ಚನ್ನಣ್ಣ ವಾಲೀಕಾರ

ಚನ್ನಣ್ಣ ವಾಲೀಕಾರ

ವಾಚಿಕೆ-12

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರಾರು ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ ವಿಕ್ರಮ ವಿಸಾಜಿ ಅವರು ಡಾ. ಚೆನ್ನಣ್ಣ ವಾಲೀಕಾರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಡಾ. ಚೆನ್ನಣ್ಣ ವಾಲೀಕಾರರವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಲಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ಕಥೆ, ನಾಟಕ, ವಿಮರ್ಶೆ, ಪ್ರಬಂಧ, ಜೀವನ ಚರಿತ್ರೆ, ಜಾನಪದ, ಸಂಶೋಧನೆ, ಪ್ರವಾಸ ಕಥನ ಸೇರಿದಂತೆ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಚೆನ್ನಣ್ಣ ವಾಲೀಕಾರ ದಲಿತ ಬಂಡಾಯ ಘಟ್ಟದ ಪ್ರಮುಖ ಲೇಖಕರು. ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಬರವಣಿಗೆ ಮಾಡಿದರು. ಕಾವ್ಯ, ನಾಟಕ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ, ಪ್ರವಾಸ ಕಥನ ಇತ್ಯಾದಿ. ಜೊತೆಗೆ ದಲಿತ ಮತ್ತು ಪ್ರಗತಿಪರ ಚಳುವಳಿಗಳ ಭಾಗವಾಗಿದ್ದರು. ಜೀವನದ ಕೊನೆಯ ಕ್ಷಣದವರೆಗೂ ಬರಹ ಮತ್ತು ಚಳುವಳಿಯನ್ನು ಒಟ್ಟಿಗೆ ಒಯ್ಯಲು ಶ್ರಮಿಸಿದರು. ಬರಹ, ತಿರುಗಾಟ, ಚಳುವಳಿ ಮತ್ತು ಊಟ ಎಲ್ಲವೂ ಅವರಿಗೆ ಪ್ರಿಯವಾದ ಸಂಗತಿಗಳೆ. ತಾನು ಹುಟ್ಟಿದ್ದು ಇವುಗಳಿಗಾಗಿ ಮಾತ್ರ ಎಂಬಂತೆ ತೊಡಗಿಕೊಂಡಿದ್ದರು. ಮುಗ್ಧತೆ ಮತ್ತು ಪ್ರಗತಿಪರತೆಗಳ ವಿಚಿತ್ರ ಸಂಗಮ ಅವರು. ಯಾರಿಗೂ ಕೇಡನ್ನು ಬಗೆಯದ, ಊಟ ನಿದ್ದೆಗಳಿಲ್ಲದೆ ಜನಪದ ಕಲಾವಿದರನ್ನು ಹುಡುಕಿ ಊರೂರು ಅಲೆಯುವ, ದೇವದಾಸಿಯರ ಬವಣೆ ಕಂಡು ಕಣ್ಣೀರಿಡುವ, ಅವರ ಬಗ್ಗೆ ಸಾವಿರಾರು ಪುಟಗಳ ಮಾಹಿತಿ ಕಲೆಹಾಕಿದ, ದಲಿತ ಸಂಘರ್ಷ ಸಮಿತಿಯ ಶಿಬಿರಗಳಲ್ಲಿ ಮೈದುಂಬಿ ಮಾತಾಡುವ, ಎಂ.ಎ, ಕನ್ನಡದ ತರಗತಿಗಳಲ್ಲಿ ಹಾಡು, ಬಯಲಾಟದ ಪಟ್ಟುಗಳನ್ನು ಪ್ರದರ್ಶಿಸುವ, ಮನೆಯ ಮಾಳಿಗೆ ಮೇಲೆ ಶತಪಥ ತಿರುಗುತ್ತ ಹೊಸ ಕವಿತೆಗಳಿಗಾಗಿ ಹಂಬಲಿಸುವ ವಾಲೀಕಾರರು ಎಂದರೆ ಎಲ್ಲರಿಗೂ ಪ್ರೀತಿ ಮತ್ತು ಅಚ್ಚರಿ. ಹೊಸ ಯುವಕಯುವತಿ ಯರನ್ನು ಬರಹ ಮತ್ತು ಚಳುವಳಿಗಳಿಗೆ ತೊಡಗಿಸುವುದು ಅವರ ಇನ್ನೊಂದು ಆಸಕ್ತಿ. ಅನೇಕರು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡರು. ಅವರು ಚಳುವಳಿಯ ಅಂಗಳಕ್ಕೆ ತಂದ ಹಲವು ತರುಣರು ಮುಂದೆ ರಾಜ್ಯಮಟ್ಟದ ನಾಯಕರಾಗಿ ಬೆಳೆದರು. ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸಿದರು. ಚೆನ್ನಣ್ಣ ವಾಲೀಕಾರರು ಚಳುವಳಿಗಳಲ್ಲಿ ಹಾಡಲು ಬೇಕಾದ ಹಾಡುಗಳನ್ನು ರಚಿಸಿ ಕೊಟ್ಟರು. ಬಂಡಾಯ ಸಂಘಟನೆ ರೂಪುಗೊಳ್ಳುವಲ್ಲಿ ಅವರದು ಪ್ರಮುಖ ಪಾತ್ರ. ಧರ್ಮಸ್ಥಳದ ಸಮ್ಮೇಳನದಲ್ಲಿ ದಲಿತ ಗೋಷ್ಠಿ ಏರ್ಪಡಿಸಬೇಕೆಂದು ಬರೆದ ಪತ್ರ ಹಲವು ತಿರುವು ಪಡೆದುಕೊಂಡು ಪ್ರತಿಭಟನೆ ಮತ್ತು ಹೊಸ ಆಲೋಚನೆಗಳಿಗೆ ಕಾರಣವಾಯಿತು. 

ವಾಲೀಕಾರರು ನೂರಾರು ಚಳುವಳಿಗಳಲ್ಲಿ ಭಾಗವಹಿಸಿದರು. ಎಲ್ಲಿಯೇ ಆಗಲಿ ಒಂದು ಪ್ರಗತಿಪರ ಚಳುವಳಿ, ಮೌಡ್ಯವಿರೋಧಿ ಚಳುವಳಿ, ದಲಿತ ಸಂಘರ್ಷ ಸಮಿತಿಯ ಚಳುವಳಿ ನಡೆಯುತ್ತಿದೆಯೆಂದು ಗೊತ್ತಾದರೆ ಸಾಕು ಹಾಜರಾಗುತ್ತಿದ್ದರು. ಅಲ್ಲಿ ಬಾಬಾಸಾಹೇಬರ ಕುರಿತು ಬರೆದ ತಮ್ಮದೇ ಹಾಡುಗಳನ್ನು ಹಾಡುತ್ತಿದ್ದರು. ಇದಕ್ಕಾಗಿ ಯಾರಾದರೂ ತಮ್ಮನ್ನು ಕರೆಯಲಿ ಎಂದು ನಿರೀಕ್ಷಿಸುತ್ತಿರಲಿಲ್ಲ. ಇದೆಲ್ಲವೂ ತಮ್ಮ ಕರ್ತವ್ಯವೆಂಬುದು ಅವರ ಭಾವನೆಯಾಗಿತ್ತು. ಕಲಬುರ್ಗಿ, ರಾಯಚೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಭಾಗವಹಿಸಿದ ಇಂಥ ಚಳುವಳಿಗಳು ಅಪಾರ. ೧೯೭೯ರಲ್ಲಿ ಕಲಬುರಗಿ ಜಿಲ್ಲೆಯ ಚುಂಚೂರು ಮಹಾಪುರ ತಾಯಿಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಬೆತ್ತಲೆ ಪೂಜೆಯನ್ನು ವಿರೋಧಿಸಿ ನಡೆಸಿದ ಚಳುವಳಿ, ೧೯೮೦ರಲ್ಲಿ ರಾಯಚೂರು ಜಿಲ್ಲೆಯ ಅರೋಲಿಯ ಹುಲಿಗೆಮ್ಮ ದೇವಿಯ ಜಾತ್ರೆಯಲ್ಲಿ ಬೆತ್ತಲೆ ಸೇವೆಯನ್ನು ನಿಷೇಧಿಸುವಂತೆ ನಡೆಸಿದ ಚಳುವಳಿ, ೧೯೮೧ರಲ್ಲಿ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯಲ್ಲಿನ ಬೆತ್ತಲೆಸೇವೆ ವಿರೋಧಿಸಿ ನಡೆದ ಜಾತಾದಲ್ಲಿ ಭಾಗಿ, ೧೯೮೫ರಲ್ಲಿ ಕುದುರೆ ಮೋತಿ ಹೋರಾಟದಲ್ಲಿ ತೊಡಗಿಸಿಕೊಂಡದ್ದು, ೧೯೮೬ರಲ್ಲಿ ರಾಯಚೂರಿನಲ್ಲಿ ಕಾರ್ಮಿಕರ ಪರವಾಗಿ ನಡೆಸಿದ ಹೋರಾಟಗಳು, ೧೯೮೯ರಲ್ಲಿ ಲಿಂಗಸೂರು ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ನಡೆಸಿದ ಭೂಹೋರಾಟ ಹೀಗೆ ಚೆನ್ನಣ್ಣ ವಾಲೀಕಾರರು ನಿರಂತರವಾಗಿ ಜಾಥಾ, ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬಸ್ಟ್ಯಾಂಡು, ಯಾರದಾದರೂ ಮನೆಯ ಅಂಗಳ, ಶಾಲೆಕಾಲೇಜುಗಳ ಕೋಣೆ ಅಥವಾ ಕಟ್ಟೆ, ರೈಲುನಿಲ್ದಾಣ ಇವೇ ಅವರ ವಸತಿಗೃಹಗಳು. ಒಮ್ಮೊಮ್ಮೆ ಮನೆಯಿಂದಲೇ ರೊಟ್ಟಿಬುತ್ತಿಯ ಗಂಟು ಹೊತ್ತುಕೊಂಡು ಹೋಗುತ್ತಿದ್ದರು. ಇಲ್ಲವಾದರೆ ಯಾರಾದರೂ ತಂದುಕೊಟ್ಟರೆ ಅದೇ ಊಟ. ತಾನು ಮಾಡಿದ್ದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅಲ್ಲಿ ನಡೆದ ಪ್ರಸಂಗಗಳು ಮುಂದೆ ಕತೆ, ಕಾವ್ಯ, ನಾಟಕಗಳಾಗಿ ಬದಲಾಗುತ್ತಿದ್ದವು. ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ಕೂಡ ಕಾರ್ಯನಿರ್ವಹಿಸಿದರು. ಅವರ ವ್ಯಕ್ತಿತ್ವಕ್ಕೆ ಹೀಗೆ ಹಲವಾರು ಮುಖಗಳಿವೆ.

 ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 208 ಪುಟಗಳನ್ನು ಹೊಂದಿದ್ದು 210 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.