(ಸುಭಾಶ್ಚಂದ್ರ ಕಶೆಟ್ಟಿ ) subhashchandra kasetti
ಸುಭಾಶ್ಚಂದ್ರ ಕಶೆಟ್ಟಿ
ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಕೆಂಪು ಬಾಳೆಹಣ್ಣಿನ ನಗರಿ ಕಮಲಾಪುರ ಪರಿಸರದಲ್ಲಿ ಅರಳಿದರೂ, ಎಲೆ ಮರೆಯ ಕಾಯಿಯಂತೆ ತಾನಾಯಿತು ತನ್ನ ಕೆಲಸವಾಯಿತು ಎನ್ನುವಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಪರೂಪದ ಅನೇಕ ಮೌಲಿಕ ಕೃತಿಗಳನ್ನು ಹೊರತರುವುದರ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದವರ ಸಾಲಿಗೆ ಸೇರುತ್ತಾರೆ. ಇಂತಹ ಒಬ್ಬ ಹಿರಿಯ ಜೀವ ನಮ್ಮ ತಾಲೂಕಿನವರೇ ಎನ್ನುವುದೇ ನಮಗೆ ಹೆಮ್ಮೆ. ಶ್ರೀ ಸುಭಾಶ್ಚಂದ ಕಶೆಟ್ಟಿ ಬಾಚನಾಳ ಅವರು ಜುಲೈ ೦೪, ೧೯೪೮ ರಂದು ಕಮಲಾಪುರ ತಾಲೂಕಿನ ಬಾಚನಾಳದಲ್ಲಿ ರೇವಣಸಿದ್ದಪ್ಪ ಕಶೆಟ್ಟಿ ಹಾಗೂ ಶರಣಮ್ಮನವರ ಮಗನಾಗಿ ಜನಿಸಿದರು. ಅಪ್ಪಟ ಕೃಷಿ ಕುಟುಂಬದಿಂದ ಬಂದ ಕಶೆಟ್ಟಿ ಯವರು ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಗ್ರಾಮದಲ್ಲಿಯೇ ಪೂರೈಸಿ ಕಾಲೇಜು ಶಿಕ್ಷಣವನ್ನು ಕಮಲಾಪುರ ಹಾಗೂ ಕಲಬುರಗಿಯಲ್ಲಿ ಪೂರೈಸಿದರು. ಅಲ್ಲದೇ ೧೯೬೮ ರಲ್ಲಿ ಕಾಳಮಂದರಗಿ ಗ್ರಾಮ ಪಂಚಾಯತ ಕಾರ್ಯದರ್ಶಿ ಹುದ್ದೆಯಿಂದ ಸೇವೆ ಪ್ರಾರಂಭಿಸಿದ ಇವರು ೧೯೨ರಿಂದ ಮಡಕಿ, ರೇವೂರ, ಬಂದರವಾಡ ಗ್ರಾಮಗಳಲ್ಲಿ ಗ್ರಾಮ ಲೆಕ್ಕಿಗರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿಯೇ ೧೯೮೮ರಲ್ಲಿ ಪದನ್ನೋತಿ ಹೊಂದಿ ಪ್ರಥಮ ದರ್ಜೆ ಸಹಾಯಕರಾಗಿ ಹರಸೂರ ಮಂಡಲ ಪಂಚಾಯತಿ ಕಾರ್ಯದರ್ಶಿಯಾಗಿ, ಶಿರಸ್ತೆದಾರರಾಗಿ ಕಾರ್ಯವನ್ನು ನಿರ್ವಹಿಸುವುದರೊಂದಿಗೆ ಗುಲಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯವನ್ನು ನಿರ್ವಹಿಸಿ ಸೇವೆಯಿಂದ ನಿವೃತ್ತಗೊಂಡು,ನಿವೃತ್ತ ಜೀವನ ನಡೆಸುತ್ತಿದ್ದಾರೆ. ಹಿತವಾದ ಮಾತು ಸದಾ ಅಧ್ಯಯನ ಮತ್ತು ಅಧ್ಯಾಪನದಲ್ಲಿ ತೊಡಗಿಸಿಕೊಂಡಿರುವ ಕಶೆಟ್ಟಿಯವರು ಮಾತನಾಡಿದ್ದಕ್ಕಿಂತ ಬರೆದದ್ದೇ ಹೆಚ್ಚು.
ಕತೆ, ಕವನ, ಕಾದಂಬರಿ, ಜೀವನಚರಿತೆ ನಾಟಕ, ಪ್ರಬಂಧ, ಶರಣ ಸಾಹಿತ್ಯ. ಸಂಪಾದನೆ ಹೀಗೆ ಸುಮಾರು ೩೬ ಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಅದರಲ್ಲಿ ಬದುಕಿನ ಪ್ರಜ್ಞೆ, ಕಾನನದ ಹೂಗಳು, ಜನ ಮೆಚ್ಚಿದ ನಾಯಕ ಶಂಕರ ಶೆಟ್ಟಿ ಪಾಟೀಲ, ಕೆ.ಚನ್ನಬಸಪ್ಪ ಕುಳಗೇರಿ, ಜ್ಞಾನದ ಬಲ, ಜೇನ ಹನಿ, ಸುಮಂಗಲ ಗೀತೆಗಳು, ಕಮಲಾಪುರದ ಜಾನಪದ ಕವಿ ಮಲ್ಲಿಕಾರ್ಜುನ ತ್ರಿಮುಖ ಹೀಗೆ ಹತ್ತು ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಲ್ಲದೇ ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಶರಣ ಅಂತರಂಗ, ಶರಣ ಸ್ಮರಣೆ, ಶ್ರೀ ಬಸವಣ್ಣನವರ ಆತ್ಮಸಂವೇದನೆ, ಶರಣ ದಿವ್ಯವಾಣಿ, ವಚನ ಕಾಣಿಕೆಯಂತಹ ಕೃತಿಗಳು ಮಹತ್ವದ ಸ್ಥಾನ ಪಡೆದುಕೊಂಡಿವೆ. ಅಲ್ಲದೇ ಇವರ 'ಶರಣ ಅಂತರಂಗ' ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದ ಕೊಡುಗೆಗೆ 'ಅವ್ವ ಗೌರವ' ಪ್ರಶಸ್ತಿ ಮತ್ತು 'ದೇವನಾಂಪ್ರಿಯ' ಪ್ರಶಸ್ತಿ ದೊರೆತಿದ್ದು, ಅಲ್ಲದೇ ಕಮಲಾಪುರದಲ್ಲಿ ನಡೆದ ಕಲಬುರಗಿ ಪಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಸ್ಥಾನ ಜೊತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ೧೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಇವರಿಗೆ ಒಲಿದು ಬಂದಿದ್ದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಸುಭಾಶ್ಚಂದ್ರ ಕಶೆಟ್ಟಿಯವರ ಸಾಹಿತ್ಯವನ್ನು ಅವಲೋಕಿಸಿದಾಗ ಇವರ ಕೃತಿಗಳಲ್ಲಿ ಸುಸಂಸ್ಕೃತ ಮನೆತನದ ಹಾಗೂ ಶರಣ ಸಂಸ್ಕೃತಿಯ ಪ್ರಭಾವ ಎದ್ದು ಕಾಣುತ್ತದೆ. ಕಾಯಕ ಪ್ರಜ್ಞೆ, ಸರಳತೆ, ಸಮಾನತೆ ತತ್ವ ಇಲ್ಲಿ ಪಡಿಮೂಡಿದೆ. ಇವರ ಕೃತಿಗಳು ವ್ಯಕ್ತಿತ್ವ ವಿಕಾಸವನ್ನು, ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುತ್ತವೆ. ಅಲ್ಲದೇ ಚಿಂತನ ಕೃತಿಗಳು ವ್ಯಕ್ತಿ ಚಿತ್ರಗಳು, ಪ್ರಾದೇಶಿಕ ಹಿನ್ನೆಲೆಯಲ್ಲಿ ಮೂಡಿ ಬಂದಿದೆ. ಉತ್ತಮ ಕೌಟುಂಬಿಕ ಬದುಕು, ಹೃದಯ ವಾತ್ಸಲ್ಯ, ಪರಿಶುದ್ದಿ, ನೆರೆ ಹೊರೆಯವರಲ್ಲಿ ಆತ್ಮೀಯತೆ, ಸಮಕಾಲೀನ ಸಮಸ್ಯೆಗಳ ಚಿಂತನೆ, ಬದುಕಿನ ಬಗ್ಗೆ ಭರವಸೆ, ಪ್ರೀತಿ, ವಿಶ್ವಾಸ, ಸತ್ಯನಿಷ್ಠೆ ಯುವಶಕ್ತಿಗೆ ಎಚ್ಚರ ಇವು ಇವರ ಕೃತಿಗಳಲ್ಲಿ ಕಂಡುಬರುವ ಪ್ರಮುಖ ಸಂಗತಿಗಳಾಗಿವೆ.
ಇವರ ಬರವಣಿಗೆ ಸುಲಿದ ಬಾಳೆಹಣ್ಣಿನಂತೆ ಸರಳ, ನಿರಾಡಂಬರವಾಗಿದೆ.
ಓದುತ್ತಾ ಹೋದಂತೆ ಸಹೃದಯರ ಬರವಣಿಗೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ಚಿಂತನಾತ್ಮಕ ಅಧ್ಯಯನಕ್ಕೆ ತೊಡಗುವಂತೆ ಮಾಡುತ್ತದೆ. ಇದನ್ನು ಮನಗಂಡು ಅವರ ಅಭಿಮಾನಿಗಳು ಮತ್ತು ಬಂಧು ಮಿತ್ರರು 'ಸಾತ್ವಿಕ" ಎನ್ನುವ ೭೮೦ ಪುಟಗಳ ಅಭಿನಂದನಾ ಗ್ರಂಥವನ್ನು ಅವರು ೭೫ನೇ ವರ್ಷಕ್ಕೆ ಪಾದರ್ಪಣೆ ಮಾಡಿದಾಗ ಬ್ರಹತ್ ಕಾರ್ಯಕ್ರಮ ಆಯೋಜಿಸಿ ಅರ್ಪಿಸಿರುವದು ಅವರ ಸಾಧನೆಗೆ ಹಿಡಿದ
ಕೈಗನ್ನಡಿಯಾಗಿದೆ. ಈ ಕೃತಿಯಲ್ಲಿ ಅವರ ಕುರಿತಾದ ಅವರ ಹಿತೈಷಿಗಳು, ನಾಡಿನ ಹಿರಿಯ ವಿದ್ವಾಂಸರು ಬರೆದ ಲೇಖನಗಳ ಜೊತೆಗೆ ಕಲ್ಯಾಣ ಕರ್ನಾಟಕದ ಬಿಟ್ಟಾನ ಸಾಹಿತ್ಯ ಕುರಿತು ೩೦ ಲೇಖನಗಳು ದಾಖಲಿಸಿರುವುದು ವಿಶೇಷ. ಅದನ್ನು ಮನಗಂಡ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರರವರು "ಇವರ ಸಾಹಿತ್ಯ ಚೊಕ್ಕ ಚಿನ್ನ, ಬದುಕು ಸೋಸಿದ ಬಂಗಾರ" ಎಂದು ಹೇಳಿರಬಹುದು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಉತ್ತಮ ಕೃತಿಗಳನ್ನು ನೀಡಿದ ಸಾಧನೆ ಸುಭಾಶ್ಚಂದ್ರ ಕಶೆಟ್ಟಿಯವರದಾಗಿದೆ. ಇಂತಹ ಮೇಧಾವಿ ಸಾಹಿತಿಯನ್ನು ಸರ್ಕಾರ ಮತ್ತು ಕಲ್ಯಾಣ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳು ಗುರುತಿಸದೇ ಇರುವುದು ವಿಷಾದನೀಯ.
ಡಾ. ಶರಣಬಸಪ್ಪ ವಡ್ಡನಕೇರಿ