ನಿಜಲಿಂಗಪ್ಪ ಹಾಲವಿ

ನಿಜಲಿಂಗಪ್ಪ ಹಾಲವಿ

ಕಲಾವಿದ :ನಿಜಲಿಂಗಪ್ಪ ಹಾಲವಿ

ಕರ್ನಾಟಕದ ಚಿತ್ರಕಲಾ ಚರಿತ್ರೆಯಲ್ಲಿ ಯಾದಗಿರಿ ಜಿಲ್ಲೆ ಅತ್ಯಂತ ಮಹತ್ವದ ನೆಲೆ ಎಂಬುದಕ್ಕೆ ಅನೇಕ ಪ್ರಾಚೀನ ಸಂಗತಿಗಳು ಕಣ್ಣ ಮುಂದಿವೆ.ಆದಿ ಮಾನವರು ರಚಿಸಿದ ಕಲ್ಲು ಬಂಡೆಯ ಮೇಲಿನ ಕುಟ್ಟು, ಗೀರು,ಕೊರೆದ,ವರ್ಣಗಳಿಂದ ರಚಿಸಿದ ಚಿತ್ರಗಳು ಬಳಿಚಕ್ರ,ವರ್ಕನಹಳ್ಳಿ,ಹಿರೇ ಹೆಬ್ಬಾಳ,ಹುಣಸಗಿ, ಹಗರಟಗಿ,ಹಾರಣಗೇರಾ ಮುಂತಾದ ಕಡೆಗಳಲ್ಲಿ ಚಿತ್ರನೆಲೆಗಳು ಕಾಣುತ್ತೇವೆ.ನಂತರ ರಾಜರ ಅಧೀನದಲ್ಲಿ ತಮ್ಮ ವಿಶಿಷ್ಟ ಶೈಲಿಯೆಂದೇ ಖ್ಯಾತಿ ಪಡೆದ ಸುರಪುರ ಸಂಸ್ಥಾನದ ಚಿತ್ರಕಲೆ ನಾಡಿನ ಭವ್ಯತೆಗೆ ಸಾಕ್ಷಿಯಾಗಿದೆ.ಹೀಗೆ ಅನೇಕ ಬಗೆಯ ವೈಶಿಷ್ಟ್ಯತೆಗಳಿಂದ ಯಾದಗಿರಿ ಚಿತ್ರಕಲೆಯ ದೃಷ್ಟಿಯಿಂದ ಮಹತ್ವದ ಜಿಲ್ಲೆಯಾಗಿದೆ.

ಇನ್ನೂ ಚಿತ್ರಕಳೆಯನ್ನೇ ತಮ್ಮ ಉಸಿರಾಗಿಸಿಕೊಂಡು ಬದುಕುತ್ತಿರುವ ಅಪರೂಪದ ಕಲಾವಿದರು ನೆಲೆಸಿದ್ದಾರೆ.ಹಿರಿಯ ತಲೆಮಾರಿನ ಎಲೆ ಮರೆಯ ಕಾಯಿಯಂತಿರುವ ಬಳಿಚಕ್ರದ ದಿವಂಗತ ಎಸ್.ಮುಕುಂದ,ಯಾದಗಿರಿಯ ದಿವಂಗತ ಶಂಕರಪ್ಪ ಶೀಲವಂತ,ನಮ್ಮ ಮಧ್ಯೆ ಇರುವ ಸಂಗಣ್ಣ ದೋರನಹಳ್ಳಿ,ಎಸ್.ಡಿ.ಪಾಟೀಲ,ಡಿ.ಎನ್. ಅಕ್ಕಿ ಮುಂತಾದ ಕಲಾವಿದರ ಮಧ್ಯೆ ಕ್ರಿಯಾಶೀಲ ಕಲಾವಿದ ನಿಜಲಿಂಗಪ್ಪ ಹಾಲವಿ ಅವರು ಸಹ ಬಹುಮುಖ್ಯ ಕಲಾವಿದರು.22 ಜುಲೈ 1968 ರಂದು ತಂದೆ ಬಸವರಾಜ ಹಾಲವಿ,ತಾಯಿ ನಾಗಮ್ಮ ಅವರ ಜೇಷ್ಠ ಸುಪುತ್ರನಾಗಿ ಗುರುಮಠಕಲ್ ನಲ್ಲಿ ಜನಿಸಿದರು.ದೊಡ್ಡ ಕುಟುಂಬ ಐದು ಜನ ತಮಂದಿರು,ಅಕ್ಕ ಮತ್ತು ತಂಗಿ ಎಲ್ಲರೂ ಸೇರಿ ಎಂಟು ಜನ ಮಕ್ಕಳು.ಇವರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಗುರುಮಠಕಲ್ ನ ಸರಕಾರಿ ಶಾಲೆಯಲ್ಲಿ ಓದು ಮುಂದೆ ಚಿತ್ರಕಲೆಯಲ್ಲಿಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಕಲಬುರಗಿಯ ದಿ ಐಡಿಯಲ್ ಫೈನ್ ಆರ್ಟ್ ಮತ್ತು ಎಂ.ಎಂ.ಕೆ ಕಾಲೇಜು ಆಫ್ ವಿಜುವಲ್ ಆರ್ಟ್ಸ್ ಕಾಲೇಜಿನಲ್ಲಿ ಪಡೆದರು. ನಂತರ ಕಲಿತ ವಿದ್ಯಾ ಸಂಸ್ಥೆಯಾದ ಐಡಿಯಲ್ ಫೈನ್ ಆರ್ಟ್ ಕಾಲೇಜಿನಲ್ಲಿ 1992 ರಿಂದ ಐದು ವರ್ಷಗಳ ಕಾಲ ಕಲಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.ನಂತರ ಇವರು ಬೇರೆ ಉದ್ಯೋಗದ ದೃಷ್ಟಿಯಿಂದ ಬೆಂಗಳೂರಿಗೆ ಹೋಗುತ್ತಾರೆ.ಬೆಂಗಳೂರಿನ ಜೆ.ಎಲ್.ಅಟಿಲಿಯರ್ ಕಂಪನಿಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಉಳಿದ ಸಮಯದಲ್ಲಿ ಕಲಾಕೃತಿ ರಚಿಸುತ್ತ ಸೇವೆ ಸಲ್ಲಿಸುತ್ತಿದ್ದಾರೆ. ಬದುಕಿನ ಬಂಡಿ ಸಾಗಿಸುವುದರೊಂದಿಗೆ ಕಲಾ ಚಿಂತನೆಯಲ್ಲಿ ತೊಡಗಿಕೊಂಡು ಸದಾ ಸೃಜನಾತ್ಮಕ ಮತ್ತು ವೈಚಾರಿಕತೆಯ ಹಿನ್ನೆಲೆಯಲ್ಲಿ ಚರ್ಚೆಗೆ ಮುಖಾಮುಖಿಯಾಗುವುದರೊಂದಿಗೆ ತಮ್ಮ ಕಲೆಯ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ.ನಾಡಿನ ವಿವಿಧೆಡೆಗಳಲ್ಲಿ ಏಕವ್ಯಕ್ತಿ,ಗುಂಪು ಚಿತ್ರಕಲಾ ಪ್ರದರ್ಶನ,ಶಿಬಿರ,ಚರ್ಚೆ,ಸಂವಾದಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಸಾಕ್ಷಿಕರಿಸಿದ್ದಾರೆ.ಇವರ ಕಲೆಯ ಚಿಂತನೆಗೆ ಹಲವು ಗೌರವಗಳು ಸಂದಿವೆ.

ಇವರ ಕಲಾ ಸಾಧನೆಯ ಹೆಜ್ಜೆಗಳನ್ನು ಅವಲೋಕಿಸಿದಾಗ 1984 ರಿಂದ 1988 ರವರೆಗೆ ಕಲಬುರಗಿ ಕಲಾ ಮಹೋತ್ಸವ,1986 ರಿಂದ 1990 ರವರೆಗೆ ಮೈಸೂರು ದಸರಾ ಕಲಾ ಪ್ರದರ್ಶನ,1987 ರಿಂದ 1994 ರವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ವಾರ್ಷಿಕ ಕಲಾ ಪ್ರದರ್ಶನ,1988 ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿದ ಬೆಳ್ಳಿ ಮಹೋತ್ಸವ ಕಲಾ ಪ್ರದರ್ಶನ,1988 ರಲ್ಲಿ ಅಖಿಲ ಭಾರತ ವಿದ್ಯಾರ್ಥಿಗಳ ಕಲಾ ಪ್ರದರ್ಶನ ನವ ದೆಹಲಿ,1991 ರಿಂದ1992 ರವರೆಗೆ 17 ಮತ್ತು 18 ನೆಯ ಮಿಕ್ಸ್ಡ್ ಬ್ಯಾಗ್ ಕಲಾ ಪ್ರದರ್ಶನವನ್ನು ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಂಡು ಚಿತ್ರಕಲಾ ಪ್ರದರ್ಶನ ಮಾಡಿದರು.ಹೀಗೆ1991 ರಿಂದ ಕಲಬುರಗಿ, ಗದಗ,1991 ರಿಂದ 1994 ರವರೆಗೆ ನಾಗಪುರ,1993 ರಲ್ಲಿ ಬಾಂಬೆ ಆರ್ಟ್ ಸೊಸಾಯಿಟಿ ಮುಂಬೈ,1992 ಮದ್ರಾಸ್,1989 ರಿಂದ 2008 ರವರೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರಿನ ವಾರ್ಷಿಕ ಕಲಾ ಪ್ರದರ್ಶನ,2017-18 ರಲ್ಲಿ 46 ಮತ್ತು 47 ನೇ ವಾರ್ಷಿಕ ಕಲಾ ಪ್ರದರ್ಶನ ಲಲಿತಕಲಾ ಅಕಾಡೆಮಿ ಬೆಂಗಳೂರು,1994 ರಲ್ಲಿ ವಿಜಯಪುರ,1989 ಕಲಬುರಗಿ,1995 ಬೆಂಗಳೂರು,1995 ನವದೆಹಲಿ,2019 ಹೈದ್ರಾಬಾದ್ ಹೀಗೆ ಸುಮಾರು 19 ಬೇರೆ ಬೇರೆ ಸ್ಥಳಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಿ ಜನ ಮನ ಗೆದ್ದಿದ್ದಾರೆ.

ಇನ್ನೂ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು 2008 ರಲ್ಲಿ ಧೈರಾ ಸೆಂಟರ್ ಫಾರ್ ಆರ್ಟ್ಸ್ ಐಂಡ್ ಕಲ್ಚರ್ ಹೈದ್ರಾಬಾದ್,ಮತ್ತೆ ಅದೇ ಸಾಲಿನಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನ ಸಹಾಯದಲ್ಲಿ ಆಲೇಖ ಕಲಾ ಗ್ಯಾಲರಿಯಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿದರು.ಇವರ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಹೆಸರಾಂತ ಕವಿ ನಾಡೋಜ ಡಾ.ಸಿದ್ದಲಿಂಗಯ್ಯ ಅವರು ನಿಜಲಿಂಗಪ್ಪ ಅವರು ನಿಜಕ್ಕೂ ಉತ್ತಮ ಪ್ರತಿಭಾವಂತ ಕಲಾವಿದ,ಅವರ ಕಲಾಕೃತಿಯಲ್ಲಿ ಸಾಮಾಜಿಕ ಅನ್ವೇಷಣೆ ಮಾಡಿದಂತಿದೆ.ಅವರ ಕಲಾಕೃತಿಗಳು ನಿಮಂತಹ ವಿಮರ್ಶಕರು ಅವುಗಳ ವಿವರಣೆ ಬರೆಯಬೇಕಿದೆ ಎಂದು ನನ್ನೊಂದಿಗೆ ಮಾತಾಡಿದ ನೆನಪು.

ಇನ್ನೂ ಹಲವು ಕಲಾವಿದರೊಂದಿಗೆ ಸೇರಿ ಗುಂಪು ಕಲಾ ಪ್ರದರ್ಶನಗಳನ್ನು ಸಹ ಮಾಡಿದ್ದಾರೆ.1991 ರಿಂದ 2019 ರ ವರೆಗೆ ಒಂಬತ್ತು ಕಡೆ ಉದಾಹರಣೆಗೆ ಬೆಂಗಳೂರು, ಮದ್ರಾಸ್,ನವದೆಹಲಿ,ರಾಯಚೂರು, ಹೈದ್ರಾಬಾದ್ ಹೀಗೆ ಹಲವೆಡೆ ಪ್ರದರ್ಶನ ಮಾಡಿದ್ದಾರೆ.ಇನ್ನೂ ಕಲಾವಿದನಿಗೆ ಶಿಬಿರಗಳು ಸಹ ಬಹು ಮುಖ್ಯ ಕಾರಣ ಹಿರಿಯ ಕಲಾವಿದರೊಂದಿಗಿನ ಮುಖಾಮುಖಿ ಚರ್ಚೆ ಸಂವಾದ,ಕಲಾಕೃತಿ ರಚನಾ ವಿಧಾನ ಸೇರಿದಂತೆ ಒಬ್ಬರನ್ನೊಬ್ಬರು ನೋಡಿ ಕಲಿಯುವ,ಕಲಿಸುವ ಪ್ರಕ್ರಿಯೆಯಲ್ಲಿ ಕಲಾ ಶಿಬಿರ ಪ್ರಮುಖವಾದದ್ದು ಇಂತಹ ಸುಮಾರು ಹದಿಮೂರು ಕಲಾ ಶಿಬಿರದಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸಿದ್ದಾರೆ.ಉದಾಹರಣೆಗೆ 1992 ರಲ್ಲಿ ಅಂತಾರಾಷ್ಟ್ರೀಯ ಶಿಲ್ಪ ಮತ್ತು ವರ್ಣ ಚಿತ್ರ ಕಲಾ ಶಿಬಿರ ಕಲಬುರಗಿ, 1993 ರಲ್ಲಿ ಕಲಾಮೇಳ ಬೆಂಗಳೂರು,1995 ರಲ್ಲಿ ಮತ್ತೆ ಬೆಂಗಳೂರು,1999 ಹಂಪಿ,ರಾಯಚೂರು,2000 ರಲ್ಲಿ ಬೆಂಗಳೂರು,2003 ನವದೆಹಲಿ,2004 ಮದ್ರಾಸ್,2015 ತುಮಕೂರು ಹೀಗೆ ಹಲವೆಡೆ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.

ಇವರ ಕಲಾಕೃತಿಗಳು ಕಲಬುರಗಿ, ದಾವಣಗೆರೆ, ಹಂಪಿ,ಬೆಂಗಳೂರು, ನಾಗಪುರ,ಮೈಸೂರು, ರಾಯಚೂರು ಮುಂತಾದ ಸ್ಥಳಗಳಲ್ಲಿ ಕಲಾಕೃತಿಗಳು ಸಂಗ್ರಹಗೊಂಡಿವೆ.

ಹಾಗಾದರೆ ಇವರ ಕಲಾಕೃತಿಗಳ ಅರ್ಥ ವಿನ್ಯಾಸ ವೈವಿಧ್ಯಮಯ ಸಂಗತಿಗಳೇನು ? ಎಂಬ ಪ್ರಶ್ನೆಗೆ ಹಲವು ವಿವಿಧತೆಯಲ್ಲಿ ಉತ್ತರ ಕಂಡುಕೊಳ್ಳಬಹುದು.ಇವರ ವಿದ್ಯಾರ್ಥಿ ಬದುಕಿನಲ್ಲಿ ಸಾಮಾನ್ಯವಾಗಿ ಎಲ್ಲಾ ಬಗೆಯ ಚಿತ್ರಗಳನ್ನು ಬಿಡಿಸಿರುವುದು ಕಂಡುಬರುತ್ತದೆ.ಆದರೆ ಉನ್ನತ ಕಲಾ ಕಲಿಕೆಯಲ್ಲಿ ಒಂದು ಶೈಲಿಯ ಜೊತೆಯಲ್ಲಿ ಸಾಗಬೇಕಾಗುತ್ತದೆ.ಮುಂದುವರೆದ ಮಾರ್ಗವೇ ಇವರ ಅಮೂರ್ತತೆಯ ಕಲಾಕೃತಿಗಳ ರಚನಾ ಪಯಣ.

ಶೀರ್ಷಿಕೆ ರಹಿತವಾದ ಕಲಾಕೃತಿಗೆ ಅಮೂರ್ತ ಎಂದು ಭಾವಿಸುವ ಪರಿ ಕಲಾ ವಲಯದಲ್ಲಿದೆ.ಹಾಗಾದರೆ ಅಮೂರ್ತತೆ ರೂಪ ಅಲ್ಲವೇ?ಮೂರ್ತರೂಪ ಕಲಾಕೃತಿಯೇ? ಎಂಬ ಹಲವು ಚರ್ಚಾಸ್ಪದ ಸಂಗತಿಗಳಿಗೆ ಮೌನವಾಗಿಯೇ ಅಥವಾ ಮಾತಿನ ಸುರಿಮಳೆಯಲ್ಲಿಯೇ ಉತ್ತರ ಕಂಡುಕೊಳ್ಳುವ ಮಾರ್ಗ ಕಾಣಬಹುದು.ಹಾಗಾದರೆ ನಿಜಲಿಂಗಪ್ಪ ಹಾಲವಿ ಅವರ ಕಲಾಕೃತಿಗಳು ಮೊದ ಮೊದಲಿಗೆ ಅರ್ಥವನ್ನು ಗುರುತಿಸಿ ಚಿತ್ರ ಬರೆದದ್ದು ಕಾಣುತ್ತೇವೆ.ನಂತರ ಅರ್ಥ ರಹಿತವಾದ ಚಿತ್ರಗಳನ್ನು ರಚಿಸಿದ್ದು ಕಾಣುತ್ತೇವೆ.ಮೊದಲ ಹಂತದ ಚಿತ್ರಗಳಲ್ಲಿ ಪ್ರೇಮ ಕಾಮದ,ಬಯಕೆಯನ್ನರಸಿ ಬಾಡಿದ್ದು,ಖುಷಿ ಪಟ್ಟಿದ್ದು,ಆಕಾಶದಲ್ಲಿ ತೇಲುವ ಪಕ್ಷಿಯ ರೂಪವಾಗಿ ಬಯಕೆಯನ್ನು ಪಡೆಯಲು ಪ್ರಯತ್ನಿಸಿದ್ದು,ಸತಿ ಪತಿಗಳೊಂದಾಗದ ಭಕ್ತಿಯು ಬೇರ್ಪಟ್ಟ ಬಗೆಯನ್ನು ವಿವರಿಸಿದಂತೆ,ಮತ್ತೊಂದೆಡೆ 1995 ರಲ್ಲಿ ರಚನೆಯಾದ ಕುದುರೆ ಮತ್ತು ಮಹಿಳೆ,ಸಂದೇಶ,ಈ ತರದ ಕಲಾಕೃತಿಗಳು ಕಾಮದ ಸೆಳವಿನಿಂದ ಬಯಕೆಯನ್ನು ಈಡೇರಿಸಿಕೊಳ್ಳಲು ಮುಂದಾಗಿರಬೇಕು ಅಲ್ಲವೇ ಅಂತಲೂ ಅನಿಸುತ್ತದೆ.ನಗ್ನತೆ ಅನ್ನುವುದು ಮಾನವ ಬಯಕೆಯ ದಾಹ ಮತ್ತು ತಿರಸ್ಕಾರ ಅನ್ನುವ ಚಂಚಲತೆಯ ಸಂದರ್ಭವನ್ನು ತಿಳಿಸಿದಂತಿದೆ.ನಂತರ ಕಾರ್ಗಿಲ್ ಎಂಬ ಕಲಾಕೃತಿಯು ದೇಶ ಪ್ರೇಮವನ್ನು ಮೆರೆದ ರೀತಿಯನ್ನು ಪ್ರಸ್ತುತ ಪಡಿಸುತ್ತದೆ.ಹೀಗೆ ಹಲವು ವಸ್ತು ವಿಷಯಗಳನ್ನು ವಿಶ್ಲೇಷಣೆಯ ಆಕರ್ಷಕ ವರ್ಣ ಚಿತ್ತಾರಗಳು ಹಾಲವಿಯವರ ಕೈ ಬೆರಳುಗಳಿಗೆ ತಾಕಿದ್ದು ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ.

ಇನ್ನೂ ಎರಡನೇ ಬಗೆಯ ಚಿತ್ರಕಲಾಕೃತಿಗಳನ್ನು ನೋಡಿದಾಗ ಅಮೂರ್ತತೆ ಎಂಬ ತಲೆ ಬರಹದ ಚಿತ್ರಗಳು.ಕ್ಯಾನವಾಸ್ ಗೆ ಅರೆ ಬರೆ ಗೆರೆಗಳ ರೂಪಿಸುವಿಕೆಯಲ್ಲಿ ಅರ್ಥನಾದದ ಮಿಡಿತವನ್ನು ತಿಳಿಸುವಂತಿದೆ.ನೋಟಕ್ಕೆ ಬಣ್ಣವನ್ನಿಳಿಸಿದ,ಆಯತ, ಚೌಕ್,ದುಂಡು,ನೇರ ಸರಳ ,ವಕ್ರ ,ರೇಖಾತ್ಮಕ ಪ್ರಕ್ರಿಯೆಯ ವಿಧದ ರೂಪಾತ್ಮಕತೆ,ಬಣ್ಣಗಳ ಬದಿಗೊಂದು ಬಣ್ಣದ ಲೇಪನ ಕಲಾತಜ್ಞರ ನೋಟಕ್ಕೆ ಅನೇಕ ಬಗೆಯ ವಿವರಣೆಯನ್ನು ಒದಗಿಸಬಲ್ಲ ಕಲಾಕೃತಿಗಳು ಅಂತ ಅನಿಸುತ್ತವೆ.ಅಕ್ರಲಿಕ್,ನೀರು ಬಣ್ಣ,ಆಯಿಲ್ ಮುಂತಾದ ವರ್ಣ ವೈಭವದಲ್ಲಿ ಕ್ಯಾನವಾಸ್ ಅರ್ಥವನ್ನು ಕಟ್ಟಿಕೊಂಡ ಬಗೆ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹೊಸ ಆವಿಸ್ಕಾರದ ನೆಲೆಯನ್ನು ಬರೆದಂತಿದೆ.ನೀಲಿ,ಹಸಿರು,ದಟ್ಟ ಕೆಂಪು, ಹಳದಿ, ಬಿಳಿ,ಕಪ್ಪು ಮುಂತಾದ ಮಿಶ್ರ ಬಣ್ಣಗಳ ಸೊಬಗಿನಿಂದ ಕಂಗೊಳಿಸುವ ಅಮೂರ್ತತೆಯಲ್ಲಿ ಸಾಮಾಜಿಕ ಸಂವೇದನೆಯ ಗುಣಗಳಿವೆ.ಬ್ರೇಶ್ನಿಂದ ಕ್ಯಾನವಾಸ್ ಬರೆಸಿಕೊಂಡ ಗೆರೆಗಳ ಚೆಲುವು,ದಟ್ಟ ಮತ್ತು ತೆಳ್ಳನೆಯ ಲೇಪನದ ಬಣ್ಣ,ಅಲ್ಲಲ್ಲಿ ಸಾಂದರ್ಭಿಕ ಸನ್ನಿವೇಶಗಳಿಗೆ ತಕ್ಕಂತೆ ಉಗಮಗೊಂಡ ಕ್ರಿಯಾರೂಪಕದ ಸ್ಟಕ್ಚರ್ಗಳು,ನೋಡಲು ಕುತೂಹಲ ಅಷ್ಟೇ ಗಂಭೀರ ಅಧ್ಯಯನದ ಫಲಿತಗಳು.ನೋಡುವ ನೋಟದಲ್ಲಿ ಅರ್ಥವನ್ನು ಕಲ್ಪಿಸುವ ತಂತ್ರಗಾರಿಕೆ ಹಾಲವಿಯವರದು.

ಮೂರನೇ ಹಂತದ ಕಲಾ ರಚನೆಯಲ್ಲಿ ನಿಸರ್ಗ ಪ್ರೇಮದ ಚಿತ್ತಾರಗಳು ಅರಳಿವೆ.ಸೃಜನಾತ್ಮಕ ಚಿಂತನೆಯ,ಹೊಸ ಮಾದರಿಯ ಸೃಷ್ಟಿಯನ್ನು ಹೃದಯದಿಂದ ಆರಾಧಿಸಿದ ರಚನೆ ಇವರದಾಗಿದೆ.ಎಲ್ಲವನ್ನು ಸಹೃದಯತೆಯಿಂದ ಕಾಣುವ ಪ್ರೀತಿ,ಅಷ್ಟೇ ಅನ್ಯಾಯದ ಅಳಲಿಗೆ ಧ್ವನಿಯಾಗುವ ನೀತಿ ನಿಜಕ್ಕೂ ಹಾಲವಿಯವರ ಸಾಮಾಜಿಕ ಸಾಂಸ್ಕೃತಿಕ ಚಿಂತನೆಯ ಚೆಲುವೆಂದು ಹೇಳಲು ಸಂತಸವೆನಿಸುತ್ತಿದೆ.ಇವರ ನಿರಂತರವಾಗಿ ಮಾಡಿದ ಕಲಾ ಸಾಧನೆಗಾಗಿ 1987 ರಲ್ಲಿ ಕಲಬುರಗಿ ಕಲಾ ಮಹೋತ್ಸವದ ಉತ್ತಮ ವಿದ್ಯಾರ್ಥಿ ಎಂಬ ಗೌರವ ಪಡೆದಿದ್ದಾರೆ.1985 ರಿಂದ 1988 ರವರೆಗೆ ಕಾಲೇಜ್ ಆಫ್ ವಿಜುವಲ್ ಆರ್ಟ್ ಸಂಸ್ಥೆಯ ಪ್ರಶಸ್ತಿ,1992 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.1993 ರಲ್ಲಿ ನಾಗಪುರ ಸೌತ್ ಸೆಂಟ್ರಲ್ ಜೋನ್ ಕಲ್ಚರ್ನ್ ವತಿಯಿಂದ ಯುವ ಪ್ರಶಸ್ತಿ,2001 ರಲ್ಲಿ ಮತ್ತೆ ಅದೇ ನಾಗಪುರ ಸಾಂಸ್ಕೃತಿಕ ಕೇಂದ್ರದಿಂದ ಪ್ರೊಫೆಷನಲ್ ಕೆಟಗೇರಿಯಲ್ಲಿ ಪ್ರಥಮ ಪ್ರಶಸ್ತಿ,2017 ರಲ್ಲಿ ಕಲಬುರಗಿಯ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ನೀಡುವ ದೃಶ್ಯಬೆಳಕು ಪ್ರಶಸ್ತಿಯನ್ನು ಪಡೆದಿದ್ದಾರೆ.ನಂತರ 2020 ರಲ್ಲಿ ನಾಡೋಜ ಡಾ.ಜೆ.ಎಸ್. ಖಂಡೇರಾವ್ ಪ್ರತಿಷ್ಠಾನದ ರಾಷ್ಟ್ರೀಯ ಮಟ್ಟದ ಕಲಾ ಸ್ಪರ್ಧೆಯಲ್ಲಿ ಮೆರಿಟ್ ಪ್ರಮಾಣ ಪತ್ರವನ್ನು ಪಡೆದಿದ್ದಾರೆ ಹೀಗೆ ಹತ್ತಾರು ಪುರಸ್ಕಾರಗಳನ್ನು ಪಡೆದ ನಿಜಲಿಂಗಪ್ಪ ಹಾಲವಿಯವರು ನಮ್ಮ ಯಾದಗಿರಿ ಜಿಲ್ಲೆಯ ಹೆಮ್ಮೆಯ ಹಿರಿಯ ಕಲಾವಿದರು ಎಂಬುದು ಗೌರವದ ಸಂಗತಿ.

                      ಲೇಖನ : ಡಾ.ಬಸವರಾಜ ಎಸ್.ಕಲೆಗಾರ

    ಸಹಾಯಕ ಅಧ್ಯಾಪಕರು  ದೃಶ್ಯಕಲಾ ಅಧ್ಯಯನ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ