ಡಾ.ಪದ್ಮಾವತಿ ಬಿ. ಕಲೆಗಾರ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದ ಪದ್ಮಾವತಿ ಬಿ. ಕಲೆಗಾರ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಕಲಬುರಗಿಯಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣ ಮತ್ತು ಬಿ.ಎ. ಪದವಿಯನ್ನು ಕಲಬುರಗಿಯ ನೂತನ ಮಹಾವಿದ್ಯಾಲಯದಲ್ಲಿ ಕಲಿತರು. ಬಿ.ಎಡ್. ಪದವಿಯನ್ನು ಕಲಬುರಗಿಯ ಗೋಧುತಾಯಿ ಕಾಲೇಜಿನಲ್ಲಿ ಕಲಿತರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯಿಂದ ಪಡೆದು ಪ್ರಸ್ತುತ ಅದೇ ವಿಭಾಗದ “ಡಾ. ತೇಜಸ್ವಿ ಕಟ್ಟಿಮನಿ ಅವರ ಬದುಕು ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ" ಎಂಬ ವಿಷಯದಡಿ ಪಿ.ಎಚ್‌ಡಿ, ಸಂಶೋಧನೆ ಅಧ್ಯಯನ ಕೈಗೊಂಡಿದ್ದಾರೆ. ಅಧ್ಯಯನದ ಜೊತೆ ಜೊತೆಗೆ ಹಲವು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಗಾರಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ್ದಾರೆ. ಡಾ. ತೇಜಸ್ವಿ ಕಟ್ಟಿಮನಿಯವರ ಕಾವ್ಯ ಅವಲೋಕನ, ದೇವದುರ್ಗದ ಜನಪದ ಕಲಾವಿದೆ ಕಾಳಮ್ಮ ಚಲುವಾದಿ, ಕೋಪಣಾಚಲಕ್ಕೆ ಕೀರ್ತಿ ತಂದ ಕುಲಪತಿ ತೇಜಸ್ವಿ ಕಟ್ಟಿಮನಿ, ಯಾದಗಿರಿ ಜಿಲ್ಲೆಯ ಗ್ರಾಮದೇವತೆಗಳು ಸೇರಿದಂತೆ ಹಲವು ಸಂಶೋಧನಾ ಲೇಖನಗಳು ಸ್ಥಿತಿಗತಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೇ ಇವರು ಆಕಾಶವಾಣಿ ಕಲಬುರಗಿ ಕೇಂದ್ರದಿಂದ ಹೊಸ ಓದು ಕಾರ್ಯಕ್ರಮದಲ್ಲಿ ನಾಲ್ಕು ಸಾಹಿತ್ಯಕ ಕೃತಿಗಳನ್ನು ಪರಿಚಯಿಸಿದ್ದಾರೆ. ಇವರ 2017ನೇ ಸಾಲಿನಲ್ಲಿ ಬರೆದ "ನೆಲ ಸಂಸ್ಕೃತಿಯ ಚಿಂತನೆ"ಎಂಬ ಚೊಚ್ಚಲ ಕೃತಿಗೆ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರವು ಧನಸಹಾಯ ನೀಡಿ ಪ್ರೋತ್ಸಾಹಿಸಿ ಕೃತಿ ಬಿಡುಗಡೆ ಮಾಡಿ ಗೌರವ ನೀಡಿದೆ. ಎರಡನೇ ಕೃತಿ ರೇಖಾಕ್ಷಿಯು ಓದುಗರ ಗಮನ ಸೆಳೆದಿದೆ.
ಡಾ.ಶರಣಬಸಪ್ಪ ವಡ್ಡನಕೇರಿ