ಡಾ.ಬಸವರಾಜ ಸಬರದ-ವಾಚಿಕೆ

ಡಾ.ಬಸವರಾಜ ಸಬರದ-ವಾಚಿಕೆ
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರುವಲ್ಲಿ ಪ್ರೊ.ಶಿವರಾಜ ಪಾಟೀಲರವರು ಡಾ.ಬಸವರಾಜ ಸಬರದ ಅವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಡಾ.ಬಸವರಾಜ ಸಬರದ ಅವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ವಿಮರ್ಶೆ, ಅನುವಾದ ಸಾಹಿತ್ಯದ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ಡಾ. ಬಸವರಾಜ ಸಬರದ ಅವರದು ಬಹುಮುಖಿ ವ್ಯಕ್ತಿತ್ವ, ಅವರು ನಮ್ಮ ನಾಡಿನ ಬಹುದೊಡ್ಡ ಪ್ರತಿಭೆ. ಹಲಗೇರಿಯೆಂಬ ಹಳ್ಳಿಯಿಂದ ಹಿಡಿದು ರಾಜಧಾನಿ ಬೆಂಗಳೂರುವರೆಗೆ ಅವರ ಪ್ರಯಾಣವಿದೆ. ಹೀಗಾಗಿ ಅವರು ಕೇವಲ ಹೈದ್ರಾಬಾದ್ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಕನ್ನಡ ನಾಡಿನ ಹೆಮ್ಮೆಯ ಸಾಹಿತಿಗಳಾಗಿದ್ದಾರೆ.
೨೦.೦೬.೧೯೫೫ ರಂದು ಬಸವರಾಜ ಅವರ ಜನನವಾಯಿತು. ಶ್ರೀ ಬಸಪ್ಪ ಮತ್ತು ಶ್ರೀಮತಿ ಬಸಮ್ಮ ಇವರ ತಂದೆ-ತಾಯಿಗಳು, ರುದ್ರಮ್ಮ ಇವರ ತಂಗಿ, ಈ ನಾಲ್ಕು ಜನರ ಚಿಕ್ಕ ಕುಟುಂಬ ಇವರದಾಗಿತ್ತು. ತಂದೆಯ ಊರು ಕುಕನೂರು, ತಾಯಿಯ ತವರುಮನೆ ಕೊಪ್ಪಳ ತಾಲ್ಲೂಕಿನ ಹಲಗೇರಿ. ಹುಟ್ಟಿದ್ದು ಸೋದರತ್ತೆಯ ಊರಾದ ಕುಕನೂರ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣ ಪಡೆದಿದ್ದು ಹಲಗೇರಿಯಲ್ಲಿ, ಹೈಸ್ಕೂಲು ಓದಿದ್ದು ಕುಕನೂರಿನಲ್ಲಿ, ಬಿ.ಎ. ಪಾಸಾದದ್ದು ಗದುಗಿನ ಜೆ.ಟಿ. ಕಾಲೇಜಿನಿಂದ, ಎಂ.ಎ. ಮತ್ತು ಡಿಪ್ಲೋಮಾ ಎಫಿಗ್ರಾಫಿ ಪದವಿ ಪಡೆದದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ, ಪಿ.ಎಚ್.ಡಿ. ಪದವಿ ಪಡೆದದ್ದು ಗುಲಬರ್ಗಾ ವಿಶ್ವವಿದ್ಯಾಲಯದಿಂದ, ರೇಡಿಯೊ ಡಿಪ್ಲೋಮಾ ಪಾಸಾಗಿದ್ದು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ. ಹೈಸ್ಕೂಲದಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ ಇವರು ಪ್ರಥಮ ದರ್ಜೆಯಲ್ಲಿಯೇ ಪಾಸಾದ ಪ್ರತಿಭಾವಂತರು. ಅನೇಕ ಚಿನ್ನದ ಪದಕ ಪಡೆದಿದ್ದಾರೆ. ಇದು ಇವರ ವಿದ್ಯಾರ್ಹತೆ.
ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಾಮಾಜಿಕ ಕ್ಷೇತ್ರ, ರಂಗಭೂಮಿ, ಚಲನಚಿತ್ರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಇವರು ದೊಡ್ಡ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಇದುವರೆಗೆ ಡಾ. ಸಬರದವರ ೧೬ ಕವನ ಸಂಕಲನಗಳು ಪ್ರಕಟವಾಗಿವೆ. ಇವರ
ಆಯ್ದ ಕವಿತೆಗಳ ಸಂಕಲನವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಇವರ ಕೆಲವು ಆಯ್ದ ಕವಿತೆಗಳು ಇಂಗ್ಲಿಷಿಗೆ ಅನುವಾದ ಗೊಂಡಿವೆ. selected poems ಎಂಬ
ಇಂಗ್ಲೀಷ್ ಕವನ ಸಂಕಲನ ೨೦೦೫ ರಲ್ಲಿ ಪ್ರಕಟವಾಗಿದೆ.
"ಸಬರದ ಕವಿತೆಗಳು" ಎಂಬ ಇವರ ಆಯ್ದ ಕವಿತೆಗಳ ಸಂಕಲನವು ೨೦೦೦ ರಲ್ಲಿ ಪ್ರಕಟವಾಗಿದೆ. ಇದರಲ್ಲಿ ಸಬರದವರು ತಮ್ಮ ಕವಿತೆಗಳನ್ನು ಓದುಗವಿತೆಗಳು, ಆಡುಗವಿತೆಗಳು, ಹಾಡುಗವಿತೆಗಳು - ಹೀಗೆ ವಿಂಗಡಣೆ ಮಾಡಿದ್ದಾರೆ.
ಡಾ. ಸಬರದವರ ಎರಡನೇ ಮಹತ್ವದ ಸೃಜನಶೀಲ ಪ್ರಕಾರವೆಂದರೆ ನಾಟಕ ಪ್ರಕಾರವಾಗಿದೆ. ಕಾವ್ಯದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದಂತೆ, ನಾಟಕ ಕ್ಷೇತ್ರದಲ್ಲಿಯೂ ವಿವಿಧ ಬಗೆಯ ನಾಟಕಗಳನ್ನು ರಚಿಸಿದ್ದಾರೆ. ಸಬರದವರ ಒಟ್ಟು ನಾಟಕಗಳನ್ನು 6 ಭಾಗಗಳಲ್ಲಿ ವಿಂಗಡಿಸಬಹುದಾಗಿದೆ.ಹೀಗೆ ಒಟ್ಟು ೨೪ ನಾಟಕಗಳು ಮತ್ತು ೪ ಬಾನುಲಿ ನಾಟಕಗಳು ಪ್ರಕಟವಾಗಿವೆ.
"ಮತ್ತೊಬ್ಬ ರಾಧೆ” ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಚಿಂತನಗಳನ್ನು ಮತ್ತು ವೈಚಾರಿಕ ಪ್ರಬಂಧಗಳನ್ನು ಲಲಿತ ಪ್ರಬಂಧಗಳ ಹಾಗೆ ಸೃಜನ ಸಾಹಿತ್ಯವೆಂದು ಕರೆಯುತ್ತಾರೆ. ಹೀಗಾಗಿ ಸಬರದವರ ಕವಿತೆಗಳು, ನಾಟಕಗಳು, ಚಿಂತನಗಳು, ವೈಚಾರಿಕ ಪ್ರಬಂಧಗಳ ಆಯ್ದ ರಚನೆಗಳನ್ನು ಈ ಕೃತಿಯಲ್ಲಿ ಕೊಡಲಾಗಿದೆ. ಸಬರದವರ ಸೃಜನೇತರ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ-ವಿಮರ್ಶೆ-ಗ್ರಂಥಸಂಪಾದನೆ ಕ್ಷೇತ್ರಗಳ ಆಯ್ದ ಲೇಖನಗಳನ್ನು ಇನ್ನೊಂದು ಸಾಹಿತ್ಯ ವಾಚಿಕೆಯಲ್ಲಿ ಕೊಡಲಾಗಿದೆ. ಈ ಸೃಜನೇತರ ಸಾಹಿತ್ಯ ವಾಚಿಕೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಹೀಗಾಗಿ ಸಬರದವರ ಸೃಜನ-ಸೃಜನೇತರ ಎರಡೂ ಕ್ಷೇತ್ರಗಳ ವಾಚಿಕೆಗಳು ಪ್ರಕಟವಾದಂತಾಗಿದೆ.
ಚಿಂತನ ಲೇಖನಗಳಿಗೆ ಸಂಬಂಧಿಸಿದಂತೆ ಡಾ. ಸಬರದ ಅವರು ಮೂರು ಕೃತಿಗಳನ್ನು ರಚಿಸಿದ್ದಾರೆ. “ವಿಚಾರ ಸಂಪದ" ಎಂಬ ಕೃತಿಯು ೧೯೯೫ ರಲ್ಲಿ ಪ್ರಕಟವಾಗಿದೆ. "ಮರುಚಿಂತನ" ಎಂಬ ಕೃತಿ ೨೦೦೯ ರಲ್ಲಿ ಮುದ್ರಣಗೊಂಡಿದೆ. "ಚಿಂತನ ಲೇಖನಗಳು" ಎಂಬ ಕೃತಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ೨೦೧೬ರಲ್ಲಿ ಪ್ರಕಟ ಮಾಡಿದೆ. ಈ ಮೂರು ಕೃತಿಗಳಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಚಿಂತನ ಲೇಖನಗಳಿವೆ. ಇವೆಲ್ಲಾ ಗುಲಬರ್ಗಾ, ರಾಯಚೂರು, ವಿಜಯಪುರ, ಬೆಂಗಳೂರು, ಮೈಸೂರು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿವೆ. ಈ ನಾಲ್ಕು ದಶಕಗಳಲ್ಲಿ ಆಕಾಶವಾಣಿಯ ಮೂಲಕ ಪ್ರಸಾರಗೊಂಡ ಚಿಂತನಗಳು ಸಬರದವರಿಗೆ ದೊಡ್ಡ ಹೆಸರು ತಂದುಕೊಟ್ಟಿವೆ. ಬೆಳಿಗ್ಗೆ ಎದ್ದ ಕೂಡಲೇ ರೇಡಿಯೋದ ಮೂಲಕ ಕಿವಿಗೆ ಬೀಳುತ್ತಿದ್ದ ಈ ಚಿಂತನಗಳು ಸಬರದವರ ಆಳವಾದ ಅಧ್ಯಯನ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿವೆ. ನಲವತ್ತು ವರ್ಷಗಳವರೆಗೆ ಗುಲಬರ್ಗಾ ಆಕಾಶವಾಣಿಯಲ್ಲಿ ಸಬರದವರ ಚಿಂತನಗಳು ನಿರಂತರವಾಗಿ ಪ್ರಸಾರವಾಗಿವೆ.
ಸಬರದವರ ವೈಚಾರಿಕ ಲೇಖನಗಳು ವಿದ್ವತ್ ವಲಯದಲ್ಲಿ ಹೆಚ್ಚು ಚರ್ಚೆಯಾಗಿವೆ. ಅವರು ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ಆಯ್ಕೆಗೊಂಡಾಗಿನಿಂದ ಹಿಡಿದು ಇಲ್ಲಿಯವರೆಗೆ ಅನೇಕ ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ಬಂಡಾಯ ಸಂಘಟನೆ ಹಾಗೂ ಅನೇಕ ಜನಪರ ಹೋರಾಟಗಳ ಮೂಲಕ ಬೆಳೆದುನಿಂತ ಸಬರದವರ ವಿಚಾರಗಳು ತುಂಬ ಹೊಸತನದಿಂದ ಕೂಡಿವೆ.
ವೈಚಾರಿಕ ಬರಹಗಳಿಗೆ ಸಂಬಂಧಿಸಿದಂತೆ ಅವರ ನಾಲ್ಕು ಕೃತಿಗಳು ಪ್ರಕಟವಾಗಿವೆ. "ಕರ್ಮಸಿದ್ಧಾಂತ" ಕೃತಿ ೧೯೯೮ರಲ್ಲಿ ಪ್ರಕಟವಾದರೆ "ಶಾಸನಗಳು: ಪ್ರಭುತ್ವ ಜನತೆ" ೧೯೯೯ ರಲ್ಲಿ ಪ್ರಕಟವಾಗಿದೆ. “ಸಮುದಾಯ ಮತ್ತು ಸಂಸ್ಕೃತಿ” ಕೃತಿಯು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೨೦೦೨ ರಲ್ಲಿ ಮುದ್ರಣಗೊಂಡಿದೆ. "ಬಯಲಬೆಳಕು" ಎಂಬ ಮಹತ್ವದ ವೈಚಾರಿಕ ಕೃತಿ ಬೆಂಗಳೂರಿನ ಕ್ರಿಯಾ ಪ್ರಕಾಶನದಿಂದ ೨೦೨೦ ರಲ್ಲಿ ಪ್ರಕಟವಾಗಿದೆ.ಈ ಕೃತಿಗೆ ಬರಗೂರು ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ. ಇವರ ವೈಚಾರಿಕ ಕೃತಿಗಳಿಗೆ ಅನೇಕ ಪ್ರಶಸ್ತಿಗಳು ದೊರಕಿವೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2024 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 232 ಪುಟಗಳನ್ನು ಹೊಂದಿದ್ದು 230 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ.ಶರಣಬಸಪ್ಪ ವಡ್ಡನಕೇರಿ