ಅಪರಿಚಿತ್ ವ್ಯಕ್ತಿಯಿಂದ ಬಂಗಾರ ಹಣ ಲೂಟಿ ಮಾಡಿದ ಪೊಲೀಸ್ ವೇಷಧಾರಿಗಳು
ಕಲಬುರಗಿ:
ಸೇಡಂ ತಾಲೂಕಿನ ಬೈಕ್ ಸವಾರನಿಗೆ ನಾವು ಪೊಲೀಸರು ಎಂದು ನಂಬಿಸಿದ ಇಬ್ಬರು ದುಷ್ಕರ್ಮಿಗಳು, ಸವಾರನ ಗಮನ ಬೇರೆಡೆ ಸೆಳೆದು ಆತನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಸೇಡಂ ಪಟ್ಟಣದ ನಿವಾಸಿ ಮನೋಹರ ಸತ್ಯನಾರಾಯಣ ₹1.60 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಸಂತ್ರಸ್ತ. ಸೇಡಂ ಪೊಲೀಸ್ ಠಾಣೆಯಲ್ಲಿ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಮನೋಹರ ಅವರು ಬೆಳಿಗ್ಗೆ 8.30ಕ್ಕೆ ಬೈಕ್‌ನಲ್ಲಿ ಹೂವಿನಳ್ಳಿ ಪ್ರದೇಶದಲ್ಲಿರುವ ತಮ್ಮ ಜಮೀನಿಗೆ ಹೋಗುತ್ತಿದ್ದರು. ಚಿಂಚೋಳಿ ರಸ್ತೆಯ ಯಡ್ಡಳ್ಳಿ ಕ್ರಾಸ್‌ನಲ್ಲಿ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ನಕಲಿ ಗುರುತಿನ ಚೀಟಿ ತೋರಿಸಿ ತಮ್ಮನ್ನು ಸೆಂಟ್ರಲ್ ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ.
ಬೈಕ್ ದಾಖಲೆಗಳು ತೋರಿಸು, ಹೆಲ್ಮೆಟ್ ಎಲ್ಲಿದೆ ಎಂದು ಕೇಳಿದರು. ಎಲ್ಲ ಕಡೆ ಆಭರಣಗಳು ಕಳುವಾಗುತ್ತಿವೆ, ಮೈಮೇಲೆ ಹಾಕಿಕೊಂಡು ಏಕೆ ತಿರುಗುತ್ತಿದ್ದೀಯಾ? ಉಂಗುರ, ಲಾಕೆಟ್ ಬಿಚ್ಚಿ ಕೊಡು ಕರ್ಚೀಫ್‌ನಲ್ಲಿ ಕಟ್ಟಿಕೊಡುವುದಾಗಿ ಹೇಳಿದ್ದಾರೆ. ಅವರ ಮಾತನ್ನು ನಂಬಿದ ಮನೋಹರ, ಚಿನ್ನಾಭರಣಗಳನ್ನು ತೆಗೆದು ಅವರ ಕೈಯಲ್ಲಿಟ್ಟರು. ಆತನ ಗಮನವನ್ನು ಬೇರೆಡೆ ಸೆಳೆದು, ಕರ್ಚೀಫ್ ಕಟ್ಟಿದಂತೆ ಮಾಡಿ, ಅದನ್ನು ಕೈಯಲ್ಲಿಟ್ಟರು. ಮನೆಗೆ ಹೋಗಿ ಕರ್ಚೀಫ್ ತೆಗೆದು ನೋಡಿಕೊಳ್ಳುವಂತೆ ಹೇಳಿ ಅಲ್ಲಿಂದ ಕಾಲ್ಕಿತ್ತರು. ಅನುಮಾನ ಬಂದು ಕರ್ಚೀಫ್ ತೆಗೆದು ನೋಡಿದಾಗ ಚಿನ್ನಾಭರಣ ದೋಚಿದ್ದು ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.