ಡಾ ಬಸವರಾಜ ಎಸ್ ಕಲೆಗಾರ( basavaraj kalegara)

ಡಾ ಬಸವರಾಜ ಎಸ್ ಕಲೆಗಾರ( basavaraj kalegara)

ಡಾ.ಬಸವರಾಜ ಎಸ್.ಕಲೆಗಾರ

ಡಾ.ಬಸವರಾಜ ಎಸ್.ಕಲೆಗಾರ ಅವರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದ ತಂದೆ ಶರಣಪ್ಪ ತಾಯಿ ಮಾನಮ್ಮ ಅವರ ಹಿರಿಯ ಮಗನಾಗಿ 6 ಜುಲೈ 1984 ರಂದು ಜನಿಸಿದರು.

ಇವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಾದ ಕೊಂಕಲ್ ಗ್ರಾಮದಲ್ಲಿ ಕಲಿತು, ಮುಂದೆ ಕಲಾಮೂಲ ಎಂಬ ಚಿತ್ರಕಲಾ ಶಿಕ್ಷಣದ ತರಗತಿಗಳನ್ನು

ಯಾದಗಿರಿಯ ಬ್ಲೂ ಸ್ಟಾರ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕಲಿಯುತ್ತಾರೆ. ಮುಂದೆ ಬಾದಾಮಿ ಬನಶಂಕರಿಯ ಚಿತ್ರ ಮತ್ತು ವರ್ಣ ಶಿಲ್ಪಕಲಾ ವಿಭಾಗದಿಂದ ಎ. ಟಿ.ಸಿ,ಮತ್ತು ಬಿ.ವಿ.ಎ, ಪದವಿಯನ್ನು ಪಡೆಯುತ್ತಾರೆ

 ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಿಂದ ಎಂ.ವಿ.ಎ, ಸ್ನಾತಕೋತ್ತರ ಪದವಿ ಹಾಗೂ ಎಂ.ಫಿಲ್ ಪದವಿಯನ್ನು ಪಡೆದರು.ಎಂ. ಫಿಲ್ ಪದವಿಗಾಗಿ ಯಾದಗಿರಿ ಜಿಲ್ಲೆಯ ಚಿತ್ರಕಲೆ,ಎಂಬ ವಿಷಯವನ್ನು ಮಂಡಿಸಿ ಪದವಿ ಪಡೆದರು.

ನಂತರ 2017 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಹೈದ್ರಾಬಾದ್ ಕರ್ನಾಟಕದ ಚಿತ್ರಕಲೆ ಎಂಬ ವಿಷಯದ ಕುರಿತು ಸಂಶೋಧನಾ ಮಹಾ ಪ್ರಬಂಧವನ್ನು ಸಾದರಪಡಿಸಿ ಡಾಕ್ಟರೇಟ್ ಪದವಿ ಪಡೆದರು.ಈ ಎಂ ಫಿಲ್ ಮತ್ತು ಪಿ ಎಚ್.ಡಿ ಪದವಿಗಳ ಸಂಶೋಧನೆಗೆ ಪ್ರೊ.ಎಸ್.ಸಿ.ಪಾಟೀಲ ಅವರು ಮಾರ್ಗದರ್ಶನ ಮಾಡಿದ್ದಾರೆ.

 ಚಿತ್ರಕಲೆಯ ಅಧ್ಯಯನದೊಂದಿಗೆ ನಿರಂತರವಾಗಿ ನೂರಾರು ಕಾವ್ಯ ಪ್ರಬಂಧ ಸಂಶೋಧನಾ ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಸ್ವತಃಹ ಲೇಖಕರಾಗಿ 2011 ರಲ್ಲಿ ನೀ ಮರೆಯಾದ ಕ್ಷಣಗಳು,2012 ರಲ್ಲಿ ಬೆಳಕು,2013 ರಲ್ಲಿ ಸಂಗಣ್ಣ ಎಂ.ದೋರನಹಳ್ಳಿ,2014 ರಲ್ಲಿ ಕಲಾನ್ವೇಷಣೆ,ಚಿತ್ರಶಿಲೆಯಲ್ಲಿ ಬುದ್ಧ (ಪ್ರವಾಸ ಕಥನ),2015 ರಲ್ಲಿ ಗಡಿನಾಡ ಚಿತ್ರಶಾಲೆ,2016 ರಲ್ಲಿ ದೃಶ್ಯ ಸಂವೇದನೆ,2017 ರಲ್ಲಿ ರೇಖಾನಮನ, ಸುಡುವ ನೆಲದ ದೃಶ್ಯಕಾವ್ಯ,2018 ರಲ್ಲಿ ಕುಂಚ ಪ್ರಪಂಚ,ಚಿತ್ರಕಾರನ ಬಹುಮುಖಿ ಚಿಂತನೆ,ತಳಬೇರು,2019 ರಲ್ಲಿ ನೀಲಾಮೃತ,2020 ರಲ್ಲಿ ಚಿತ್ತ ಭಿತ್ತಿಯ ಚಿತ್ತಾರಗಳು,ಊರ ಹನುಮಪ್ಪನಿಗೊಂದೆರಡು

ಪ್ರಶ್ನೆ,ಯಾದಗಿರಿ ಜಿಲ್ಲೆಯ ದಲಿತ ಕಾವ್ಯ,ಅನಾವರಣ, ಯಾದಗಿರಿ ಜಿಲ್ಲೆಯ ಆದಿಮ ಚಿತ್ರಕಲೆ,ಚಿವುಟಿದಷ್ಟು ಚಿಗುರುವವರು,ಕಲಾಧ್ಯಾನ,ಚಿತ್ರಕಲೆಯ ಮಹತ್ವ ಮತ್ತು ಪ್ರಸ್ತುತತೆ, ಕಲ್ಯಾಣ ಕರ್ನಾಟಕದ ಸಮಕಾಲೀನ ದೃಶ್ಯಕಲಾ ಸಾಹಿತ್ಯ ಮತ್ತು ವಿಮರ್ಶೆ,ಕಲಾ ತಪಸ್ವಿ,ಕಲಾ ಚಿಂತನೆ,ಕಲಾ ಸಂಗಮ,ಜನಪದ ಕೌದಿಯ ಚಿತ್ತಾರ ಸೇರಿದಂತೆ ಒಟ್ಟು 26 ಗ್ರಂಥಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ.

ಇವರು ಬರೆದ ಒಟ್ಟು ಆರು ಪುಸ್ತಕಗಳಿಗೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅವುಗಳಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು 2012 ರಲ್ಲಿ ಬೆಳಕು ಎಂಬ ಕೃತಿ,2016 ರಲ್ಲಿ ದ್ರಶ್ಯ ಸಂವೇದನೆ ಎಂಬ ಕೃತಿಗಳಿಗೆ ಲಭಿಸಿದೆ,ಸುಡುವ ನೆಲದ ದೃಶ್ಯಕಾವ್ಯ ಎಂಬ ಕೃತಿಗೆ ಅವ್ವ ಪ್ರಶಸ್ತಿ ಹಾಗೂ ಅಕ್ಷರ ಲೋಕದ ನಕ್ಷತ್ರ ಗೌರವ ಪ್ರಶಸ್ತಿಯನ್ನು ಪಡೆದಿದ್ದಾರೆ.2018 ರಲ್ಲಿ ಬರೆದ ಚಿತ್ರಕಾರನ ಬಹುಮುಖಿ ಚಿಂತನೆ ಎಂಬ ಗ್ರಂಥಕ್ಕೆ ರಾಜ್ಯ ಮಟ್ಟದ ಕಾಗದ ಸಾಂಗತ್ಯ ಕಲಾ ಪ್ರಶಸ್ತಿಯನ್ನು ಪಡೆದಿದ್ದಾರೆ. 2016 ರಲ್ಲಿ ಗಡಿನಾಡ ಚಿತ್ರಶಾಲೆ ಎಂಬ ಕೃತಿಗೆ ಯುವ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.ಇನ್ನು ಕಲಾ ಸೇವೆಯನ್ನು ಪರಿಗಣಿಸಿ

ಸಗರನಾಡು ಸಿರಿ,ಯುವ ಚೇತನ,ಯಾದಗಿರಿ ಜಿಲ್ಲಾಡಳಿತ ವತಿಯಿಂದ ಗೌರವ ಸನ್ಮಾನ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ.

ಅಲ್ಲದೆ 2015-16 ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಒಂದು ಲಕ್ಷ ರೂಪಾಯಿ ಸಂಶೋಧನೆ ಫೆಲೋಶಿಪ್ ಸಹ ಪಡೆದಿದ್ದಾರೆ.2022 ನೇ ಸಾಲಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಜ್ಯುನಿಯರ್ ಸಂಶೋಧನೆ ಫೆಲೋಶಿಪ್ ಗೆ ಸಹ ಆಯ್ಕೆಯಾಗಿದ್ದಾರೆ. ಈ ಮೊತ್ತವೂ ಒಂದು ಲಕ್ಷ ರೂಪಾಯಿ ಇರುತ್ತದೆ. 

ಕಲಬುರಗಿಯ ಆಕಾಶವಾಣಿ ಕೇಂದ್ರದಲ್ಲಿ ಹೊಸ ಓದು ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಡಾ.ಎಸ್.ಸಿ.ಪಾಟೀಲರ ಕಲ್ಯಾಣ ಕರ್ನಾಟಕದ ಚಿತ್ರಕಲಾ ಪಥ, ಕರ್ನಾಟಕದ ಭಿತ್ತಿ ಚಿತ್ರಕಲೆ ಹಲವು ಹೊಸ ಶೋಧಗಳು,ಮತ್ತು ಡಾ.ಮಲ್ಲಿಕಾರ್ಜುನ ಸಿ.ಬಾಗೋಡಿ ಅವರ ದೃಶ್ಯ ಸಂಕುಲ, ಟಿ.ನಾಗಭೂಷಣ ಎಂಬ ಕೃತಿಗಳನ್ನು ಪರಿಚಯ ಮಾಡಿದ್ದಾರೆ.ಅಲ್ಲದೆ ನಾಡಿನ ಅನೇಕ ಕಡೆ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಲ್ಲದೆ ನಾಡಿನ ಹೆಸರಾಂತ ಲೇಖಕರಾದ ಡಾ.ಸಿದ್ದಲಿಂಗಯ್ಯ,ಪ್ರೊ.ಅರವಿಂದ ಮಾಲಗತ್ತಿ,ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಡಾ.ಚಿನ್ನಸ್ವಾಮಿ ಸೋಸಲೆ,ಡಾ.ಅಪ್ಪಗೆರೆ ಸೋಮಶೇಖರ,ಪ್ರೊ.ಕಾಶಿನಾಥ ಅಂಬಲಗೆ, ಮಹಿಪಾಲರೆಡ್ಡಿ ಮುನ್ನೂರು ಸೇರಿದಂತೆ ಪ್ರಸಿದ್ಧ ಲೇಖಕರ 54 ಪುಸ್ತಕಗಳಿಗೆ ಸುಮಾರು 5000 ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ಬರೆದು ಪ್ರಕಟಿಸಿದ್ದಾರೆ. ಹಾಗೆಯೇಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯಕ್ಕೆ ತಕ್ಕಂತೆ ಅನೇಕ ಚಿತ್ರಗಳನ್ನು ರಚಿಸಿದ್ದಾರೆ.ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರು,ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು,ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು,ಕಲಾ ನಮನ ಟ್ರಸ್ಟ್ ನ ಅಧ್ಯಕ್ಷರು,ಹೀಗೆ ಹಲವು ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದಿದ್ದಾರೆ.

ಪ್ರಸ್ತುತ 2018 ರಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ,ದೃಶ್ಯಕಲಾ ಅಧ್ಯಯನ ವಿಭಾಗದಲ್ಲಿ ಸಹಾಯಕ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರ ನಿರಂತರ ಕಲಾ ಸೇವೆಯನ್ನು ಗುರುತಿಸಿ ಧಾರವಾಡದ ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಟ್ರಸ್ಟ್ ಯುವ ಕಲಾ ಶ್ರೀ ರಾಷ್ಟ್ರೀಯ ಪ್ರಶಸ್ತಿ ಸಹ ಲಭಿಸಿದೆ. ಪ್ರಸ್ತುತ 2024 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ನೂತನ ಸದಸ್ಯರಾಗಿದ್ದಾರೆ.

                                   ಡಾ.ಶರಣಬಸಪ್ಪ ವಡ್ಡನಕೇರಿ