ಗಜಲ್ ಸುತ್ತ ಮುತ್ತ :ಡಾ. ಮಲ್ಲಿನಾಥ ಎಸ್. ತಳವಾರ

ಗಜಲ್ ಸುತ್ತ ಮುತ್ತ :ಡಾ. ಮಲ್ಲಿನಾಥ ಎಸ್. ತಳವಾರ
'ಕಾವ್ಯ' ಯಾವತ್ತೂ ಬೇಡಿಕೆಯುಳ್ಳ ಚಿರಸಾಹಿತ್ಯ ಪ್ರಕಾರ. ಇದೊಂದು ಧಾರೆಯಲ್ಲ, ವಿಭಿನ್ನ ಗ್ರಹಿಕೆಗಳ, ವಿಭಿನ್ನ ತಿಳುವಳಿಕೆಯ, ವಿಭಿನ್ನ ಸಮಸ್ಯೆಗಳನ್ನು ಬಿಡಿಸಲು ಯತ್ನಿಸಿದ ಸೃಜನಶೀಲತೆಯ ಸಂಕೀರ್ಣ ಆಯಾಮ.
ಇಂಥಹ ಕಾವ್ಯ ಇಂದು ಹಲವು ದಿಕ್ಕುಗಳಲ್ಲಿ, ಬಹು ರೂಪಗಳಲ್ಲಿ ಜನಮಾನಸದಲ್ಲಿ ಬೇರೂರಿದೆ. ಅಂಥಹ ಒಂದು ಅನುಪಮ ಸಾಹಿತ್ಯವೇ 'ಗಜಲ್'! ಕನ್ನಡ ಸಾಹಿತ್ಯದಲ್ಲಿ ಇಂದು ಗಜಲ್ ಮೇನಿಯಾ ಜೋರಾಗಿಯೇ ಸದ್ದು ಮಾಡುತ್ತಿದೆ. ಅದೂ ಕಾವ್ಯವೆಂದರೆ 'ಗಜಲ್' ಎನ್ನುವಷ್ಟರ ಮಟ್ಟಿಗೆ!! ಗಜಲ್ ಪ್ರೇಮಿಗಳಿಗೆ ಇದು ನಿಜಕ್ಕೂ ಸಂತಸದ ಸಂಗತಿ. ಆದರೆ.. ಅದೇನೊ ಅಳುಕು ಗಜಲ್ ಕಾರವಾನ್ ನೊಂದಿಗೆ ಹೆಜ್ಜೆ ಹಾಕುತ್ತಿರುವುದು ಶೋಚನೀಯ! ಯಾವುದೇ ವಿಷಯವಿರಲಿ ಅದು ಸಂಖ್ಯೆಯ ಹಿಂದೆ ಬೆನ್ನು ಹತ್ತಿದರೆ ಅದರ ಚಲನೆ ಅಲ್ಲಿಯೇ ಸ್ಥಗಿತಗೊಳ್ಳುತ್ತದೆ. ಒಂದು ಅಂದಾಜಿನ ಪ್ರಕಾರ ಸಾವಿರಕ್ಕೂ ಹೆಚ್ಚಿನ ಬರಹಗಾರರು ಗಜಲ್ ಕೃಷಿಯಲ್ಲಿ ತೊಡಗಿದ್ದಾರೆ. ನೂರೈವತ್ತಕ್ಕೂ ಹೆಚ್ಚು ಸುಖನವರ್ ರವರು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇಲ್ಲಿ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಗಜಲ್ ಕೃಷಿಯಲ್ಲಿ ತೊಡಗಿರುವ ಗಜಲ್ ಕಾರರು ನಿಜವಾಗಿಯೂ ಗಜಲ್ ಬಗ್ಗೆ ಪ್ರೀತಿ, ಫ್ಯಾಶನ್ ಇದೆಯಾ ಅಥವಾ ಆಕರ್ಷಣೆ, ಪ್ರತಿಷ್ಠೆ, ತಾವೂ ಗಜಲ್ ಬರೆಯಬಲ್ಲೆವು ಎಂದು ಸಾರಸ್ವತ ಲೋಕಕ್ಕೆ ತೋರಿಸುವ ಚಪಲವಿದೆಯಾ ಎಂಬುದು! ಇದರೊಂದಿಗೆ ಇನ್ನೊಂದು ಆತಂಕಕಾರಿ ವಿಷಯವೆಂದರೆ ಗಜಲ್ ನ ಸ್ವರೂಪ, ಲಕ್ಷಣಗಳನ್ನು ಅರಿಯುವ-ಅರಿತು ಅಳವಡಿಸಿಕೊಳ್ಳುವ ಬದ್ಧತೆಯ ಮನಸುಗಳು ಕಡಿಮೆಯಾಗಿವೆ. ಹೆಚ್ಚಿನ ಶಾಯರ್, ಶಾಯರಾಗಳು 'ತನ್ನದೇ ಸರಿ' ಎನ್ನುವ ಆತ್ಮರತಿಯನ್ನು ಹೊತ್ತು ತಿರುಗುತ್ತಿದ್ದಾರೆ. ಪ್ರಯೋಗದ ಹೆಸರಲ್ಲಿ ಗಜಲ್ ನ ಕೋಮಲತೆ, ಮೃದುತ್ವ, ಭಾವತೀವ್ರತೆಯ ಕತ್ತು ಹಿಚುಕುವ ಕಾರ್ಯ ಎಗ್ಗಿಲ್ಲದೆ ಸಾಗುತ್ತಿದೆ. ಗಜಲ್ ವಾಸ್ತವಕ್ಕೆ ನೇರ ಮುಖಾವಾಣಿಯಾಗಬೇಕು ಎನ್ನುವುದು, ಚರಿತ್ರೆಗೆ ನೇರವಾಗಿ ತನ್ನನ್ನು ತೆರೆದುಕೊಳ್ಳಬೇಕು ಎನ್ನುವುದು ಹಾಗೂ ಗಜಲ್ ಗೋ, ತಮ್ಮ ಸಾಮಾಜಿಕ ಅನುಭವಗಳಿಗೂ ಗಜಲ್ ಅಭಿವ್ಯಕ್ತಿಯ ಸ್ವರೂಪಕ್ಕೂ ನೇರ ಸಂಬಂಧವನ್ನು ಕಲ್ಪಿಸುವುದು ಇಂದು ನಡೆಯುತ್ತಿದೆ. ಇದು ಸರಿಯೋ, ತಪ್ಪೊ ಎನ್ನುವ ಚರ್ಚೆಗಿಂತ ಗಜಲ್ ನ ಮೂಲ ಆಶಯವೇನೂ, ಅದು ಬಯಸುವ ಭಾವ ಬಂಧ ಎಂತಹದ್ದು, ಅದು ತೊಡಲಿಚ್ಚಿಸುವ ಭಾಷೆಯ ಹರಹು ಯಾವುದು ಎಂಬುದನ್ನು ಅರಿಯುವ ಅವಶ್ಯಕತೆ ಇದೆ. ಇನ್ನೂ ಮುಖ್ಯವಾಗಿ ಎಲ್ಲವನ್ನೂ 'ಗಜಲ್' ಚೌಕಟ್ಟಿನಲ್ಲಿಯೇ ತರಬೇಕು ಎನ್ನುವ ಜಿದ್ದು ಗಜಲ್ ಪ್ರಪಂಚ ಸಹಿಸಿಕೊಳ್ಳುತ್ತದೆಯೇ ಎಂಬುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಾಮಾನ್ಯವಾಗಿ ಭಾವನೆಗಳು ಕೆರಳುವ ಕಿಡಿಯಾಗದೆ ಅರಳುವ ಕುಡಿಯಾಗಬೇಕು ಎಂಬುದನ್ನು ಗಜಲ್ ಸದಾ ಬಯಸುತ್ತಲೇ ಇತ್ತು, ಇದೆ ಹಾಗೂ ಇರುತ್ತದೆ. ಗಜಲ್ ವರ್ತಮಾನವನ್ನು ಕಟ್ಟುವ ದರ್ಶನಕ್ಕೆ ಹೊಳಪು ಕೊಡಬೇಕಾದರೆ, ತಮ್ಮೆದುರು ಇರುವ ವರ್ತಮಾನದ ವಿಭಿನ್ನ ಶೋಷಿತ ಕೇಂದ್ರಗಳನ್ನು ಅರಿಯಬೇಕು ಎನ್ನುವ ಸಾಮಾಜಿಕ ತಾತ್ವಿಕ ಚಿಂತನೆ ಜಾರಿಯಲ್ಲಿದೆ. ಇದರೊಂದಿಗೆ ಚರಿತ್ರೆಯ ಆವರಣಕ್ಕೆ ಇಳಿದು, ಸಮುದಾಯದ ಸಂಘರ್ಷದ ಕ್ಷಣಗಳನ್ನು ವರ್ತಮಾನದ ಹೋರಾಟಕ್ಕೆ ನಿಕಶವನ್ನಾಗಿ ಮಾಡಿಕೊಳ್ಳಬೇಕು ಎಂಬ ಕೂಗೂ ಕೇಳುತ್ತಿದೆ. ಆದರೆ 'ಗಜಲ್' ಎನ್ನುವ ಕೋಮಲಾಂಗಿ ಒರಟುತನದ ಭಾರವನ್ನು ಹೊರುವುದಿಲ್ಲ. ವಿಷಯ ಏನೇ ಇರಲಿ, ಹೇಳುವ ದಾಟಿ ಹೃದಯಕ್ಕೆ ತಟ್ಟಬೇಕೆ ಹೊರತು ರಕ್ತ ಕುದಿಯಬಾರದು ಎಂಬುದು ಗಜಲ್ ನ ಸ್ಥಾಯಿಭಾವವಾಗಿದೆ. ಶಾಯರ್/ರಾ ತನ್ನ ವ್ಯಕ್ತಿಗತವಾದ ಸ್ವಪ್ರತಿಷ್ಠೆ, ಚರಿತ್ರೆಯನ್ನು ಪ್ರಶಂಸಿಕೊಳ್ಳಲು, ಇನ್ನಿತರರನ್ನು ಓಲೈಸಲು ಹಾಗೂ ತೆಗಳಲು ಗಜಲ್ ಗಳನ್ನು ಬಳಸಿಕೊಳ್ಳಬಾರದು. ಇದು ಸಾಮಾಜಿಕ ನೆಲೆಯ ಪರಿಭಾಷೆಗಿಂತ, ಸಾಂಸ್ಕೃತಿಕ ನೆಲೆಯ ಪರಿಭಾಷೆಯನ್ನು ಬಯಸುತ್ತದೆ. ಗಜಲ್ ಎನ್ನುವುದು ಮೂಲತಃ ಕಾಂತಾಸಮ್ಮಿತ ಕಾವ್ಯ ಪ್ರಕಾರ, ಇದು ಯಾವತ್ತೂ ಪ್ರಭುಸಮ್ಮಿತ ಅಲ್ಲ. ಗಜಲ್ ಬಗ್ಗೆ ಎಷ್ಟು ಮಾತಾಡಿದರೂ ಮಾತನಾಡದೆ ಉಳಿದ ಸಂಗತಿಗಳೇ ಹೆಚ್ಚು ಇರುತ್ತವೆ. ಗಜಲ್ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ. ಯಾವುದು ಎಲ್ಲಾ ಕಾಲಕ್ಕೂ ಸಲ್ಲುತ್ತದೆಯೋ ಅದುವೇ ನಿಜವಾದ 'ಗಜಲ್' ಎನಿಸಿಕೊಳ್ಳುತ್ತದೆ. ಗಜಲ್ ಗೋ ತನ್ನ ಗಜಲ್ ಗಳೊಂದಿಗೆ, ಓದುಗ ಸಹೃದಯರೊಂದಿಗೆ, ಸಮಾಜದೊಂದಿಗೆ ನಿರಂತರವಾಗಿ ಮಾತನಾಡಲು ಯತ್ನಿಸಬೇಕು. ಅಂದಾಗ ಮಾತ್ರ ಆ ಗಜಲ್ ಗೋ ಎಲ್ಲ ಕಾಲಕ್ಕೂ ಜೀವಂತವಾಗಿರಲು ಸಾಧ್ಯ!
ಡಾ. ಮಲ್ಲಿನಾಥ ಎಸ್. ತಳವಾರ
ಕನ್ನಡ ಪ್ರಾಧ್ಯಾಪಕರು, ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ, ಕಲಬುರಗಿ ೫೮೫ ೧೦೩