ಡಾ. ಉಮಾದೇವಿ. ಆರ್.ದಂಡೋತಿ (ಮಟ್ಟಿ )

ಡಾ. ಉಮಾದೇವಿ. ಆರ್.ದಂಡೋತಿ (ಮಟ್ಟಿ )

ಡಾ. ಉಮಾದೇವಿ. ಆರ್.ದಂಡೋತಿ (ಮಟ್ಟಿ )

ಶರಣರು ಸಂತರು ಹಾಗೂ ದಾರ್ಶನಿಕರು ಜನ್ಮತಾಳಿ ನಡೆದಾಡಿದ ಪುಣ್ಯಭೂಮಿ ಕಲಬುರಗಿಯಲ್ಲಿ ಡಾ. ಉಮಾದೇವಿ ಆರ್. ದಂಡೋತಿ (ಮಟ್ಟಿ) ಅವರು ಶ್ರೀ ರುಕ್ಕಪ್ಪ ಮತ್ತು ನಾಗಮ್ಮ ದಂಪತಿಗಳ ಉದರದಲ್ಲಿ ದಿನಾಂಕ 10.05.1968 ರಂದು ಜನಿಸಿದರು. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಲಬುರ್ಗಿಯ ನೂತನ ವಿದ್ಯಾಲಯದಲ್ಲಿ ಮುಗಿಸಿದರು. ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಿಂದ 1993 ರಲ್ಲಿ ಬಿ.ಎ ಪದವಿಯನ್ನು ಪ್ರಥಮ ಸ್ಥಾನ ಪಡೆದು ಪ್ರತಿಭಾವಂತ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದಿಂದ 1995 ರಲ್ಲಿ ಎಂ. ಎ ಪದವಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. 1996 ರಲ್ಲಿ ತ್ರಿವೇಣಿಯವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು ಎಂಬ ವಿಷಯದ ಮೇಲೆ ಎಂ. ಫಿಲ್ ಪದವಿಯನ್ನು ಪಡೆದು, ಶೂದ್ರ ವಚನ ಕಾರ್ತಿಯರು ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು ಡಾ.ಬಸವರಾಜ ಸಬರದ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಹಾಪ್ರಬಂಧವನ್ನು ಮಂಡಿಸಿ 2003 ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು.

 ಡಾ. ಉಮಾದೇವಿ ಆರ್ ದಂಡೋತಿ (ಮಟ್ಟಿ) ಅವರು ಅತ್ಯಂತ ಕ್ರಿಯಾಶೀಲರಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕೃತಿಗಳ ರಚನೆಯೊಂದಿಗೆ ಅನೇಕ ಕಥೆ, ಕವನ ಹಾಗೂ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ಇವರ ಕಥೆ, ಕವನ ಹಾಗೂ ಲೇಖನಗಳು ನಾಡಿನ ಅನೇಕ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.

'ಶಿಷ್ಟ ಸಾಹಿತ್ಯದಲ್ಲಿ ಮಹಿಳೆ ' ಬೆಂಗಳೂರು ವಿಶ್ವವಿದ್ಯಾಲಯ ದಿಂದ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಮತ್ತು ಅಭಿವ್ಯಕ್ತಿ ಎಂಬ ಕೃತಿಯಲ್ಲಿ ಪ್ರಕಟಗೊಂಡಿದೆ. ಅಲ್ಲದೆ ಇವರ ತತ್ವಪದಗಳ ಸಂಗ್ರಹ ಎಂಬ ಸಂಪಾದಿತ ಕೃತಿಯು ಗುಲಬರ್ಗಾ ವಿಶ್ವವಿದ್ಯಾಲಯದ ಬಿ. ಕಾಂ ಮೂರನೇ ಸೆಮಿಸ್ಟರ್ ಗೆ ಪಠ್ಯ ಪುಸ್ತಕವಾಗಿದೆ. ಜೊತೆಗೆ ಇವರ ಶೂದ್ರ ವಚನ ಕಾರ್ತಿಯರು ಎಂಬ ಪಿಎಚ್. ಡಿ ಮಹಾಪ್ರಬಂಧವು ಪುಸ್ತಕ ರೂಪದಲ್ಲಿ ಓದುಗರ ಕೈಸೇರಿದೆ. ಹಾಗೂ ತ್ರಿವೇಣಿಯವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು ಎಂಬ ಕೃತಿಯನ್ನು ರಚಿಸಿದ್ಧಾರೆ.

ಸ್ತ್ರೀಪರ ನಿಲುವುಗಳನ್ನು ಹೊಂದಿದ ಇವರ ವಿಚಾರ ಧಾರೆಗಳು ಸ್ತ್ರೀ ಸಮಾನತೆಗಾಗಿ ಸದಾ ಮಿಡಿಯುತ್ತಿರುವುದನ್ನು ಇವರ ಸಾಹಿತ್ಯದ ಮೂಲಕ ಗುರುತಿಸಬಹುದಾಗಿದೆ. ಮಹಿಳೆಯರು ಮೂಕವಾಗಿ ಅನುಭವಿಸುತ್ತಿರುವ ವೇದನೆಗಳು ತವಕ ತಲ್ಲಣಗಳು ಡಾ. ಉಮಾದೇವಿ ಮಟ್ಟಿಯವರ ಕಥೆ, ಕವನ ಹಾಗೂ ಲೇಖನಗಳಲ್ಲಿ ಒಡಮೂಡಿ ಬಂದಿರುವುದು ಕಂಡುಬರುತ್ತದೆ. 'ಇಂದಿನ ಮಹಿಳೆ' ಅಮ್ಮನ ನೆನಪು, ಮೌನದ ಪಯಣ, ಅಂದು ಇಂದು, ನನ್ನವರು, ಮುಂತಾದ ಕವನಗಳಾದರೆ ಸ್ತ್ರೀವಾದಿ ನೆಲೆಗಳು, ಆಧುನಿಕ ಸಾಹಿತ್ಯದಲ್ಲಿ ಮಹಿಳೆ,ಮುಂತಾದ ಲೇಖನಗಳು ಇವರ ಮಹಿಳಾ ಸಂವೇದನೆಗೆ ಕನ್ನಡಿ ಹಿಡಿದಂತಿದೆ. ಇವುಗಳಲ್ಲದೆ ಮುಸ್ಲಿಂ ತತ್ವಪದಕಾರರು, ಬಸವದರ್ಶನ, ಸಮಾಜಮುಖಿ ಚಿಂತಕ ಸುಭಾಶ್ಚಂದ್ರ ಕಶೆಟ್ಟಿ, ಮಹಾಶರಣೆ ಸತ್ಯಕ್ಕ, ಹುಳಬಾನ ಬುತ್ತಿ ಮುಂತಾದ ಲೇಖನಗಳು ಪ್ರಕಟವಾಗಿವೆ. ಡಾ. ಉಮಾದೇವಿ ಆರ್ ( ದಂಡೋತಿ) ಮಟ್ಟಿ ಅವರು ತಮ್ಮ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ದೇವಾನಾಂ ಪ್ರಿಯ, ರಾಷ್ಟ್ರೀಯ ಪ್ರಶಸ್ತಿ, ಡಾ. ಅಂಬೇಡ್ಕರ ಫೆಲೋಷಿಪ್ ನ್ಯಾಶನಲ್ ಅವಾರ್ಡ, ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ನ್ಯಾಶಲ್ ಐಕಾನ್ ಅವಾರ್ಡ, ರಾಜ್ಯ ಮಟ್ಟದ ಆದರ್ಶ ಕವಿ ದಂಪತಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿಕೊಂಡು ಬಂದಿವೆ. ಡಾ. ಉಮಾದೇವಿ ಅಶೋಕ ಕುಮಾರ ಮಟ್ಟಿಯವರು ಸಾಹಿತ್ಯ ಕೃಷಿಯ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವುದರ ಮೂಲಕ ಹಲವು ಕ್ಷೇತ್ರಗಳಲ್ಲಿ ಗುರುತ್ತಿಸಿಕೊಂಡಿದ್ದಾರೆ. ಇವರು ಸಿರಿಗನ್ನಡ ವೇದಿಕೆಯ ಯಾದಗಿರಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಮಹಿಳಾ ಕಾರ್ಯದರ್ಶಿಯಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಖಾಸಗಿ ಕಾಲೇಜುಗಳ ಅಧ್ಯಾಪಕರ ಸಂಘದ ಯಾದಗಿರಿ ಜಿಲ್ಲಾ ಕಾರ್ಯದರ್ಶಿಯಾಗಿ, ಹರಿದಾಸ ಸಾಹಿತ್ಯ ಪೀಠದ ಸದಸ್ಯರಾಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ.

ರಾಯಚೂರು ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಹಾಗೂ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಡಾ.ಉಮಾದೇವಿ ಆರ್. ದಂಡೋತಿಯವರು ಡಾ. ಅಂಬೇಡ್ಕರ್ ಪ್ರಥಮ ದರ್ಜೆ ಕಾಲೇಜು ರಂಗಂಪೇಟ, ಸುರಪುರದಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಡಾ. ಉಮಾದೇವಿ ಆರ್ ದಂಡೋತಿ ಮಟ್ಟಿಯವರು ಒಂದೊಂದೆ ಹೆಜ್ಜೆಗಳನ್ನಿಡುತ್ತ ಧೃಡವಾಗಿ ನಿಂತು ಇನ್ನು ಹೆಚ್ಚಿನ ಸಾಹಿತ್ಯ ಸೇವೆ ಕೈಗೊಳ್ಳಲೆಂದು ಹಾಗೂ ಇವರ ಸಾಹಿತ್ಯ ಕೃಷಿ ನಿರಂತವಾಗಿ ಸಾಗಲೆಂದು ಆಶಿಸೋಣ.

ಡಾ. ನರಸಪ್ಪ ಎಂ ಚಿತ್ತಾಪುರ

ಕನ್ನಡ ಉಪನ್ಯಾಸಕರು,ಸರಕಾರಿ ಪದವಿ ಮಹಾವಿದ್ಯಾಲಯ, ಯಾದಗಿರಿ