ಉಪಚುನಾವಣೆ ಸುಂಟರಗಾಳಿ

ಉಪಚುನಾವಣೆ ಸುಂಟರಗಾಳಿ

ಉಪಚುನಾವಣೆ ಸುಂಟರಗಾಳಿ 

ಉಪಚುನಾವಣೆಗಳ ಸುಂಟರಗಾಳಿ ಹಾವೇರಿಯ ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ ಅವರ ಪುತ್ರ ಉದ್ಯಮಿ ಭರತ್ ಬೊಮ್ಮಾಯಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, 

ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಜನತಾದಳದ ಅಭ್ಯರ್ಥಿ, ಸಂಡೂರು ಕ್ಷೇತ್ರದಲ್ಲಿ ಹಾಲಿ ಸಂಸದ ಈ.ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದರೆ.

ಇವರುಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಮತ್ಯಾರಿಗೂ ಸ್ಪರ್ಧಿಸುವ ಸಾಮರ್ಥ್ಯ ಇಲ್ಲವೇ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.?  

ಇವರಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದರ ಕುರಿತು ಸುಮಾರು 3 ವಾರಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಹಾಗೂ ಪತ್ರಿಕೆಗಳಲ್ಲಿ ಚರ್ಚೆ ಜೋರಾಗಿ ನಡೆಯುದು ಶತಃಸಿದ್ಧವಾಗಿದೆ.

ನಂತರ ಕಣದಲ್ಲಿರುವ ಯಾರೋ ಮೂವರು ಆಯ್ಕೆಯಾಗುತ್ತಾರಷ್ಟೇ! ಅದಕ್ಕಾಗಿ ಇಷ್ಟೊಂದು ಸರ್ಕಸ್ ನಡೆಯಲಿದೆ.

ಒಂದು ಸಣ್ಣ ಸಂವಿಧಾನಾತ್ಮಕ ಹುದ್ದೆಗಾಗಿ ಈ ರಾಜಕೀಯ ಚದುರಂಗದ ಆಟ. ಅದರಲ್ಲಿ ವಂಶಪಾರಂಪರ್ಯವಾಗಿ ರಾಜಕೀಯ ನಮ್ಮ ದೇಶದಲ್ಲಿ ಎಲ್ಲಾ ಪಕ್ಷಗಳಲ್ಲಿ ಹಾಸುಹೊಕ್ಕಾಗಿದೆ, ಇಲ್ಲ ಎನ್ನುವ ಯಾವುದೇ ಪಕ್ಷಗಳು ನಮ್ಮಲ್ಲಿಲ್ಲ.

ಈಗ ನೋಡಿ ನಮ್ಮ ರಾಜಕೀಯ ಪಕ್ಷಗಳ ಶ್ರದ್ಧೆ, ಶ್ರಮ, ಶಿಸ್ತು, ಯೋಜನೆ, ತಂತ್ರಗಾರಿಕೆ, ಮನೆ ಮನೆ ಭೇಟಿ, ಜಾತಿ ಧರ್ಮದ ಪ್ರೀತಿ, ಕ್ರಿಯಾಶೀಲತೆ ಎಲ್ಲವೂ ಎಷ್ಟೊಂದು ನೈಜವಾಗಿ ಜಾರಿಯಾಗುತ್ತವೆ ಎಂದರೆ ಗುರಿ ತಲುಪುವುದಷ್ಟೆ ರಾಜಕೀಯ ಪಕ್ಷಗಳ ಏಕೈಕ ಉದ್ದೇಶ ವಾಗಿರುತ್ತದೆ. ಹಾಗೆಯೇ ಈ ಉಪಚುನಾವಣೆ ಗೆಲ್ಲಲು ಶತಾಯಗತಾಯ ಮೂರು ಪಕ್ಷಗಳು ವಿವಿಧ ತಂತ್ರಗಳನ್ನು ಹೂಡಿ ಲಭ್ಯವಿರುವ ಎಲ್ಲಾ ಶಕ್ತಿಗಳನ್ನು ಬಳಸಿ ಕಾರ್ಯ ಪ್ರವೃತವಾಗುತ್ತವೆ.

ಅದೆಂಥ ದೇಶ ಭಕ್ತಿ, ಧರ್ಮ, ಭಾಷೆ, ಜಾತಿ ಎಲ್ಲ ಭಾವಗಳು ನದಿಯಂತೆ ಉಕ್ಕಿ ಹರಿಯುತ್ತದೆ. ಸಂಬಂಧಗಳು ಕೂಡ ಆಗ ಯಥೇಚ್ಛವಾಗಿ ನೆನಪಾಗುತ್ತದೆ. 

ಇದೇ ಆಸಕ್ತಿ, ಸೇವಾ ಮನೋಭಾವನೆ ನಮ್ಮ ದೇಶದ ರೈತರ ಕೂಲಿ ಕಾರ್ಮಿಕರ ಮೇಲೆ ತೋರಿಸಿ ,ಅತಿವೃಷ್ಠಿ, ಅನಾವೃಷ್ಟಿ ಮತ್ತು ಅದರಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅದನ್ನು ತಡೆಯಲು ಎಲ್ಲ ಪಕ್ಷಗಳು ಮುಂದೆ ಬರಬೇಕೇಂಬುದು ಮತದಾರರ ಆಯ್ಕೆಯಾಗಿರುತ್ತದೆ.

ಎಲ್ಲಿ ನೋಡಿದರೂ ಸಹ ಕ್ಷಾಮ, ಪ್ರವಾಹ ಮತ್ತು ನೆರೆ ಜನರ ಬದುಕನ್ನೇ ಸಂಕಷ್ಟಕ್ಕೆ ದೂಡಿದೆ.

ನಿರುದ್ಯೋಗ ಸಮಸ್ಯೆ ಭೂತಾಕಾರದಂತೆ ತಾಂಡವವಾಡುತ್ತಿದೆ.

ಇನ್ನೂ ಜನಜೀವನ ಸಾಮಾನ್ಯ ಸ್ಥಿತಿ ತಲುಪಲು ಸಾಕಷ್ಟು ಸುಧಾರಣಾ ಕಾರ್ಯ ಮಾಡಬೇಕಾಗಿದೆ. 

ಇಂತಹ ಸಂದಿಗ್ಧ ಸಮಯದಲ್ಲಿ ಆಡಳಿತ ಮತ್ತು ರಾಜಕೀಯ ವ್ಯವಸ್ಥೆ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಮಾಧ್ಯಮಗಳು ಸಹ ಈ ಉಪ ಚುನಾವಣೆಗಳನ್ನು ವೈಭವೀಕರಿಸಿ ಮಹಾನ ಹೋರಾಟ ಎಂಬಂತೆ ಬಿಂಬಿಸಲಾಗುತ್ತಿದೆ.

ಆದರೆ ದೈನಂದಿನ ಇತರೆ ಅತ್ಯವಶ್ಯಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಆಗಬೇಕಾಗಿದೆ. ಕೇವಲ ಚುನಾವಣೆಗೆ ಸಮಯ ನೀಡಿದರೆ ಜ್ವಲಂತ ವಿಷಯಗಳು ಮಹತ್ವ ಕಳೆದುಕೊಳ್ಳುತ್ತದೆ. ಆಡಳಿತದ ಚುಕ್ಕಾಣಿ ಹಿಡಿದವರು ಇದರ ಕುರಿತು ಗಂಭೀರವಾಗಿ ತೆಗೆದುಕೊಂಡು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿದರೆ ಒಳಿತು. 

ಎಲ್ಲಾ ಹಂತಗಳಲ್ಲಿ ಬದಲಾವಣೆ ಆದರೆ ಮಾತ್ರ ಏನಾದರೂ ಸುಧಾರಣೆ ಸಾಧ್ಯವಾಗಬಹುದು. ಜನ ಕೂಡ ಈ ರೀತಿ ಪ್ರಲೋಭನೆಗೆ ಒಳಗಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಾಗಿ ಕುಣಿದು ಕುಪ್ಪಳಿಸಿ ಅದರಿಂದ ಬರುವ ಬಿಡಿಗಾಸಿನಲ್ಲಿ ಬದುಕು ಕಟ್ಟಿಕೊಳ್ಳುವ ಮನಸ್ಥಿತಿಯಿಂದ ಹೊರಗೆ ಬರದಿದ್ದರೆ, ಸ್ವಾಭಿಮಾನ ಬೆಳೆಸಿಕೊಳ್ಳದಿದ್ದರೆ, ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿಕೊಳ್ಳದಿದ್ದರೆ, ವಿವೇಚನೆಯಿಂದ ವರ್ತಿಸದೆ ಹೋದರೆ ಜೀವನ ಇನ್ನಷ್ಟು ಅಧೋಗತಿಗೆ ಇಳಿಯಬಹುದು.

ಈ ದಿನಗಳಲ್ಲಿ ಪುರುಷರಂತೆ ಮಹಿಳೆಯರು ಸಹ ರಾಜಕೀಯ ಪಕ್ಷಗಳ ಹಿಂಬಾಲಕರೆಂಬ ಕೆಟ್ಟ ವ್ಯವಸ್ಥೆಯ ಸುಳಿಗೆ ಸಿಲುಕುತ್ತಿದ್ದಾರೆ. 

ಗುತ್ತಿಗೆ ಅಥವಾ ದಿನಗೂಲಿ ಒಪ್ಪಂದದ ರೀತಿಯಲ್ಲಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜೈಕಾರ ಹಾಕುವ ಅರೆಕಾಲಿಕ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಹೌದು, ಹೊಟ್ಟೆ ಪಾಡಿನ ಅನಿವಾರ್ಯತೆಯ ಬಗ್ಗೆಯೂ ಮರುಕವಿದೆ. ಆದರೆ ವ್ಯವಸ್ಥೆಯ ಸುಧಾರಣೆ ಹೇಗೆ ಎಂಬುದೇ ಬಹುದೊಡ್ಡ ಚಿಂತೆ. ಭ್ರಷ್ಟಾಚಾರ, ಬಡತನ, ಅನಿವಾರ್ಯತೆ ಅಜ್ಞಾನ, ಶೋಷಣೆ ಎಲ್ಲವೂ ಒಂದಕ್ಕೊಂದು ಪೂರಕವಾಗಿರುತ್ತದೆ.

ಅದನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಏನು? ಮತ್ತು ಹೇಗೆ..? ಎಂಬುದರ ಕುರಿತು ಸರ್ಕಾರಗಳು ಸವಾಲಾಗಿ ಸ್ವೀಕರಿಸಿ ಪರಿಹಾರ ಮಾರ್ಗ ಕಂಡುಹಿಡಿಯಬೇಕಿದೆ.

ಶರಣಗೌಡ ಪಾಟೀಲ್ ಪಾಳಾ 

ಸಂಪಾದಕರು,ಕಲ್ಯಾಣ ಕಹಳೆ ಪತ್ರಿಕೆ, ಕಲಬುರಗಿ