ಡಾ. ಶರಣಬಸವಪ್ಪ ಅಪ್ಪಾಜಿಗೆ ‘ಜ್ಞಾನ ದಾಸೋಹ ರತ್ನ’ ಪ್ರಶಸ್ತಿ ಪ್ರದಾನ

ಡಾ. ಶರಣಬಸವಪ್ಪ ಅಪ್ಪಾಜಿಗೆ ‘ಜ್ಞಾನ ದಾಸೋಹ ರತ್ನ’ ಪ್ರಶಸ್ತಿ ಪ್ರದಾನ
ಕಲಬುರಗಿ, ಜುಲೈ 2:
ಕಲಬುರಗಿಯ ಶರಣಬಸವೇಶ್ವರ ಪುಣ್ಯಕ್ಷೇತ್ರದ ಅನುಭವ ಮಂಟಪದಲ್ಲಿ ಬುಧವಾರ ಸಂಜೆ ಆಯೋಜಿಸಲಾದ ವಿಧಿವತ್ತಾದ ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರಿಗೆ *‘ಜ್ಞಾನ ದಾಸೋಹ ರತ್ನ’* ಪ್ರಶಸ್ತಿ ಹಾಗೂ ಬೆಳ್ಳಿ ಕೀರೀಟವನ್ನು ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿಯನ್ನು ಹಾಸನ ಮೂಲದ ಶಾನಭೋಗ ಶ್ರೀ ದಾಸಪ್ಪ ದತ್ತಿಯವರ ಆಶ್ರಯದಲ್ಲಿ, ಪ್ರಶಸ್ತಿ ಸಮಿತಿ ಸಂಚಾಲಕರಾದ ಶ್ರೀ ಕೆ.ಪಿ. ವೆಂಕಟೇಶಮೂರ್ತಿ ಅವರು ಸಮರ್ಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ವಹಿಸಿದ್ದರು. ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾ ಜಿ, ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ವೆಂಕಟೇಶಮೂರ್ತಿ ಅವರು, “ಡಾ. ಅಪ್ಪಾಜಿಯವರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಪಾರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶಾನಭೋಗ ದಾಸಪ್ಪ ದತ್ತಿ ಸಂಸ್ಥೆಯಿಂದ ಈಗಾಗಲೇ ೨೨೮ ಜನರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಕೇಂದ್ರ ಪ್ರಧಾನಿ ನರೇಂದ್ರ ಮೋದಿಯವರಿಗೂ ಡಿಸೆಂಬರ್ ೨೬ ರಂದು ಚಿನ್ನದ ಕೀರೀಟ ನೀಡಲು ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು.
ಆಂಧ್ರಪ್ರದೇಶದ ಶ್ರೀಶೈಲಂನ ಸಾರಂಗ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ, “ಡಾ. ಅಪ್ಪಾಜಿಯವರು ಸಮಾಜ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸಾಧನೆಯು ದೇಶದ ಮೂಲೆಮೂಲೆಯಲ್ಲಿ ತಲುಪಿದ್ದು, ಈ ಸೇವೆಯನ್ನು ಸರಿಯಾಗಿ ಗುರುತಿಸಿ ಗೌರವಿಸಿರುವ ದಾಸಪ್ಪ ದತ್ತಿ ಅವರ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.
“ಶೈಕ್ಷಣಿಕವಾಗಿ ಹಿಂದೆ ಹಿಂದುಳಿದಿದ್ದ ಪ್ರದೇಶವನ್ನು ವಿದ್ಯಾಕೇಂದ್ರವನ್ನಾಗಿ ಪರಿವರ್ತಿಸಿರುವ ಡಾ. ಅಪ್ಪಾಜಿಯವರ ಸಾಧನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪುರಸ್ಕರಿಸದಿರುವುದು ದುಃಖಕರ. ಅವರಿಗೆ ‘ಪದ್ಮಭೂಷಣ’ ಮತ್ತು ‘ಕರ್ನಾಟಕ ರತ್ನ’ ಪ್ರಶಸ್ತಿಗಳನ್ನು ನೀಡುವಂತೆ ಜನತೆಯ ಬಲವಾದ ಬೇಡಿಕೆ ಇದೆ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ. ಎಸ್.ಎಂ. ಹಿರೇಮಠ, ಡಾ. ಉಮಾದೇವಿ ದೇಶಮುಖ (ಸ್ವಾಗತ), ಡಾ. ಅಲ್ಲಂಪ್ರಭು ದೇಶಮುಖ್ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.