ಬಾಲ್ಯ ವಿವಾಹಕ್ಕೆ ಮುಂದಾದ ಪಾಲಕರಿಗೆ ಬುದ್ಧಿ ಕಲಿಸಿದ ಮಗಳು
ಬಾಲ್ಯ ವಿವಾಹಕ್ಕೆ ಮುಂದಾದ ಪಾಲಕರಿಗೆ ಬುದ್ಧಿ ಕಲಿಸಿದ ಮಗಳು
ಬಸವಕಲ್ಯಾಣ: ಕಲಿಯುವ ಹಂತದಲ್ಲಿ ಮದುವೆಗೆ ಮುಂದಾದ ಪಾಲಕರ ನಿರ್ಧಾರದಿಂದ ಬೇಸರಗೊಂಡ ವಿದ್ಯಾರ್ಥಿನಿಯೊಬ್ಬಳು ಮಕ್ಕಳ ಸಹಾಯವಾಣಿ ಹಾಗೂ ಪೋಲೀಸ್ ಇಲಾಖೆ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮದುವೆ ತಡೆಯುವಂತೆ ಮನವಿ ಮಾಡಿಕೊಂಡ ಪ್ರಸಂಗ ಬಸವಕಲ್ಯಾಣ ತಾಲೂಕಿನ ಮುಡಬಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮ ಒಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. 9ನೇ ತರಗತಿಯಲ್ಲಿ ಓದುತ್ತಿರುವ ಇನ್ನೂ ಕೇವಲ 14 ವರ್ಷದ ಬಾಲಕಿಯಾಗಿರುವ ಈ ಬಾಲೆಗೆ ತನ್ನ ಸೋದರ ಮಾವನೊಂದಿಗೆ ಮದುವೆ ಮಾಡಲು ಪಾಲಕರು ತೀರ್ಮಾನಿಸಿ ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಬೆಳವಣಿಗೆಯನ್ನು ಗಮನಿಸಿದ ಬಾಲಕಿಯು ತನಗೆ ಮದುವೆ ಇಷ್ಟವಿಲ್ಲ, ತಾನು ಇನ್ನೂ ಓದಬೇಕು, ಓದುವ ವಯಸ್ಸಿಗೆ ಮದುವೆ ಬೇಡ ಎಂದು ಪಾಲಕರಲ್ಲಿ ಗೋ ಗೆರೆದಿದ್ದಾಳೆ. ಆದರೆ ಈಗ ಮಾತಿಗೆ ಬೆಲೆ ನೀಡಿದ ಆಕೆಯ ಪಾಲಕರು, ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಬಾಲಕರ ನಿರ್ಧಾರದಿಂದ ಬೇಸರಗೊಂಡ ಬಾಲಕಿಯು, ತಕ್ಷಣ ಮಕ್ಕಳ ಸಹಾಯವಾಣಿ ದೂರವಾಣಿ ಸಂಖ್ಯೆ 1098 ಹಾಗೂ ಪೋಲಿಸ್ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಿ, ನಡೆಯುತ್ತಿರುವ ಬೆಳವಣಿಗೆ ಬಗ್ಗೆ ವಿವರಿಸಿದ್ದಾಳೆ. ಕರೆ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿದ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ, ತಹಸಿಲ್ದಾರ ದತ್ತಾತ್ರೇಯ ಗಾದ, ಸಿಡಿಪಿಓ ಗೌತಮ್, ಮುಡಬಿ ಪಿಎಸ್ಐ ಜಯಶ್ರೀ ಹೊಡಲ್ ನೇತೃತ್ವದ ಅಧಿಕಾರಿಗಳ ತಂಡ ಬಾಲಕಿ ಧೈರ್ಯಕ್ಕೆ ಮೆಚ್ಚಿ ಆಕೆಗೆ ಸನ್ಮಾನಿಸಿ ಗೌರವಿಸುವ ಜೊತೆಗೆ, ಬಾಲಕಿಗೆ 18 ವರ್ಷ ತುಂಬವರೆಗೆ ಯಾವುದೇ ಕಾರಣಕ್ಕೂ ಮದುವೆ ಮಾಡಬಾರದು ಎಂದು ಆಕೆಯ ಪಾಲಕರಿಗೆ ತಾಕೀತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.