ವಿಶೇಷಚೇತನರಿಗೆ ಮೀಸಲಿಟ್ಟ ಹಣ ಸಂಪೂರ್ಣ ಸದ್ಬಳಕೆಯಾಗಲಿ -ಬಿ.ಫೌಜಿಯಾ ತರನ್ನುಮ್
ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ:
ವಿಶೇಷಚೇತನರಿಗೆ ಮೀಸಲಿಟ್ಟ ಹಣ ಸಂಪೂರ್ಣ ಸದ್ಬಳಕೆಯಾಗಲಿ -ಬಿ.ಫೌಜಿಯಾ ತರನ್ನುಮ್
ಕಲಬುರಗಿ,ಡಿ.13(ಕಲ್ಯಾಣ ಕಹಳೆ ವಾರ್ತೆ) ಸರ್ಕಾರದ ಎಲ್ಲಾ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ನಗರಸಭೆ, ಪಟ್ಟಣ ಪಂಚಾಯತಿ, ಪುರಸಭೆ ಕಚೇರಿಗಳು ಶೇ.5ರ ಅನುದಾನವನ್ನು ಮೀಸಲಿಟ್ಟು ವಿಕಲಚೇತನರಿಗೆ ಅನುಕೂಲವಾಗುವ ರೀತಿಯಲ್ಲಿ ಸದ್ಬಳಕೆ ಮಾಡಬೇಕೆಂದು ಜಿಲ್ಲಾ ಮಟ್ಡದ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಮೀಸಲಿಟ್ಟ ಶೇ.5 ಅನುದಾನ ಪರಿಣಾಮಕಾರಿ ಅನುಷ್ಟಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಕಟ್ಟಡಗಳು ವಿಕಲಚೇತನರ ಸ್ನೇಹಿಯಾಗಿರಬೇಕು. ವಿಕಲಚೇತನರ ಚಲನವಲನಕ್ಕೆ ಸಹಯವಾಗುವಂತೆ ರ‌್ಯಾಂಪ್ ನಿರ್ಮಿಸಬೇಕು ಎಂದರು.
ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣಿ ಮತ್ತು ಸಂಪೂರ್ಣ ಭಾಗವಹಿಸುವಿಕೆ) ಅಧಿನಿಯಮ-2016ರ ಅಧ್ಯಾಯ 6 ಸೆಕ್ಷನ್ 37 ರನ್ವಯ ಸರ್ಕಾರದ ವಿವಿಧ ಇಲಾಖೆಗಳು ಬಡತನ ನಿರ್ಮೂಲನಾ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಅಂಗವಿಕಲರಿಗೆ ಶೇ.5 ರಷ್ಟು ಮೀಸಲಿರಿಸಬೇಕು. ಇದರಲ್ಲಿ ಅಂಗವಿಕಲ ಮಹಿಳೆಯರಿಗೆ ಆದ್ಯತೆ ನೀಡಬೇಕೆಂದರು.
ಅನ್ಯ ಕೆಲಸಕ್ಕೆ ಹಣ ಬಳಸುವಂತಿಲ್ಲ:
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮಾತನಾಡಿ, ವಿಕಲಚೇತನರಿಗೆ ಮೀಸಲಿಟ್ಟ ಅನುದಾನವು ಅದೇ ವರ್ಗಕ್ಕೆ ಖರ್ಚಾಗುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇಲಾಖೆಯ ಬೇರೆ ಯೋಜನೆಗೆ ವಿಶೇಷಚೇತನರಿಗೆ ಮೀಸಲಿಟ್ಟ ಹಣ ಖರ್ಚು ಮಾಡಬಾರದೆಂದು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೆನ್ ಸರ್ವರನ್ನು ಸ್ವಾಗತಿಸಿ ಶೇ.5 ಅನುದಾನದ ಪ್ರಗತಿ ವಿವರ ನೀಡಿದರು.
