ಈಡಿಗ ಸಮುದಾಯದ ಸಮಸ್ಯೆಗೆ ಸಿಎಂ ಜೊತೆ ಚರ್ಚೆ : ಪ್ರಿಯಾಂಕ ಖರ್ಗೆ
ಈಡಿಗ ಸಮುದಾಯದ ಸಮಸ್ಯೆಗೆ ಸಿಎಂ ಜೊತೆ ಚರ್ಚೆ : ಪ್ರಿಯಾಂಕ ಖರ್ಗೆ
ಡಾ. ಪ್ರಣವಾನಂದ ಶ್ರೀ ಜ.6 ರ ಪಾದಯಾತ್ರೆ ~ ಮುಖಂಡರ ಜೊತೆ ಚರ್ಚೆ
ಕಲಬುರಗಿ : ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ವಿವಿಧ ಬೇಡಿಕೆಗಳನ್ನು ಒತ್ತಾಯಿಸಲು ಮುಂದಿನ ವರ್ಷ ಜನವರಿ 6 ರಿಂದ ಡಾ. ಪ್ರಣವಾನಂದ ಶ್ರೀಗಳು ಚಿತಾಪುರದಿಂದ ಬೆಂಗಳೂರಿನ ವರೆಗೆ ಕೈಗೊಳ್ಳಲಿರುವ ಪಾದಯಾತ್ರೆಯ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದ್ದಾರೆ.
ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಚಿತ್ತಾಪುರ ತಾಲೂಕು ಕಾಂಗ್ರೆಸ್ ಪಕ್ಷದ ಈಡಿಗ ಮುಖಂಡರ ಜೊತೆ ಬುಧವಾರ ಚರ್ಚಿಸಿ ಮಾಹಿತಿ ಸಂಗ್ರಹಿಸಿದ ನಂತರ ಪಾದಯಾತ್ರೆ ಕೈ ಬಿಡಲು ಮತ್ತು ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಡಾ. ಪ್ರಣವಾನಂದ ಶ್ರೀಗಳು ಮತ್ತು ಸಮಾಜದ ಮುಖಂಡರನ್ನು ಸಿಎಂ ಬಳಿಗೆ ಕರೆದೊಯ್ಯಲು ಪ್ರಯತ್ನಿಸುವೆ. ಬೇಡಿಕೆ ಬಗೆಹರಿಸಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಪ್ರಿಯಾಂಕ ಖರ್ಗೆ ಮುಖಂಡರಿಗೆ ಭರವಸೆ ನೀಡಿದರು.
ಮಾತುಕತೆ ವೇಳೆ ಸುರೇಶ್ ಗುತ್ತೇದಾರ್ ಕರದಾಳು, ಮಲ್ಲಯ್ಯ ಗುತ್ತೇದಾರ್ ಕರದಾಳು, ವಾಡಿಯ ಸಂತೋಷ್ ಗುತ್ತೇದಾರ್, ಸುನಿಲ್ ಗುತ್ತೇದಾರ್, ಮಲ್ಲಯ್ಯ ಗುತ್ತೇದಾರ್ ಚರ್ಚೆ ನಡೆಸಿದರು.
*ಮುಖ್ಯಮಂತ್ರಿ ಆಹ್ವಾನಿಸಿದರೆ ಚರ್ಚೆಗೆ ಸಿದ್ದ : ಡಾ. ಪ್ರಣವಾನಂದ ಶ್ರೀ*
ಸಮುದಾಯದ ಜನರ ಕಲ್ಯಾಣದ ದೃಷ್ಟಿಯಿಂದ 18 ಬೇಡಿಕೆಗಳನ್ನು ಮುಂದಿಟ್ಟು ಜನವರಿ 6 ರಿಂದ ಕರುದಾಳು ಮಠದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ 700 ಕಿಲೋಮೀಟರ್ ಪಾದಯಾತ್ರೆಗೆ ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ. ಪೂರ್ವಭಾವಿ ಸಭೆ, ಪಾದಯಾತ್ರೆ ಮಾರ್ಗ, ಸಭೆ, ಚರ್ಚೆ ನ ಡೆಸುವ ಸ್ಥಳಗಳು ಹಾಗೂ ವಾಸ್ತವ್ಯ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ಮಧ್ಯೆ ಸಚಿವ ಪ್ರಿಯಾಂಕ ಖರ್ಗೆ ಅವರ ಸಲಹೆ ಮೇರೆಗೆ ಮುಖ್ಯಮಂತ್ರಿಗಳು ಚರ್ಚೆಗೆ ಆಹ್ವಾನಿಸಿದರೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಕರದಾಳು ಶಕ್ತಿಪೀಠದ ಡಾ. ಪ್ರಣವಾನಂದ ಶ್ರೀ ತಿಳಿಸಿದ್ದಾರೆ.
ಕಳೆದ ಎರಡು ವರೆ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಇದುವರೆಗೆ ಯಾವುದೇ ಸೌಲಭ್ಯ ನೀಡದೆ ಮುಖ್ಯಮಂತ್ರಿಗಳು ಹಾಗೂ ಸಂಬಂಧ ಪಟ್ಟವರ ಜೊತೆ ಚರ್ಚೆಗೂ ಅವಕಾಶ ಕಲ್ಪಿಸದೆ ಕಾಲಹರಣ ಮಾಡಿರುವುದರಿಂದ ಅನಿವಾರ್ಯವಾಗಿ ಪಾದಯಾತ್ರೆಗೆ ರೂಪುರೇಷೆ ನೀಡಲಾಗಿದೆ. ಇದು ಯಾವುದೇ ಪಕ್ಷ ಹಾಗೂ ನಾಯಕರ ವಿರುದ್ಧವಲ್ಲ. ಸಮಾಜದ ಕಟ್ಟ ಕಡೆಯ ಜನರ ಶ್ರೇಯೋಭಿವೃದ್ಧಿಗಾಗಿ ಕೈಗೊಳ್ಳುವ ಪಾದಯಾತ್ರೆಯಾಗಿದೆ. ನಮ್ಮ ಸಮಾಜದ ಮುಖಂಡರು ಹಾಗೂ ಸಚಿವರಾದ ಮಧು ಬಂಗಾರಪ್ಪ, ಬಿ. ಕೆ ಹರಿಪ್ರಸಾದ್ ಸೇರಿದಂತೆ ಸಮುದಾಯದ ಶಾಸಕರು ಹಾಗೂ ಪ್ರಮುಖರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸಿ ಲಿಖಿತ ಭರವಸೆ ನೀಡಿದರೆ ಪಾದಯಾತ್ರೆ
ಕೈಬಿಡುವ ಬಗ್ಗೆ ಮರು ಚಿಂತನೆ ಮಾಡಲಾಗುವುದು ಎಂದು ಸ್ವಾಮೀಜಿ ಸ್ಪಷ್ಟಪಡಿಸಿರುವುದಾಗಿ ಶಕ್ತಿಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
