ಭೀಮೆಗೆ ಹೆಚ್ಚುವರಿ ನೀರು:

ಭೀಮೆಗೆ ಹೆಚ್ಚುವರಿ ನೀರು:

ಜಿಲ್ಲಾಧಿಕಾರಿಗಳಿಂದ ಭೀಮಾ ನದಿ ದಡದ ಗ್ರಾಮಗಳಿಗೆ ಭೇಟಿ, ಪ್ರವಾಹ ಪರಿಸ್ಥಿತಿ ಪರಿಶೀಲನೆ

ಕಲಬುರಗಿ:

 ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ 1 ಲಕ್ಷ ಕ್ಕೂ ಹೆಚ್ಚಿನ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಪ್ರವಾಹಕ್ಕೆ ತುತ್ತಾಗುವ ಜಿಲ್ಲೆಯ ಭೀಮಾ ನದಿ ದಡದ ಗ್ರಾಮಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತು ಪರಿಶೀಲಿಸಿದರು.

ಕಲಬುರಗಿ ತಾಲೂಕಿನ  ಸರಡಗಿ (ಬಿ)ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಣೆಯಿಂದ ತಮ್ಮ ಪ್ರವಾಸ ಆರಂಭಿಸಿದ ಅವರು ನಂತರ ನದಿಗೆ ಹತ್ತಿಕೊಂಡಿರುವ ಹಾಗರಗುಂಡಗಿ ಗ್ರಾಮಕ್ಕೆ ಭೇಟಿ ನೀಡಿದರು. ಹಾಗರಗುಂಡಗಿ-ಕೂಡಿ ಗ್ರಾಮಗಳ ನಡುವೆ ಗ್ರಾಮಸ್ಥರು ಬೋಟ್ (ಜಲ ಮಾರ್ಗ) ಬಳಸುವ‌ ಕಾರಣ ಡಿ.ಸಿ. ಅವರು ಅಧಿಕಾರಿಗಳ ಜೊತೆ ಲೈಫ್ ಜಾಕೆಟ್ ಹಾಕಿಕೊಂಡು ಬೋಟಿನಲ್ಲಿ ಕುಳಿತು ನದಿಗೆ ಒಂದು ಸುತ್ತು ಹಾಕಿ ಬೋಟ್ ಕಾರ್ಯಕ್ಷಮತೆ ಅರಿತರು. ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನದಿ ದಂಡೆಯಲ್ಲಿ ಹಾಕಲಾಗಿರುವ ಪಂಪಸೆಟ್ ತೆಗೆದುಕೊಳ್ಳುವಂತೆ ರೈತರಿಗೆ ತಿಳಿಸಬೇಕೆಂದು ಪಿ.ಡಿ.ಓ. ಗೆ ಸೂಚನೆ ನೀಡಿದರು.

ನಂತರ ನದಿಗೆ ನೀರು ಹೆಚ್ಚು ಬಂದು ಪ್ರವಾಹ ಭೀತಿ ಸೃಷ್ಠಿಸಿದಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಗ್ರಾಮದ ಶಾಲೆಯನ್ನು ಕಾಳಜಿ ಕೇಂದ್ರವೆಂದು ಗುರುತಿಸುವ ಕಾರಣ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಶಾಲಾ‌ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಪ್ರವಾಹ ಪೀಡಿತ ಗ್ರಾಮಗಳ ನೋಡಲ್ ಅಧಿಕಾರಿಯಾಗಿರುವ ಎಸ್.ಎಲ್.ಎ.ಓ ಭೂಸ್ವಾಧೀನಾಧಿಕಾರಿ ರಾಮಚಂದ್ರ ಗಡಾದೆ, ಕಲಬುರಗಿ ಗ್ರೇಡ್-1 ತಹಶೀಲ್ದಾರ ಕೆ.ಆನಂದಶೀಲ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಸೇರಿದಂತೆ ಕೆ.ಎನ್.ಎನ್.ಎಲ್., ಸಣ್ಣ ನೀರಾವರಿ, ಜೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

ಕಲಬುರಗಿ-ವಿಜಯಪುರ ಡಿ.ಸಿ.ಗಳಿಂದ ಸೊನ್ನ ಬ್ಯಾರೇಜ್ ವೀಕ್ಷಣೆ:

ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವ ಕಾರಣ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮತ್ತು ಪಕ್ಕದ ವಿಜಯಪುರ ಡಿ.ಸಿ. ಟಿ.ಭೂಬಾಲನ್ ಅವರು ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಚರ್ಚಿಸಿದರು.

ಮಹಾರಾಷ್ಟ್ರದಿಂದ ಇಂಡಿಯ ಚಡಚಣ್ ಮಾರ್ಗವಾಗಿ ಜಿಲ್ಲೆಯ ಮಣ್ಣೂರ ಗ್ರಾಮದ ಮೂಲಕ ಭೀಮಾ ನದಿಗೆ ನೀರು ಸೇರುವುದರಿಂದ ಉಭಯ ಜಿಲ್ಲೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಇಂಡಿ ಸಹಾಯಕ ಆಯುಕ್ತ ಅಬೀದ್ ಗದ್ಯಾಳ, ಅಫಜಲಪೂರ ತಹಶೀಲ್ದಾರ ಸಂಜೀವಕುಮಾರ ದಾಸರ್, ಇಂಡಿ ತಹಶೀಲ್ದಾರ ಸುರೇಶ ಚೌಲಾರ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಮೊದಲಾದ ಅಧಿಕಾರಿಗಳು ಇದ್ದರು.

ಇದಕ್ಕು ಮುನ್ನ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗಾಣಗಾಪೂರ ಸೇತುವೆಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನದಿ ದಂಡೆಗೆ ಹೋಗಬಾರದು. ನದಿ ದಡಕ್ಕೆ ದನ-ಕರುಗಳನ್ನು ಬಿಡದೆ ಎಚ್ಚರಿಕೆಯಿಂದಿರಬೇಕೆಂದು ತಿಳಿಸಿದರು.