ನಿಸರ್ಗದ ನಿಶ್ಯಬ್ದ ಬೇಸರ" (ಗಜಲ್)

ನಿಸರ್ಗದ ನಿಶ್ಯಬ್ದ ಬೇಸರ" (ಗಜಲ್)

  ನಿಸರ್ಗದ ನಿಶ್ಯಬ್ದ ಬೇಸರ" (ಗಜಲ್)

ಅಂಗಳದ ರಂಗವಲ್ಲಿಯ ಮುಖ ಬಾಡಿದೆ ಅವನು ಮುನಿಸಿಕೊಂಡಿರಬಹುದು

ತಿಂಗಳ ಬೆಳಕಿಗೂ ಹೊಳಪಿಲ್ಲದಾಗಿದೆ ಅವನು ಮುನಿಸಿಕೊಂಡಿರಬಹುದು

ಹಿತ್ತಲಲಿ ಅರಳಿದ ಹೀರೆ ಹೂವಿನ ಬಣ್ಣ ಮಾಸಿ ಘಾಸಿಯಾಗಿದೆ ಏಕೋ

ಬಿತ್ತರದ ಬಾನಿನಲಿ ಚುಕ್ಕಿ ಬಿಕ್ಕುತಿದೆ ಅವನು ಮುನಿಸಿಕೊಂಡಿರಬಹುದು

ಬೀಸುವ ಗಾಳಿ ಚಲನೆ ಮರೆತು ನಿಶ್ಚಲಗೊಂಡಿದೆ ಸೊಗಸಿಲ್ಲ ಸುಖವಿಲ್ಲ ಕೆಳದಿ

ಮುಂಜಾನೆಯ ಹೂ ಬಿಸಿಲು ಬೆಂಕಿಯಾಗಿದೆ ಅವನು ಮುನಿಸಿಕೊಂಡಿರಬಹುದು

ಅಡೆ ತಡೆಯಿರದೆ ಹುಚ್ಚೆದ್ದು ಓಡುವ ನದಿ ವೇಗದ ಗತಿ ಕಳೆದುಕೊಂಡಿದೆ ಕೇಳು

ತೋಡಿದ ಒರತೆಯ ನೀರ ಸೆಲೆ ಅಳುತಿದೆ ಅವನು ಮುನಿಸಿಕೊಂಡಿರಬಹುದು

ಚೈತ್ರದಲ್ಲೂ ಕೂಜನದ ಕಲರವವಿಲ್ಲ ಅರುಣಾ ಮಾತು ಮನದಲ್ಲೆ ಉಳಿದಿವೆ

ಬನದ ಚಿಗುರು ಕಣ್ಣಲ್ಲೇ ಜೀವ ಹಿಡಿದಿದೆ ಅವನು ಮುನಿಸಿಕೊಂಡಿರಬಹುದು

        ಅರುಣಾ ನರೇಂದ್ರ