ಕಲ್ಯಾಣಕ್ಕೆ ಮತ್ತೆ ಮಲತಾಯಿ ಧೋರಣೆ ಆಗದಂತೆ – ಹೊಸ ಸಮಿತಿಯ ವರದಿಗೆ ಕಟ್ಟುನಿಟ್ಟಾದ ಅಗತ್ಯ: ಹೋರಾಟ ಸಮಿತಿಯ ಆಗ್ರಹ

ಕಲ್ಯಾಣಕ್ಕೆ ಮತ್ತೆ ಮಲತಾಯಿ ಧೋರಣೆ ಆಗದಂತೆ – ಹೊಸ ಸಮಿತಿಯ ವರದಿಗೆ ಕಟ್ಟುನಿಟ್ಟಾದ ಅಗತ್ಯ: ಹೋರಾಟ ಸಮಿತಿಯ ಆಗ್ರಹ
ಕಲಬುರಗಿ: ನಂಜುಂಡಪ್ಪ ವರದಿ ಮಾನದಂಡದಂತೆ, ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ನೂತನವಾಗಿ ರಚನೆಯಾಗಿರುವ ಪ್ರೊ. ಎಂ. ಗೋವಿಂದರಾವ ನೇತೃತ್ವದ ಪ್ರಾದೇಶಿಕ ಅಸಮತೋಲನಾ ನಿವಾರಣೆ ಸಮಿತಿಯ ವರದಿಗೆ ಸರಕಾರ ಬದ್ಧತೆ ಪ್ರದರ್ಶಿಸಬೇಕು. ಭವಿಷ್ಯದಲ್ಲಿ ನಂಜುಂಡಪ್ಪ ವರದಿ ಶಿಫಾರಸ್ಸುಗಳಿಗೆ ಗಾಳಿಗೆ ತೂರಿದಂತೆ ಗೋವಿಂದರಾವ್ ವರದಿಗೂ ಸಹ ಮಲತಾಯಿ ಧೋರಣೆ ಆಗದಂತೆ ವರದಿಯಲ್ಲಿ ಕಟ್ಟುನಿಟ್ಟಾದ ಎಚ್ಚರಿಕೆಗಳನ್ನು ಸರಕಾರಕ್ಕೆ ನೀಡುವ ಮೂಲಕ ಕಾಲಮಿತಿಯಲ್ಲಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಸ್ಪಷ್ಟ ನಿರ್ದೇಶನಗಳು ನೀಡಿ ಪಾಲಿಸುವಂತೆ ಹೊಸ ಆಯೋಗದ ವರದಿ ಸರಕಾರಕ್ಕೆ ಸ್ಪಷ್ಟಪಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿ ಜಂಟಿಯಾಗಿ ಆಗ್ರಹಿಸಿದ್ದಾರೆ.
ಇಂದು ನಗರದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದವರು 2002 ರಲ್ಲಿ ಕರ್ನಾಟಕ ರಾಜ್ಯದ ಒಟ್ಟು 175 ತಾಲ್ಲೂಕುಗಳಲ್ಲಿ ಅತ್ಯಂತ ಹಿಂದುಳಿದ 39 ಅತೀ ಹಿಂದುಳಿದ 40, ಹಿಂದುಳಿದ 35 ತಾಲ್ಲೂಕುಗಳಲ್ಲಿ ಕಲ್ಯಾಣದ 31 ತಾಲ್ಲೂಕುಗಳಲ್ಲಿ 28 ತಾಲ್ಲೂಕುಗಳು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ಪಟ್ಟಿಗೆ ಸೇರಿದ್ದವು. ಕೇವಲ 03 ತಾಲ್ಲೂಕುಗಳು ಮಾತ್ರ ಮುಂದುವರೆದಿದ್ದವು. ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆ ಹೋಗಲಾಡಿಸಲು ನಂಜುಂಡಪ್ಪ ವರದಿಯಲ್ಲಿ ಶಿಫಾರಸ್ಸು ಮಾಡಿದ್ದ ಯೋಜನೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಮಲತಾಯಿ ಧೋರಣೆ ಮಾಡಲಾಗಿತ್ತು. ಪ್ರಸ್ತುತ ಗೋವಿಂದರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನೆ ನಿವಾರಣೆ ಸಮಿತಿ ವರದಿಗೆ ಸರಕಾರ ಶಾಸನಬದ್ಧವಾಗಿ ಪರಿಗಣಿಸಿ ಕಲ್ಯಾಣ ಕರ್ನಾಟಕದ ಅಸಮತೋಲನೆ ನಿವಾರಣೆಗೆ ಕಾಲಮಿತಿಯ ಕ್ರಮ ಕೈಗೊಳ್ಳಲು ಬದ್ಧತೆ ಪ್ರದರ್ಶಿಸುವುದು ಅತಿ ಅವಶ್ಯವಾಗಿದೆ.
2002ರ ನಂಜುಂಡಪ್ಪ ವರದಿಯ ಮಾನದಂಡದಂತೆ, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಮತ್ತು ವಿಶೇಷ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ.ಯಿಂದ ಕೈಗೊಂಡ ಅಭಿವೃದ್ಧಿಗಳು ನಿರೀಕ್ಷೆಗೆ ತಕ್ಕಂತೆ ಫಲಶೃತಿ ತಂದಿಲ್ಲ, ಇದಕ್ಕೆ ಮುಖ್ಯ ಕಾರಣ ಮಂಡಳಿಯಿಂದ ದೂರದೃಷ್ಟಿಕೋನದ 5 ಅಥವಾ 10 ವರ್ಷಗಳ ಗಡುವಿನ ಅಸಮತೋಲನೆ ನಿವಾರಣೆಗೆ ವೈಜ್ಞಾನಿಕ ಕ್ರೀಯಾ ಯೋಜನೆ ರಚಿಸದೇ ಇರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.
ಸರಕಾರ ಗೋವಿಂದರಾವ ನೇತೃತ್ವದಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ರಚನೆ ಮಾಡಿರುವ ನೂತನ ಸಮಿತಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸ್ವಾಗತಿಸಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಪರಿಗಣಿಸಲು ಸಮಿತಿ ವಿನಂತಿಸುತ್ತದೆ.
1. ನಗರ ಪ್ರದೇಶದ ಸಮಸ್ಯೆಗಳು ಮತ್ತು ಗ್ರಾಮೀಣ ಪ್ರದೇಶದ ಸಮಸ್ಯೆಗಳಲ್ಲಿ ಬಹಳ ವ್ಯತ್ಯಾಸಗಳಿರು ವುದರಿಂದ ಈ ಬಗ್ಗೆ ಗಂಭೀರವಾಗಿಪರಿಗಣಿಸಿ, ತಾಲ್ಲೂಕಾ ಘಟಕ ಮಾಡಿಕೊಂಡರೂ, ಸಮತೋಲನ ಅಭಿವೃದ್ಧಿಗೆ ನಿಗಾ ವಹಿಸಬೇಕು.
2. ಮೂಲಭೂತ ಸೌಕರ್ಯಗಳು, ಆರೋಗ್ಯ ಸೇವೆಗಳು, ಕೃಷಿ, ಕೈಗಾರಿಕೆ, ವ್ಯಾಪಾರ, ವಾಣಿಜ್ಯ, ಅರಣ್ಯ ಸಂಪತ್ತು, ನೀರಾವರಿ, ಸಾಮಾಜಿಕ ಸೌಕರ್ಯಗಳು, ರಸ್ತೆ ಸಾರಿಗೆ, ಶಿಕ್ಷಣ, ಸಾಮಾಜಿಕ ಮೂಲ ಸೌಕರ್ಯಗಳು, ತಲಾ ಆದಾಯ, ಕೃಷಿ, ಕೃಷಿಯೇತರ, ಉದ್ಯೋಗ, ಭೂಪರಿಸರ, ಜನರ ಸಹಭಾಗಿತ್ವ, ಸಾಮಾಜಿಕ ಆರ್ಥಿಕ ನ್ಯಾಯ ಸೇರಿದಂತೆ ಪ್ರಸ್ತುತ ವಾಸ್ತವಿಕ ನೆಲೆಗಟ್ಟಿನ ಅಂಶಗಳನ್ನು ಸೂಚಕಗಳನ್ನಾಗಿ ಮಾಡಿಕೊಳ್ಳಬೇಕು.
3. ನಂಜುಂಡಪ್ಪ ವರದಿಯಂತೆ ಅವಿಭಜಿತ ಕಲಬುರಗಿ ಜಿಲ್ಲೆಯ 10 ತಾಲ್ಲೂಕುಗಳಲ್ಲಿ 9 ಅತ್ಯಂತ ಹಿಂದುಳಿದ, ಒಂದು ಹಿಂದುಳಿದ ಪಟ್ಟಿಗೆ ಸೇರಿತ್ತು. ಈಗ ಕಲಬುರಗಿ ಮತ್ತು ಯಾದಗಿರ ಎರಡು ಜಿಲ್ಲೆಗಳದರೂ ಸಹ ಹೊಸ ತಾಲ್ಲೂಕುಗಳನ್ನೊಳಗೊಂಡಂತೆ, ಯಥಾ ಸ್ಥಿತಿ ಇರುವುದನ್ನು ಗಮನದಲ್ಲಿಟ್ಟುಕೊಂಡು ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣದ ಸಮಗ್ರ ಅಭಿವೃದ್ಧಿಗೆ ವೈಜ್ಞಾನಿಕ ಮಾನದಂಡದಂತೆ, ಸೂಚ್ಯಂಕಗಳನ್ನು ಪರಿಗಣಿಸುವುದು ಅವಶ್ಯವಾಗಿದೆ.
4. 371ನೇ(ಜೆ) ಕಲಂ ಅನುಷ್ಠಾನ ಆಶಯ ಸಂಪೂರ್ಣ ಈಡೇರಬೇಕು, ಭವಿಷ್ಯದಲ್ಲಿ ವಿಶಾಲ ಕರ್ನಾಟಕದಲ್ಲಿ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿ ನಿರ್ಲಕ್ಷತನದಿಂದ ಪ್ರತ್ಯೇಕತೆ ಕೂಗು ಬರದಂತೆ ಸಮಗ್ರ ಸಮತೋಲನ ಅಭಿವೃದ್ಧಿಗೆ ಒತ್ತು ನೀಡಬೇಕು.
ನೂತನ ಸಮಿತಿ ಕಲಬುರಗಿ ಮತ್ತು ಕಲ್ಯಾಣದ ಅಭಿವೃದ್ಧಿಗೆ ಮಾಡಬೇಕಾದ ಪ್ರಮುಖ ಶಿಫಾರಸ್ಸುಗಳು.
ಕೇಂದ್ರ ಸರಕಾರದಿಂದ ಸರೀನ್ ಕಮಿಟಿಯ ಶಿಫಾರಸ್ಸಿನಂತೆ ರೈಲ್ವೆ ವಿಭಾಗೀಯ ಕಚೇರಿ ಕಲಬುರಗಿಯಲ್ಲಿ ಸ್ಥಾಪನೆ, ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ಏಮ್ಸ್ ಮತ್ತು ಐ.ಐ.ಟಿ. ಸ್ಥಾಪನೆ, ಕಾಲಮಿತಿಯ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಹಣ ನೀಡಬೇಕು, ಬೀದರ, ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಕಲ್ಯಾಣ ಪಥ ರಸ್ತೆಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಬೇಕು. ಕೃಷ್ಣಾ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಬೇಕು. ಕಲಬುರಗಿ ಸೇರಿದಂತೆ, ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಬೇಕು. ಕೇಂದ್ರ ಸರಕಾರ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಯೋಜನೆಗಳಡಿ
ಸೇರ್ಪಡೆ ಮಾಡಿ, ಕೃಷಿ, ಕೃಷಿಯೇತರದಲ್ಲಿ ಉದ್ಯೋಗ ಸೃಷ್ಟಿ ಮತ್ತು ಬೃಹತ್ ಯೋಜನೆಗಳು ಕಲ್ಯಾಣಕ್ಕೆ ಮಂಜೂರು ಮಾಡಬೇಕು. ಕಲಬುರಗಿ ವಿಮಾನಯಾನಕ್ಕೆ ಸೇವೆಗಳು ಕ್ರೀಯಾಶೀಲವಾಗಿ ನಡೆಯಲು ಕೇಂದ್ರ ಸರಕಾರ 371ನೇ(ಜೆ) ಕಲಂ ವಿಶೇಷ ಸ್ಥಾನಮಾನಕ್ಕೆ ಪೂರಕವಾಗಿ ಉಡಾನ್ ಸ್ಕೀಮ್ ಸೇರಿದಂತೆ ವಿಶೇಷ ಯೋಜನೆಯಡಿ ಸೇರಿಸಿ ನಿರಂತರ ವಿಮಾನ ಸೇವೆಗಳು ನಡೆಯಬೇಕು. ಕಲ್ಯಾಣ ಕರ್ನಾಟಕದ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು. ಕರ್ನಾಟಕದಲ್ಲಿರುವ ಕೇಂದ್ರ ಸರಕಾರಗಳ ಕಚೇರಿಗಳಲ್ಲಿ ಮತ್ತು ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ 371ನೇ(ಜೆ) ಕಲಂ ಅಡಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಬೇಕು.
ರಾಜ್ಯ ಸರಕಾರಕ್ಕೆ ಮಾಡಬೇಕಾದ ಶಿಫಾರಸ್ಸುಗಳು
ರಾಜ್ಯ ಸರಕಾರ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನೀಲಿ ನಕ್ಷೆ ಸಿದ್ಧಪಡಿಸಿ ಇದಕ್ಕೆ ಪೂರಕವಾಗಿ ದೂರದೃಷ್ಟಿಕೋನದ ಅಂದರೆ ಐದು ವರ್ಷದ ಗಡುವನ್ನು ಇಟ್ಟುಕೊಂಡು ವೈಜ್ಞಾನಿಕ ಕ್ರೀಯಾ ಯೋಜನೆ ರೂಪಿಸಿ, ಅದಕ್ಕೆ ಪೂರಕವಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ ಹಣ ನಿಗದಿ ಮಾಡಿ (ಸಾಮಾನ್ಯ ಅನುದಾನ ಮತ್ತು ವಿಶೇಷ ಅನುದಾನದಡಿ) ಕಾಲಮಿತಿಯಲ್ಲಿ ಅಭಿವೃದ್ಧಿ ಮಾಡಬೇಕು. ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಒಂದು ಗ್ರಾಮ ಪಂಚಾಯತ್ ಘಟಕವನ್ನಾಗಿ ಮಾಡಿಕೊಂಡು ಕಲ್ಯಾಣದ ಪ್ರತ್ಯೇಕ ವರದಿ ಸಿದ್ಧಪಡಿಸಿ ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಕಟ್ಟಕಡೆಯ ಗ್ರಾಮದ ಅಭಿವೃದ್ಧಿಗೂ ಗಮನ ಹರಿಸಲು ಸರಕಾರ ಮತ್ತು ಕೆ.ಕೆ. ಆರ್.ಡಿ.ಬಿ.ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಪ್ರಾದೇಶಿಕ ಅಸಮತೋಲನೆ ನಿವಾರಣೆಯಾಗು ವವರೆಗೆ ಕಲ್ಯಾಣ ಕರ್ನಾಟಕದ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು. ಇದರಿಂದ ಸಾಮಾನ್ಯ ಬಜೆಟನಲ್ಲಿ ಕಲ್ಯಾಣಕ್ಕೆ ಸಿಗುವ ಅನುದಾನ ಮತ್ತು ಕೆ.ಕೆ.ಆರ್.ಡಿ.ಬಿಗೆ ಸಿಗುವ ಅನುದಾನದ ಸ್ಪಷ್ಟತೆ ತಿಳಿಯುವುದಲ್ಲದೆ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಲು ಅನುಕೂಲವಾಗುವುದು. ಕಲಬುರಗಿ ಜಿಲ್ಲೆ ಸೇರಿದಂತೆ, ಕಲ್ಯಾಣ ಕರ್ನಾಟಕದಿಂದ ಗುಳೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮತ್ತು ಕೃಷಿಯೇತರ ಹುದ್ದೆಗಳನ್ನು ಸೃಷ್ಟಿಸಬೇಕು. ಕಲಬುರಗಿ ಸೇರಿದಂತೆ, ಕಲ್ಯಾಣ ಕರ್ನಾಟಕದಲ್ಲಿ ಅರಣ್ಯ ಸಂಪತ್ತಿನ ಅಭಿವೃದ್ಧಿಗೆ ಸಮಾರೋಪಾದಿ ಕ್ರಮ ಕೈಗೊಳ್ಳಬೇಕು. ಬಸವ ಕಲ್ಯಾಣ ಅನುಭವ ಮಂಟಪದಿಂದ ಅಂಜನಾದ್ರಿಯವರೆಗೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಿ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸುವುದು, ಅದರಂತೆ ಕಲ್ಯಾಣದ ಪ್ರವಾಸಿ ತಾಣಗಳಿಗೆ ಪ್ರತ್ಯೇಕ ಸರ್ಕೂ್ಯಟ್ ರಚನೆ ಮಾಡಬೇಕು. 371ನೇ(ಜೆ) ಕಲಂ ವಿಶೇಷ ಸ್ಥಾನಮಾನ ಪಡೆದಿರುವ ಹಿಂದು ಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸೃಜನೆ ಮಾಡಬೇಕು. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಮಾನದಂಡದಂತೆ, 371ನೇ(ಜೆ) ಕಲಂ ಅಡಿ ನೇಮಕಾತಿ ಮತ್ತು ಮುಂಬಡ್ತಿಗಳಿಗೆ ಕ್ರಮ ಕೈಗೊಳ್ಳಬೇಕು. 371ನೇ(ಜೆ) ಕಲಂ ಅಡಿ ಕಲ್ಯಾಣದ ಪಾಲಿನ ಖಾಲಿ ಇರುವ ಹುದ್ದೆಗಳು ಆರ್ಥಿಕ ಮಿತವ್ಯಯ ಅನ್ವಯಿಸದೆ ಕಟ್ಟುನಿಟ್ಟಾಗಿ ಭರ್ತಿಗಳು ನಡೆಯಬೇಕು. 371ನೇ(ಜೆ) ಕಲಂ ಅಡಿ ಆಗುವ ನೇಮಕಾತಿ ಮತ್ತು ಮುಂಬಡ್ತಿಗಳ ವ್ಯಾಜ್ಯಗಳ ನಿವಾರಣೆಗೆ ಕಲಬುರಗಿಯಲ್ಲಿ ಪ್ರತ್ಯೇಕ ಟ್ರಿಬ್ಯೂನಲ್ ರಚಿಸಬೇಕು. ಕೆ.ಕೆ.ಆರ್.ಡಿ.ಬಿ. ಅಡಿ ಕಡ್ಡಾಯವಾಗಿ ಮೇಲ್ವಿಚಾರಣಾ ಸಮಿತಿ, ಮೌಲ್ಯಮಾಪನ ಸಮಿತಿ, ಜಾಗೃತದಳ ರಚಿಸಬೇಕು. ಸ್ವಾಯತ್ತ ಮಂಡಳಿಯಾದ ಕೆ.ಕೆ.ಆರ್.ಡಿ.ಬಿ.ಗೆ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕಾತಿಗೆ ಕ್ರಮ ವಹಿಸುವುದು. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಫಲಿತಾಂಶಗಳ ಗುಣಮಟ್ಟ ಹೆಚ್ಚಿಸಲು ಪ್ರಾಥಮಿಕ ಹಂತದಿಂದ ಸುಧಾರಣೆಗೆ ಯೋಜನೆ ರೂಪಿಸಿ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸ್ವತಂತ್ರ ಅಧಿಕಾರ ನೀಡಿ ಕಠಿಣ ಕ್ರಮ ವಹಿಸುವುದು. ಹೊಸ ತಾಲ್ಲೂಕುಗಳಿಗೆ ಪೂರ್ಣ ಪ್ರಮಾಣದ ಸವಲತ್ತುಗಳು ನೀಡಬೇಕು. 371ನೇ(ಜೆ) ಸಂಪುಟ ಉಪ ಸಮಿ ತಿಯ ಮಾಜಿ ಅಧ್ಯಕ್ಷರಾದ ಎಚ್.ಕೆ. ಪಾಟೀಲವರು ಶಿಫಾರಸ್ಸು ಮಾಡಿರುವ ಅಂಶಗಳ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಲು ಸೂಚಿಸಬೇಕು. ತೊಗರಿ ಬೆಳೆಗೆ ಅನೇಕ ಉತ್ಪನ್ನಗಳನ್ನು ಸೃಜಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಕಲ್ಯಾಣದ ನೀರಾವರಿ ಯೋಜನೆಗಳು ಕಾಲಮಿತಿಯಲ್ಲಿ ಮುಗಿಸಲು ಮತ್ತು ನೀರಿನ ಸದ್ಬಳಕೆಗೆ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಮತ್ತು ನನ್ನ ಹೊಲ ನನ್ನ ಕೆರೆ ಯೋಜನೆಗೆ ಕ್ರಮ ವಹಿಸಬೇಕು. ಮಂತ್ರಿ ಮಂಡಲದಲ್ಲಿ ನಿಗಮ, ಮಂಡಳಿ, ಅಕಾಡೆಮಿ ಸೇರಿದಂತೆ ರಾಜ್ಯ ಸರಕಾರದ ಎಲ್ಲಾ ಅಂಗಗಳಲ್ಲಿ ಕಲ್ಯಾಣದ ಪಾಲಿನ ಸ್ಥಾನಗಳು ಸಿಗಬೇಕು. ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ಪ್ರತಿ ವರ್ಷ ಕಡ್ಡಾಯವಾಗಿ ಸಂಪುಟ ಸಭೆ ನಡೆಸಬೇಕು. ಭೌಗೋಳಿಕವಾಗಿ ರಾಜಧಾನಿ ಬೆಂಗಳೂರಿನಿಂದ ದೂರವಿರುವ ಕಲಬುರಗಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಲು ಮತ್ತು ಬೆಳಗಾವಿ ಮಾದರಿಯಲ್ಲಿ ಕಲಬುರಗಿಯಲ್ಲಿ ಕಲ್ಯಾಣ ವಿಧಾನ ಸೌಧ ನಿರ್ಮಾಣ ಮಾಡಬೇಕು. ಗಾಣಗಾಪೂರ, ಘತ್ತರಗಿ, ಚಂದ್ರಲಾಂಬಾ, ಕ್ಷೇತ್ರಗಳಿಗೆ ಕಾರಿಡಾರ ನಿರ್ಮಾಣ ಮಾಡಿ ಉದ್ಯೋಗ ಸೃಷ್ಟಿ ಮಾಡಬೇಕು. ಮಕ್ಕಳು ಮತ್ತು ಮಹಿಳೆಯರಲ್ಲಿ ಇರುವ ಅಪೌಷ್ಠಿಕತೆ ನಿವಾರಣೆಗೆ ಗಂಭೀರವಾಗಿ ಪರಿಗಣಿಸಿ ಸಮಾರೋಪಾದಿ ಕ್ರಮ ಕೈಗೊಳ್ಳುವುದು. ರಾಜ್ಯ ಸರಕಾರದ ಕೈಗಾರಿಕಾ ನೀತಿಯಲ್ಲಿ ಕಲ್ಯಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೂಡಿಕೆದಾರರ ಆಕರ್ಷಣೆಗೆ ಉದ್ದಿಮೆ ಸ್ಥಾಪನೆಗೆ ಕಠೋರ ಕ್ರಮ ಮತ್ತು ಕಲ್ಯಾಣಕ್ಕೆ ಪ್ರತ್ಯೇಕ ಕೃಷಿ ನೀತಿ ರೂಪಿಸಬೇಕು. ಕಲಬುರಗಿ ಸೇರಿದಂತೆ ಕಲ್ಯಾಣದಲ್ಲಿ ಮಾನವ ಅಭಿವೃದ್ದಿಗೆ ಸೂಚ್ಯಂಕ ಹೆಚ್ಚಿಸಲು ಸಮಾರೋಪಾದಿಯಗಿ ಕ್ರಮ ಕೈಗೊಳ್ಳಬೇಕು. ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಕಲ್ಯಾಣ ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಮೂಲ ಸೌಕರ್ಯ, ಸಿಬ್ಬಂದಿ ನೀಡಬೇಕು. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರ, ಕಲಬುರಗಿ ದೂರದರ್ಶನ ಕೇಂದ್ರ ಉಳಿಸಲು ಮತ್ತು ಉನ್ನತಿಕರಣಕ್ಕೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರಕಾರ ಘೋಷಣೆ ಮಾಡಿರುವ ಯೋಜನೆಗಳು ಕಟ್ಟು ನಿಟ್ಟಾಗಿ ಅನುಷ್ಠಾನ ಮಾಡಬೇಕು.
ಬಸವರಾಜ ದೇಶಮುಖ ,ಗೌರವಾಧ್ಯಕ್ಷರು
ಡಾ. ಲಕ್ಷ್ಮಣ ದಸ್ತಿ ಸಂಸ್ಥಪಕ ಅಧ್ಯಕ್ಷರು
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಪರಿಣಿತ ತಜ್ಞರು ಮತ್ತು ಮುಖಂಡರು :
ಪ್ರೊ.ಆರ್.ಕೆ. ಹುಡಗಿ, ಡಾ. ಬಸವರಾಜ ಕುಮನೂರ, ಡಾ. ಬಸವರಾಜ ಗುಲಶೆಟ್ಟಿ, ಡಾ. ಗುರುಬಸಪ್ಪ ಟಿ., ಡಾ. ಮಾಜಿದ್ ದಾಗಿ, ಡಾ. ಗಾಂಧೀಜಿ ಮೋಳಕೆರೆ, ಮನೀಷ್ ಜಾಜು, ಲಿಂಗರಾಜ ಸಿರಗಾಪೂರ, ಅಸ್ಲಂ ಚೌಂಗೆ.