ಡಾ.ಶರಣಬಸಪ್ಪ ವಡ್ಡನಕೇರಿ
ಡಾ.ಶರಣಬಸಪ್ಪ ವಡ್ಡನಕೇರಿ
ಡಾ.ಶರಣಬಸಪ್ಪ ವಡ್ದನಕೇರಿ ಅವರು 22-05-1984 ರಂದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೋಂಗರಗಾಂವ ಗ್ರಾಮದಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಂತ ಊರಿನಲ್ಲೇ ಪಡೆದುಕೊಂಡಿದ್ದಾರೆ. ಸ್ನಾತಕೋತ್ತರ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪ್ರಥಮದರ್ಜೆಯಲ್ಲಿ ಪಾಸಾಗಿದ್ದಾರೆ. ಎಂ.ಎಡ್.ಪದವಿಯನ್ನು ಕುವೆಂಪು. ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್‌ನಲ್ಲಿ ಪಾಸಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಪದವಿಯನ್ನು ಪಡೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಮಧುರೈ ಕಾಮರಾಜ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಫಿಲ್ ಮತ್ತು ಪಿಹೆಚ್.ಡಿ ಹಾಗೂ ಶಿಕ್ಷಣದಲ್ಲಿ ಪಿಹೆಚ್. ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಡಾ.ವಡ್ಡನಕೇರಿಯವರು ವೃತ್ತಿಯಿಂದ ಅಧ್ಯಾಪಕರಾಗಿ ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರವೃತ್ತಿಯಿಂದ ಸಾಹಿತಿಗಳಾಗಿ, ಸಮಾಜ ಸೇವಕರಾಗಿ, ಮಾತೋಶ್ರೀ. ಈರಮ್ಮ ವಡ್ಡನಕೇರಿ (ಅವರ ತಾಯಿಯವರ ಸ್ಮರಣೆಗಾಗಿ) ಪ್ರತಿಷ್ಠಾನದ ಅಧ್ಯಕ್ಷರಾಗಿ, ಕಲಬುರಗಿ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ನಾಡು ಲೇಖಕರ, ಓದುಗರ ಸಹಕಾರ ಸಂಘದ ನಿರ್ದೇಶಕರಾಗಿ, ಸಿದ್ದಲಿಂಗೇಶ್ವರ ಪ್ರಕಾಶನದ ಸಲಹಾ ಸಮೀತಿ ಸದಸ್ಯರಾಗಿ ಅನೇಕ ರೀತಿಯ ಸಮಾಜಮುಖಿ ಹಾಗೂ ಸಾಹಿತ್ಯಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪಠ್ಯ ಹಾಗೂ ಪಠ್ಯತರ ಸೇರಿದಂತೆ 85 ಪುಸ್ತಕಗಳನ್ನು ರಚಿಸಿದ್ದು. ಅಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಅವ್ವ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದ್ದು, ತಮ್ಮ ಪ್ರಕಾಶನದಿಂದ 150 ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದಾರೆ.
ಹೀಗೆ ಸಮಾಜಸೇವಕರಾಗಿ ಸಾಹಿತಿಗಳಾಗಿ, ಪ್ರಕಾಶಕರಾಗಿ ಈ ಭಾಗದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕ್ರಿಯಾಶೀಲ ವ್ಯಕ್ತಿತ್ವ, ಪ್ರಾಮಾಣಿಕತನ, ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಅಲ್ಲದೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಪ್ರೆಸ್ಟಿಜೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ಸೇರ್ಪಡೆಗೊಂಡಿದ್ದು ವಿಶೇಷ. ಜೊತೆಗೆ ಚಿತ್ರದುರ್ಗ ಮುರುಘಾಮಠದ, ಬಸವಚೇತನ ಪ್ರಶಸ್ತಿ, ತರಿಕೇರೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಚಾರ ಸಂಸ್ಥೆಯಿಂದ, ಕನ್ನಡ ಕಲ್ಪತರು ಪ್ರಶಸ್ತಿ, ಸಿರಿಗನ್ನಡ ಪ್ರತಿಷ್ಠಾನದವತಿಯಿಂದ ಕನ್ನಡ ಶ್ರೀ ಪ್ರಶಸ್ತಿ, ದ.ರಾ.ಬೇಂದ್ರೆ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಸೃಜನಶೀಲ
ಬರಹಗಾರರಾದ ಇವರು ಹಲವಾರು ಸಮ್ಮೇಳನ ಮತ್ತು ಸಮಾರಂಭಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸ್ವರಚಿತ ಕವನಗಳನ್ನು ವಾಚನ ಮಾಡಿದ್ದಾರೆ.
ಶರಣಗೌಡ ಪಾಟೀಲ ಪಾಳಾ