ಸೈನಿಕರಿಗೆ ಹಾಗೂ ರೈತರಿಗೆ ಗೌರವ ಸಲ್ಲಿಸಿದ ಕಲಬುರಗಿಯ ಸಮಗ್ರ ಅಭಿವೃದ್ಧಿ ಸಂಸ್ಥೆ”

೭೯ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯೋಧರಿಗೆ ಸನ್ಮಾನ
ಕಲಬುರಗಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಸಮಗ್ರ ಅಭಿವೃದ್ಧಿ ಸಂಸ್ಥೆಯಲ್ಲಿ ಯೋಧರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕ ಶ್ರೀ ಶಿವಶರಣಪ್ಪ ತಾವರಖೇಡ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು. “ದೇಶದ ರಕ್ಷಣೆಯನ್ನು ಯೋಧರು ಮತ್ತು ಜನರ ಹೊಟ್ಟೆಯನ್ನು ತುಂಬಿಸುವುದನ್ನು ರೈತರು ಮಾಡುತ್ತಾರೆ. ಹೀಗಾಗಿ ಸೈನಿಕರು ಹಾಗೂ ರೈತರಿಗೆ ಗೌರವಿಸುವುದು ನಮ್ಮ ಕರ್ತವ್ಯ,” ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸೈನಿಕ ಕಲಗೌಡ ಸನಬಂಗಿ ಮಾತನಾಡುತ್ತಾ, “ಇಂದಿನ ಯುವಕರು ದೇಶಪ್ರೇಮದಿಂದ ದೂರವಾಗುತ್ತಿರುವ ಸ್ಥಿತಿ ಕಂಡು ಬರುತ್ತಿದ್ದು, ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವು ಮಕ್ಕಳಿಗೆ ಪ್ರೇರಕವಾಗಬೇಕು. ಪಾಶ್ಚಾತ್ಯ ಅನುಕರಣೆಯಲ್ಲ, ಭಾರತೀಯ ಸಂಸ್ಕೃತಿ ಮತ್ತು ದೇಶಭಕ್ತಿಯ ಬಲವನ್ನು ಅರಿತು, ಸೈನಿಕರು ಮತ್ತು ರೈತರಿಗೆ ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಾಹಿತ್ಯಿಕ ಹರಭಾರಿ ಹೆಚ್.ಎಸ್. ಬರಗಾಲಿ (ಕುಸನೂರ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಿರೀಶಗೌಡ ಇನಾಮದಾರ (ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಅಧ್ಯಯನ ಸಂಶೋಧನ ಸಮಿತಿ) ಹಾಗೂ ನಿವೃತ್ತ ಶಿಕ್ಷಕ ವಿಠ್ಠಲ ಕಂಬಾರ ಅವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಸಿದ್ರಾಮ್ ರಾಜಮಾನೆ ಮಂಡಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ನಾಗರಾಜ ಬಿರಾದಾರ ಮಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ಅರವಿಂದ ಠಾಕಾರ, ನೀಲಮ್ಮ ಗೊಬ್ಬೂರ, ಎನ್. ಎಸ್. ಪಾಟೀಲ್, ರಾಹುಲ್ ಕೆ.ಆರ್.ಎಸ್, ಬಸವಂತರಾಯ ಕೋಳಕೂರ ಸ್ವಾಗತಿಸಿದರು. ನಿರ್ಮಲಾ ಸನಬಂಗಿ ವಂದಿಸಿದರು.
ನಾಗರಾಜ ಬಿರಾದಾರ,ಕಾರ್ಯದರ್ಶಿ,ಸಮಗ್ರ ಅಭಿವೃದ್ಧಿ ಸಂಸ್ಥೆ, ಕಲಬುರಗಿ