ಇನ್ನಿತರ ನಾಯಕರು ಹೇಳುತ್ತಿದ್ದಾರೆ.
ಏನೀದು ವಕ್ಫ್ ಮಂಡಳಿ..?
ದೇಶದಲ್ಲಿ ಭಾರತೀಯ ರೈಲ್ವೆ ಮತ್ತು ಭಾರತೀಯ ಸೇನೆಯ ನಂತರ ವಕ್ಫ್ ಬೋರ್ಡ್ ಭಾರತದ ಮೂರನೇ ಅತಿದೊಡ್ಡ ಭೂ ಮಾಲೀಕನಾಗಿದ್ದು,
ವಕ್ಫ್ ಬೋರ್ಡ್‌ಗಳ ಸರ್ವಾಧಿಕಾರದ ಆಚರಣೆಯಿಂದಾಗಿ ಆದರ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಹಾಗಾದರೆ ವಕ್ಫ್ ಮಂಡಳಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು ಎಂದು ನೋಡುವುದಾದರೆ,
ಮೊದಲ 1954ರಲ್ಲಿ ದೇಶದಲ್ಲಿ ಬಾರಿಗೆ ವಕ್ಫ್ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರಲ್ಲಿ ಮುಸ್ಲಿಂ ಧರ್ಮದ ಪ್ರಕಾರ ವಾಕಿಫ್ ಅಂದರೆ ದೇವರ ಕಾರ್ಯಕ್ಕಾಗಿ ಗುರುತಿಸಲ್ಪಟ್ಟ ಯಾವುದೇ ಉದ್ದೇಶಕ್ಕಾಗಿ ತನ್ನ ಸಂಪತ್ತನ್ನು ಅರ್ಪಿಸುವ ವ್ಯಕ್ತಿ ಎಂದು ಅರ್ಥ.
ಇದೇ ಮುಂದೆ ವಕ್ಫ್ ಆಯಿತು. ನಂತರ 1995 ರಲ್ಲಿ ಪಿ.ವಿ. ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಕ್ಫ್ ಎಂದು ಗುರುತಿಸಲಾದ, ದಾನ ಮಾಡಲಾದ ಔಕಾಫ್ ಆಸ್ತಿಗಳ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿದ್ದೇ ಈ ವಕ್ಫ್ ಕಾಯ್ದೆ.
ಅಷ್ಟೇ ಅಲ್ಲದೇ ಯಾವುದೇ ಆಸ್ತಿಯನ್ನು ತನ್ನದು ಎಂದು ಘೋಷಿಸಿ ವಶಕ್ಕೆ ಪಡೆಯುವ ಸರ್ವೋಚ್ಛ ಅಧಿಕಾರವನ್ನು ವಕ್ಫ್ ಮಂಡಳಿ ಹೊಂದಿದೆ. ನಂತರ ಮನಮೋಹನ್ ಸಿಂಗ್ ಅವರ ಸರ್ಕಾರ 2013ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದಿತ್ತು.
ಪ್ರಸ್ತುತ ಕಾನೂನಿನ ಅಡಿಯಲ್ಲಿ, ಭಾರತದಲ್ಲಿನ ಪ್ರತಿ ರಾಜ್ಯವು ಅಧ್ಯಕ್ಷರ ನೇತೃತ್ವದ ವಕ್ಫ್ ಮಂಡಳಿಯನ್ನು ಹೊಂದಿದೆ,
ರಾಜ್ಯ ಸರ್ಕಾರದಿಂದ ಒಬ್ಬರು ಅಥವಾ ಇಬ್ಬರು ನಾಮನಿರ್ದೇಶಿತರು, ಮುಸ್ಲಿಂ ಶಾಸಕರು ಮತ್ತು ಸಂಸದರು, ರಾಜ್ಯ ಬಾರ್ ಕೌನ್ಸಿಲ್‌ನ ಮುಸ್ಲಿಂ ಸದಸ್ಯರು, ಮಾನ್ಯತೆ ಪಡೆದ ಇಸ್ಲಾಮಿಕ್ ಧರ್ಮಶಾಸ್ತ್ರದ ವಿದ್ವಾಂಸರುಗಳು ಇದರ ಸದಸ್ಯರಾಗಿರುತ್ತಾರೆ.
ಇನ್ನು ವಕ್ಫ್ ಕಾಯಿದೆ, 1995 ರ ಸೆಕ್ಷನ್ 40ರ ಅಡಿ ವಕ್ಫ್ ಬೋರ್ಡ್‌ಗಳಿಗೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿದರೆ ಅದನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ಒದಗಿಸುತ್ತದೆ. ಈ ಅಧಿಕಾರವನ್ನು ವಕ್ಫ್ ಮಂಡಳಿಯ ಸದಸ್ಯರುಗಳು ಭೂಕಬಳಿಕೆಗೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ದೂರುಗಳು ಸಾಕಷ್ಟು ಬಂದಿವೆ.
ದೇಶದಲ್ಲಿ ವಕ್ಫ್ ಆಸ್ತಿ ಎಷ್ಟಿದೆ? ಅದರ ಮೌಲ್ಯ ಎಷ್ಟು ಎಂಬುದನ್ನು ಒಮ್ಮೆ ನೋಡೋಣವೇ?
ದೇಶಾದ್ಯಂತ 9.40 ಲಕ್ಷ ಎಕರೆ ಪ್ರದೇಶದಲ್ಲಿ ದೇಶಾದ್ಯಂತ ವಕ್ಫ್ ಆಸ್ತಿ ಇದ್ದು, ಈ ಆಸ್ತಿಗಳ ಮೌಲ್ಯವು ಲಕ್ಷಾಂತರ ಕೋಟಿ ರೂಪಾಯಿಯಾಗಿದೆ. ಆದರ ಅಂದಾಜು ಮೌಲ್ಯ 8 ಲಕ್ಷದ 70 ಸಾವಿರ ವಕ್ಫ್ ಆಸ್ತಿ ಇದೆ ಎನ್ನಲಾಗಿದೆ. 9 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ್ದು ಎನ್ನಲಾಗಿದೆ.
ಇದರೊಂದಿಗೆ ಸಾಕಷ್ಟು ವಕ್ಫ್ ಆಸ್ತಿಗಳು ಪ್ರಮುಖ ಸ್ಥಳಗಳ ಆಯಕಟ್ಟಿನ ಪ್ರದೇಶಗಳಲ್ಲೇ ಇವೆ. ಜೊತೆಗೆ ಇವುಗಳಲ್ಲಿ ವಿವಾದಿತ ಭೂಮಿಗಳೇ ಹೆಚ್ಚಾಗಿದ್ದು, ಕೆಲವು ಆಸ್ತಿಗಳಿಗೆ ಐತಿಹಾಸಿಕ ನಂಟಿದೆ.
ಇದರೊಂದಿಗೆ ವಕ್ಫ್ ಮಂಡಳಿಯ ಕುರಿತಾಗಿ ಮುಸ್ಲಿಮರ ಸುನ್ನಿ ಜಾತಿ ಹೊರತಾದ ಉಳಿದ ಉಪ ಪಂಗಡಗಳಾದ ಶಿಯಾ, ಅಹ್ಮದೀಯಸ್, ಪಸ್ಮಂದಾಸ್ ಮತ್ತು ಬೋಹ್ರಾ ಸೇರಿದಂತೆ ಹಲವರು ಸಮುದಾಯಗಳು ವಿರೋಧಿಸುತ್ತಾ, ಮುಸ್ಲಿಂ ರಾಷ್ಟ್ರಗಳಲ್ಲೇ ಇಲ್ಲದ ಕಾನೂನು ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಇದೆ ಎನ್ನುತ್ತಾರೆ. ಈಗಾಗಲೇ ಟರ್ಕಿ ಮತ್ತು ಟುನೀಶಿಯಾದಂತಹ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ವಕ್ಫ್ ಮಂಡಳಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿವೆ.
ಇದರ ನಡುವೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ವಕ್ಱ್ ಆಸ್ತಿಗಳ ಮೇಲೆ ಮಂಡಳಿ ಹೊಂದಿರುವ ಅಧಿಕಾರಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಕ್ಫ್ ಕಾಯಿದೆಗೆ 40 ತಿದ್ದುಪಡಿಗಳನ್ನು ಅಂಗೀಕರಿಸಲು ಮುಂದಾಗಿದೆ.
ವಕ್ಫ್ ಮಂಡಳಿಯು ಯಾವುದೇ ಭೂಮಿಯನ್ನು ಬೇಕಾಬಿಟ್ಟಿಯಾಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ವಕ್ಫ್ ಮಂಡಳಿಯು ಕೇವಲ ಭಾರತ ಹಾಗೂ ಪಾಕಿಸ್ತಾನದ ವಿಭಜನೆಯ ಮೊದಲು ಕಂದಾಯ ಇಲಾಖೆಯ ದಾಖಲೆಗಳಲ್ಲಿ ದಾಖಲಾಗಿರುವ ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಬಹುದು. ನಂತರ ಆ ಜಮೀನುಗಳನ್ನು ವಾಸ್ತವಿಕವಾಗಿ ವಕ್ಫ್ ಆಸ್ತಿ ಎಂಬುದನ್ನು ಮಂಡಳಿ ಸಾಬೀತುಪಡಿಸಬೇಕು. ಇದರೊಂದಿಗೆ ಮಂಡಳಿಯು ಅಸ್ತಿತ್ವದಲ್ಲಿರುವ ವಕ್ಫ್ ಆಸ್ತಿಗಳನ್ನು ನಿರ್ವಹಿಸುವುದರ ಜೊತೆಗೆ, ಸಮಯ ಕಳೆದಂತೆ ಯಾವುದೇ ವಕ್ಫ್ ಆಸ್ತಿಯನ್ನು ಮರುಪಡೆಯಲು ಮಂಡಳಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತವೆ.
ಇವು ವಕ್ಫ್ ಮಂಡಳಿ ಕಾಯಿದೆಯ ವಿವಾದಾತ್ಮಕ 40 ಷರತ್ತುಗಳನ್ನು ಅನ್ವಯಿಸುವ ಮೂಲಕ ಮಂಡಳಿಯು ಇದನ್ನು ಮಾಡಬಹುದಾಗಿದೆ.
ವಕ್ಫ್ ಮಂಡಳಿ ವಶಪಡಿಸಿಕೊಂಡ ಆಸ್ತಿಯ ಕುರಿತು ಮೊದಲಿಗೆ ವಕ್ಫ್ ಮಂಡಳಿಯನ್ನು ಸಂಪರ್ಕಿಸಿ ಅವರಿಂದ ಪಡೆದ ಸ್ಪಷ್ಟೀಕರಣ ಸರಿಯನಿಸದಿದ್ದರೆ, ನೇರ ರಾಜ್ಯ ವಕ್ಫ್ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಬಹುದು. ಅಲ್ಲೂ ನಿಮಗೆ ನ್ಯಾಯಸಿಗದಿದ್ದರೆ, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕು. ಆದರೆ ಕೇಂದ್ರ ಸರ್ಕಾರದ ಹೊಸ ಕಾಯ್ದೆಯಲ್ಲಿ ವಕ್ಫ್ ಮಂಡಳಿಯು ಬೇಕಾಬಿಟ್ಟಿಯಾಗಿ ಆಸ್ತಿ ವಶಪಡಿಸಿಕೊಳ್ಳುವ ವಕ್ಫ್ ಮಂಡಳಿಯ ಅಧಿಕಾರಕ್ಕೆ ತಡೆ ಬೀಳಲಿದೆ. ಇದರಲ್ಲಿ ವಕ್ಫ್ ಮಂಡಳಿಗಳು ತಮ್ಮ ಆಸ್ತಿಯನ್ನು ಜಿಲ್ಲಾಧಿಕಾರಿಗಳೊಂದಿಗೆ ತಮ್ಮ ವಾಸ್ತವಿಕ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ.
ಜತೆಗೆ ವಕ್ಫ್ ಮಂಡಳಿ ಸ್ವೀಕರಿಸುವ ಹಣವನ್ನು ಸರ್ಕಾರ ಸೂಚಿಸಿರುವ ರೀತಿಯಲ್ಲಿ ವಿಧವೆಯರು, ವಿಚ್ಛೇದಿತರು ಹಾಗೂ ಅನಾಥರ ಕಲ್ಯಾಣಕ್ಕೆ ಬಳಸಬೇಕು ಎಂದು ಹೇಳಿದೆ. ಮಹಿಳೆಯರ ಉತ್ತರಾಧಿಕಾರವನ್ನು ಕಾಪಾಡಬೇಕು ಎಂದೂ ವಿಧೇಯಕ ತಿಳಿಸಿದೆ.
ವಕ್ಫ್ ಆಸ್ತಿಗಳ ಮೇಲೆ ನಿಯಂತ್ರಣ ಹೇರುವ ಪ್ರಸ್ತಾವಿತ ವಕ್ಫ್ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು, ಎಂತಹ ಸಂದರ್ಭ ಎದುರಾದರೂ ಮಸೂದೆ ಜಾರಿಯನ್ನು ತಡೆಯುವುದಾಗಿ ಹೇಳಿದೆ.
ಈ ಮಧ್ಯೆ ಕೇಂದ್ರ ಸರ್ಕಾರವು ಸಂಸತ್ತಿನ ಸ್ಥಾಯಿ ಸಮಿತಿಯನ್ನು ರಚಿಸಿದ್ದು, ಸಂಸದರು ಕಾಯ್ದೆಯ ಕುರಿತು ಪರಿಶೀಲನೆ ಮಾಡುವ ಸಂದರ್ಭದಲ್ಲಿ ವಿರೋಧಗಳು ಹೆಚ್ಚುವ ಸಾಧ್ಯತೆಗಳಿದ್ದು, ಕೇಂದ್ರ ಸರ್ಕಾರ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ವಕ್ಫ್ ಮಂಡಳಿಯ ಆಟಾಟೋಪಕ್ಕೆ ಕಡಿವಾಣ ಬೀಳಲಿದೆ.
-ಪ್ರೊ.ಯಶವಂತರಾಯ ಅಷ್ಠಗಿ
ಉಪಸಂಪಾದಕರು, ಕಲ್ಯಾಣ ಕಹಳೆ ಪತ್ರಿಕೆ, ಕಲಬುರಗಿ