ಅಳ್ಳೊಳ್ಳಿ ಮಹಾತ್ಮ ಗದ್ದುಗೆ ಮಠದ
ಅಳ್ಳೊಳ್ಳಿ ಮಹಾತ್ಮ ಗದ್ದುಗೆ ಮಠದ ನಾಟಕಗಳು ಕೇವಲ ನಾಟಕಗಳಲ್ಲ,ಭಕ್ತಿಯ ಉತ್ಸವಗಳು
ಕರ್ನಾಟಕ ಸಾಂಸ್ಕೃತಿಕ ಚರ್ಚೆಯಲ್ಲಿ ಸಾಹಿತ್ಯ ಹಾಗೂ ರಾಜಕೀಯ ಚರ್ಚೆಗಳದ್ದೇ ಸಿಂಹಪಾಲು. ಅಲ್ಲಿ ಜನಮಾನಸದ ಭಾಗವಾಗಿದ್ದ, ಜನಸಾಮಾನ್ಯರ ಉತ್ಸವ ಮತ್ತು ಉತ್ಸಾಹಗಳ ರೂಪಗಳಾಗಿದ್ದ ಸಂಗೀತ, ರಂಗಭೂಮಿ, ಸಿನಿಮಾ ಮುಂತಾದ ಕಲೆ ಹಾಗೂ ಕಲಾವಿದರ ಕುರಿತು ಚರ್ಚೆ ನಡೆದದ್ದು ಬಲು ಕಡಿಮೆ. ನಡೆದರೂ ತಮ್ಮ ಜೀವಿತ ಕಾಲದಲ್ಲಿ ಲಕ್ಷಾಂತರ ಜನರ ಮನಸ್ಸನ್ನು ಸೂರೆಗೊಂಡ ಮತ್ತು ಸದಭಿರುಚಿ ರೂಪಿಸಿದ, ಆಲೋಚನೆಗೆ ಹಚ್ಚಿದ ನಾ.ನಾ.ಸಂ.ನಂತಹ (ನಾಗೇಂದ್ರ ನಾಟ್ಯ ಸಂಘ) ಸಂಸ್ಥೆಗಳ ಕುರಿತು ಚರ್ಚೆ ನಡೆದದ್ದು ಕಡಿಮೆ.
ಧರ್ಮಾತೀತವಾದ, ಜಾತ್ಯಾತೀತವಾದ ಮನುಷ್ಯ ಸಂಬಂಧಗಳನ್ನು ಬೆಳೆಸುತ್ತಿರುವ ಅಳ್ಳೊಳ್ಳಿಯ ಗದ್ದುಗೆ ಮಠವು ತನ್ನ ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆಗಳೊಂದಿಗೆ ಸಾಹಿತ್ಯ, ಸಂಗೀತ, ರಂಗಭೂಮಿ, ಚಟುವಟಿಕೆಗಳೊಂದಿಗೆ, ಸಾಮಾಜಿಕ ಪರಿವರ್ತನೆಗೆ ಶ್ರಮಿಸುತ್ತ ಬಂದಿದೆ. ನಾ.ನಾ.ಸಂ.ನಂತಹ ನಾಟ್ಯ ಸಂಘವನ್ನು ಹುಟ್ಟು ಹಾಕಿ, ಗ್ರಾಮಾಂತರ ಪ್ರದೇಶದಲ್ಲಿ ರಂಗಭೂಮಿ ಹಾಗೂ ಸಂಗೀತದ ಬೆಳವಣ ಗೆಗೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ವೃತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿ ಚಟುವಟಿಕೆಗಳನ್ನು ನಗರ ಕೇಂದ್ರಿತ ಚಟುವಟಿಕೆಯಾಗಿ, ತೀರ ಶೈಕ್ಷಣ ಕ ಚರ್ಚೆಯ ಭಾಗವಾಗಿ ಮಾತ್ರ ನೋಡುತ್ತ ಬರಲಾಗಿದೆ. ವೃತ್ತಿ, ಹವ್ಯಾಸಿ ಮತ್ತು ಗ್ರಾಮೀಣ ರಂಗಭೂಮಿಯ ಸ್ಪಷ್ಟ ಕಲ್ಪನೆಕೊಟ್ಟು, ಅದನ್ನು ನಿರಂತರ ಜೀವಂತವಾಗಿಟ್ಟ ಅಳ್ಳೊಳ್ಳಿ ಗದ್ದುಗೆ ಮಠದಂತಹ ಮಠಗಳು, ಅಲ್ಲಿನ ಶ್ರೀಗಳ ರಂಗಭೂಮಿ ಮತ್ತು ಸಂಗೀತ ಕಾಳಜಿಗಳು ನಮ್ಮ ಶೈಕ್ಷಣ ಕ ಚರ್ಚೆಗಳ ಭಾಗವಾಗದಿರುವುದು ವಿಷಾದದ ಸಂಗತಿ. ನನ್ನ ಪ್ರಕಾರ ಅಳ್ಳೊಳ್ಳಿ ಗದ್ದುಗೆಮಠ ಮತ್ತು ಅದು ರಂಗಚಟುವಟಿಕೆಗಳಿಗಾಗಿಯೆ ಹುಟ್ಟುಹಾಕಿದ ನಾ.ನಾ.ಸಂ.ಗಳ ಅಭ್ಯಾಸವೆಂದರೆ, ಇಲ್ಲಿನ ಶ್ರೀಗಳು ಕಲಾವಿದರು ಮಾಡಿದ ಸಾಧನೆಗಳನ್ನು ಯಾದಿ ಮಾಡುವುದಲ್ಲ. ಬದಲಾಗಿ ತಮ್ಮ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ ಆಡುವ, ನೋಡುವ, ಆಲಿಸುತ್ತ ಬೆಳೆದ ಪ್ರಬುದ್ಧ ಕಲಾಸಕ್ತಿಯ ಬಗೆಗಳನ್ನು ಅರಿಯುವುದಾಗಿದೆ.
``ಅಳ್ಳೊಳ್ಳಿಯ ಮಠವು ಸಂಗೀತ, ಸಾಹಿತ್ಯ ಕಲೆಗಳ ತ್ರಿವೇಣ ಸಂಗಮ. ಇಲ್ಲಿ ಹಲವಾರು ಕಲಾವಿದರು, ಕವಿಗಳು, ಸಂಗೀತಗಾರರು ಬೆಳೆದು ಬಂದಿದ್ದಾರೆ. ಮಹಾತ್ಮಪೀಠವು ಎರಡನೆಯ ಗದಗಿನ ಪುಣ್ಯಾಶ್ರಮವಾಗಿದೆ’’ ಎನ್ನುವ ಕಲ್ಯಾಣ ಕರ್ನಾಟಕ ಪ್ರಸಿದ್ಧ ನಾಟಕಕಾರರು ಶ್ರೀಮಠದ ಪರಮಭಕ್ತರೂ ಆದ ಎಲ್.ಬಿ.ಕೆ. ಆಲ್ದಾಳ ಅವರ ಮಾತು, ಮಠದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮನಸ್ಸಿಗೆ ನಾಟಿಸುತ್ತದೆ.
ಕಲ್ಯಾಣ ಕರ್ನಾಟಕದ ಪ್ರಸಿದ್ಧ ನಾಟಕಕಾರರು ಹಾಗೂ ನಾಟಕದ ಮಾಸ್ತರರೆಂದೇ ಜನಪ್ರೀತಿ ಪಡೆದಿದ್ದ ಶ್ರೀ ವಿಶ್ವನಾಥ ಮಾಸ್ತರ ಬೆಳಗುಂಪಾ ಅವರು ಹೇಳುವಂತೆ
ರಂಗಕಲೆಯ ಪುಣ್ಯಕೋಟಿ ಗೋವಿನಂಥ ಗುರುವು
ಕಲೆಯು ಉಳಿಸಲೆಂದು ಧರೆಗೆ ಬಂದ ಹರಿಯು ನೀನು
ಕಲೆ ಮತ್ತು ಕಲಾವಿದನು ನಿರ್ಮಿಸಿದ ಸಿರಿಯು ನೀನು
ರಂಗಭೂಮಿ ಕಲಾವಿದರಿಗೆ ಗದ್ದುಗೆ ಅಳ್ಳೊಳ್ಳಿ ಕಲ್ಪವೃಕ್ಷ ನೀನು
ಕಲಾವಿದರ ಅಂತರಂಗ ಚೈತನ್ಯಕ್ಕೆ ಚೇತೋಹಾರಿ ನೀನು (ವಿಶ್ವರಂಗ ಅಭಿನಂದನ ಗ್ರಂಥ, ಪು.೧೬)
ರಂಗಭೂಮಿ, ಸಂಗೀತ ಅಂದರೇನೇ ಸಮಾನತೆ, ಸಹಬಾಳ್ವೆ, ಭೇದವಿಲ್ಲದ ಬೆರೆಯುವಿಕೆ, ಪರಸ್ಪರರನ್ನು ಸಹಿಸಿಕೊಳ್ಳುವ, ಪರಸ್ಪರರು ಕೂಡಿಕಟ್ಟುವ ಒಂದು ಸಾಮುದಾಯಿಕ ಪ್ರಕ್ರಿಯೆ. ಸಮೂಹದ ಕಲೆಯಾದ ರಂಗಭೂಮಿಯಲ್ಲಿ ಸಮಾಜದ ಎಲ್ಲ ವರ್ಗದವರೂ ಪಾಲ್ಗೊಳ್ಳುತ್ತಾರೆ. ನಾವೆಲ್ಲರೂ ಒಂದೇ ಎನ್ನುವ ಭಾವ ಕಲಾವಿದರಲ್ಲಿರುತ್ತದೆ. ಅನೇಕ ರೀತಿಯ ಸೃಜನಶೀಲ ಮನೋಭಾವದವರಿರುವ ಕಾರಣ ವಿಭಿನ್ನ ವಿಚಾರಗಳು ಹಾಗೂ ಬಹುಮುಖಿ ಸಂವೇದನೆಗಳಿಂದಾಗಿ ರಂಗಭೂಮಿ ಮತ್ತು ಸಂಗೀತಗಳಿಗೆ ಸೃಜನಶೀಲ ವೈವಿಧ್ಯತೆ ಪ್ರಾಪ್ತವಾಗುತ್ತದೆ. ಈ ಪ್ರಕ್ರಿಯೆಯು ಕಲಾವಿದರಲ್ಲಿ ಸಹನೆಯನ್ನು, ವಿಚಾರ ಸ್ವಾತಂತ್ರ್ಯ, ಸ್ವಾತಂತ್ರ್ಯ ಅಭಿವ್ಯಕ್ತಿಯ ವೈವಿಧ್ಯತೆಯನ್ನು, ಪರಸ್ಪರ ಗೌರವಿಸುವುದನ್ನು ಕಲಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ತಾನು ಅರ್ಥಮಾಡಿಕೊಳ್ಳುವ ಗುಣವನ್ನು ಬೆಳೆಸುತ್ತದೆ. ಈ ಆಂತರಿಕ ಪ್ರಜಾಪ್ರಭುತ್ವವೇ ರಂಗಭೂಮಿ ಹಾಗೂ ಸಂಗೀತ ಕಲೆಗಳನ್ನು ಸಮೃದ್ಧವೂ, ವೈವಿಧ್ಯಮವೂ ಹಾಗೂ ಪ್ರಯೋಗಶೀಲವೂ ಆಗಿಸಿದೆ. ಮಹಾತ್ಮ ಗದ್ದುಗೆ ಮಠವು ಇಂತಹ ಪ್ರಯೋಗಶೀಲತೆಯ ತವರೂರಾಗಿದೆ.
ಹಿಂದೂಸ್ಥಾನಿ ಸಂಗೀತ, ವೃತ್ತಿರಂಗಭೂಮಿ, ಜನಪದ ರಂಗಭೂಮಿ ಮತ್ತು ಸಂಗೀತ, ಗ್ರಾಮೀಣ ರಂಗಭೂಮಿ, ಸೂಫಿ ಹಾಗೂ ಮೊಹರಂ ಪರಂಪರೆ, ವಿವಿಧ ಸಿದ್ಧ ಸಾಧಕರ ಮೌಢ್ಯರಹಿತ ತತ್ತವಗಳ ಶೋಧನೆ ಮತ್ತು ಬೋಧನೆ, ನಾಟಕ ರಚನೆ ಮತ್ತು ಪ್ರದರ್ಶನ, ನಿರ್ದೇಶನ, ಹೀಗೆ ವಿಶಾಲ ತಿಳುವಳಿಕೆಯ ಹರವಿನಲ್ಲಿ ಮಹಾತ್ಮ ಪೀಠದ ಪೂಜ್ಯರು ತಮ್ಮ ಭಕ್ತಿ ಹಾಗೂ ಕಲಾ ಕೈಂಕರ್ಯ ಮಾಡಿದ್ದಾರೆ. ಜಾತ್ಯಾತೀತ ಸಂಸ್ಕೃತಿಯ ಬೇರುಗಳನ್ನು ಬಲಗೊಳಿಸುತ್ತ ಬಂದಿದ್ದಾರೆ. ಮನುಷ್ಯ ನಿರ್ಮಿತ ಎಲ್ಲ ರೀತಿಯ ಭೇದಗಳನ್ನು ಮೀರಿ, ಬೆರೆತು ಬಾಳುವ, ಬೆರೆತು ನುಡಿಯುವ, ಬೆರೆತು ಆಡುವ ಸ್ವತಂತ್ರ ಮನೋಧರ್ಮ ಜನಮಾನಸದಲ್ಲಿ ಬೆಳೆಸಿದವರು ಮಹಾತ್ಮ ಪೀಠದ ಶ್ರೀಗಳು.
ಭಾರತೀಯ ಅಥವಾ ಕರ್ನಾಟಕದ ಕಲೆ ಮತ್ತು ಅನುಭಾವಗಳ ಚರಿತ್ರೆಯನ್ನು ಗಮನಿಸಿದರೆ, ಶ್ರೇಣಿ ಕೃತ ವ್ಯವಸ್ಥೆಯು ಹಾಕಿದ, ಸಾಮಾಜಿಕ ನಿರ್ಬಂಧಗಳನ್ನು ದಾಟಲು ಸೃಜನಾತ್ಮಕವಾದ ಹೊಸದಾರಿಗಳನ್ನು ಹುಡುಕಿಕೊಂಡಿದ್ದು ಗ್ರಹಿಕೆಗೆ ನಿಲುಕುತ್ತದೆ. ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಅಥವಾ ನಿಕೃಷ್ಟಕ್ಕೆ ಒಳಗಾದವರಿಗೆ ಕಲೆ ಅಥವಾ ಅನುಭಾವದ ದೀಕ್ಷೆ ನೀಡಿ, ವೃತ್ತಿ ಮತ್ತು ವೃತ್ತಿಗೌರವ ಹೆಚ್ಚಿಸುತ್ತ, ಸದೃಢ ಆತ್ಮವಿಶ್ವಾಸ ಬೆಳೆಸಿ, ಸ್ವಾವಲಂಬನೆಯಿಂದ ಬದುಕುವಂತೆ ಮಾಡಿದ ಕೀರ್ತಿ, ಅಳ್ಳೊಳ್ಳಿ ಮಹಾತ್ಮ ಪೀಠಕ್ಕೆ ಸಲ್ಲುತ್ತದೆ.
`ನಾನಾ ದೇವರು ಚಾಣ ನಿ ಮಕ್ಕಳು’ `ನಾನಾ ದೇವರ ಮಾಡಿದ ಉಳಿಯೊಂದೆ, ಕೊಡತಿಯೊಂದೆ, ಶಿಲೆಯಲ್ಲವೂ ಒಂದೆ, ಶಿಲ್ಪಿ ಒಂದೇ’ ಎಂದು ಮನುಷ್ಯಕೇಂದ್ರಿತ ಚಿಂತನೆ ಹಾಗೂ ಬದುಕಿನ ನೆಲೆಗಳನ್ನು ಮುನ್ನೆಲೆಗೆ ತಂದ, ಮಹಾ ಮಾನವತಾವಾದಿ, ತಿಂತಿಣ ಮೌನೇಶ್ವರರ ಅನುಭಾವ ಪರಂಪರೆಯ ಕುಡಿಯಾದ ಅಳ್ಳೊಳ್ಳಿ ಮಹಾತ್ಮಪೀಠವು ಮಾನವ ಪ್ರತಿಭೆಯ ಅಭಿವ್ಯಕ್ತಿಯ ನೆಲೆಗಳಿಗೆ ಬಹುದೊಡ ಶಕ್ತಿಯಾಗಿ ಬೆಳೆದುಬಂದಿದೆ. ಇಕ್ಕಟ್ಟಾದ ಸಾಮಾಜಿಕ ಸ್ಥಿತಿಯಲ್ಲಿ ಬದುಕುತ್ತಿದ್ದ ಅನೇಕ ಪುರುಷ ಮತ್ತು ಮಹಿಳಾ ಕಲಾವಿದರಿಗೆ ಕಲಾದೀಕ್ಷೆ ನೀಡಿ, ಅವರು ದಿಟ್ಟತನದಿಂದ ಜಾಣ್ಮೆಯಿಂದ ಬದುಕುವ ವಾತಾವರಣ ನಿರ್ಮಿಸಿದರು.
ಭಕ್ತಿ, ಸಂಗೀತ, ರಂಗಭೂಮಿ, ನಟನೆಯಂತಹ ಕಲೆಗಳು ಒಂದು ಕಾಲದಲ್ಲಿ ಕೆಲವರಿಗೆ ಅದರಲ್ಲಿಯೂ ಮಹಿಳೆಯರಿಗೆ ನಿಷೇಧಿತ ಲೋಕಗಳಾಗಿದ್ದವು. ಇಂತಹ ಕಲೆಗಳಲ್ಲಿ ಭಾಗವಹಿಸುವವರ ನಡತೆಗಳನ್ನು ಸಂಶಯಿಸಲಾಗುತ್ತಿತ್ತು. ಅಂತವರೆಲ್ಲರೂ ತಮ್ಮೊಳಗಿನ ಕಲೆಯ ಮೂಲಕ ಅರಳಿ, ತಮ್ಮ ಚೈತನ್ಯಶೀಲ ಪ್ರತಿಭೆಯನ್ನು ಪ್ರಕಟಿಸಿ, ಸ್ವಯಂ ಬಿಡುಗಡೆ ಪಡೆಯುವ ವೇದಿಕೆಯನ್ನು ಶ್ರೀಮಠವು ನಿರ್ಮಿಸುತ್ತ ಬರುತ್ತಿದೆ. ಸಾಮಾಜಿಕ ನಿಕೃಷ್ಟತೆ, ಸಾಮಾಜಿಕ ಗೌರವ, ಜನಪ್ರಿಯತೆ, ಹೊಸಗೌರವ, ಮಾನದಂಡ, ಹಳೆಯ ಯಜಮಾನಿ ವ್ಯವಸ್ಥೆಯ ನಿರಾಕರಣೆ, ಕಲಾ ಸ್ವಾತಂತ್ರ್ಯ, ಸ್ವಯಂ ಬಿಡುಗಡೆ ಕಲಾವಿದರಲ್ಲಿ ಒಟ್ಟೊಟ್ಟಿಗೆ ಸಂಭವಿಸಿದ ಕ್ಷಣವಿದು. ಕಲೆ ಮತ್ತು ಕಲಾವಿದರ ಇಂತಹ ಸಿಮೋಲ್ಲಂಘನೆಯ ವರ್ತನೆಗಳಲ್ಲಿ ಪರ್ಯಾಯ ಚಿಂತನೆಗಳಲ್ಲಿ, ಭಾರತದ ವರ್ತಮಾನ ಹಾಗೂ ಭವಿಷ್ಯಕ್ಕೆ ಬೇಕಾಗಬಹುದಾದ ಧರ್ಮಾತೀತ ಹಾಗೂ ಜಾತ್ಯಾತೀತ ನೆಲೆಗಳಿರುವುದು ಗಮನಾರ್ಹ.
ಅಳ್ಳೊಳ್ಳಿ ಮಹಾತ್ಮ ಗದ್ದುಗೆ ಮಠವು ಗ್ರಾಮಾಂತರ ರಂಗಭೂಮಿ ಹಾಗೂ ಸಂಗೀತ ಕಲೆಯನ್ನು ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರವಾಗಿ ಜೀವಂತವಾಗಿಟ್ಟುಕೊಂಡು ಬಂದಿದೆ. ಇಲ್ಲಿನ ಪೂಜ್ಯ ಹಂಪಯ್ಯ ಸ್ವಾಮಿಗಳು, ಪೂಜ್ಯ ನಾಗಪ್ಪಯ್ಯ ಸ್ವಾಮಿಗಳು ಕೇವಲ ಧಾರ್ಮಿಕ ಗುರುತುಗಳನ್ನು ತೊಟ್ಟು, ಮಹಾತ್ಮ ಪೀಠವನ್ನು ಜಡವಾಗಿಸದೆ, ಮಾನವೀಯ ಅಂತಃಕರಣಗಳ ಮೂಲಕ ಜಂಗಮವಾಗಿಸಿದ್ದಾರೆ. ನಂಬಿ ಬಂದವರಿಗೆ ಮಹಾತ್ಮರಾಗಿ, ಕಲೆ ಅರಸಿ ಬಂದವರಿಗೆ ಆಶ್ರಯದಾತರಾಗಿ, ಸ್ವತಃ ತಾವೇ ಸಂಗೀತಗಾರರು, ನಾಟಕಕಾರರು, ನಿರ್ದೇಶಕರು ಆಗಿ, ಬಹುವಾದ್ಯ ಪರಿಣ ತರಾಗಿ, ರಂಗ ತಜ್ಞರಾಗಿ, ಜನಮಾನಸದೊಂದಿಗೆ ಬೆರೆಯುತ್ತ ಜನರ ಮಾನಸಿಕ ಸಾಮರ್ಥ್ಯ ಹೆಚ್ಚಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬುತ್ತ ಬಂದಿದ್ದಾರೆ.
ಮಹಿಪಾಲರೆಡ್ಡಿ ಮುನ್ನೂರವರು ಹೇಳುವಂತೆ “ಚಿತ್ತಾಪುರ ತಾಲ್ಲೂಕಿನಲ್ಲಿ ಅಂಥ ಹೇಳಿಕೊಳ್ಳುವ ರಂಗ ವಾತಾವರಣ ಇಲ್ಲದಿದ್ದರೂ, ಪ್ರತಿವರ್ಷ ಗದ್ದುಗೆ ಅಳ್ಳೊಳ್ಳಿ ಊರಿನಲ್ಲಿ ಮಾತ್ರ ನಾಟಕವಾಡುತ್ತಿದ್ದರು. ಅಲ್ಲಿನ ವಿಶ್ವಕರ್ಮ ಮಠದ ಶ್ರೀಗಳು ರಂಗಭೂಮಿಯ ಬಗ್ಗೆ ಅಪಾರ ಗೌರವವಿಟ್ಟುಕೊಂಡಿದ್ದರು. ಅಲ್ಲಿನ ಪೂಜ್ಯರು ನಾಟಕಗಳಲ್ಲಿ ಅಭಿನಯಿಸಿ ಗ್ರಾಮೀಣ ರಂಗಭೂಮಿಯನ್ನು ಬೆಳೆಸಿದ್ದಾರೆ. ವಿಶ್ವನಾಥ ಬೆಳಗುಂಪಾ ಎನ್ನುವ ರಂಗ ಕಲಾವಿದರು ಬೆಳೆದು ನಿಲ್ಲಲು ಇವರದು ದೊಡ್ಡ ಕೊಡುಗೆ ಇದೆ”. (ವಿಶ್ವರಂಗ, ಪು.೩; ೨೦೧೬)
ಅಳ್ಳೊಳ್ಳಿ ಮಠದ ಅಜ್ಜನ ಜಾತ್ರೆ ಉತ್ಸವಗಳು ಚಿತ್ತಾಪುರ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕಲೆ ಮತ್ತು ಸಂಗೀತದ ಭಕ್ತಿಸುಧೆಯನ್ನು ಹರಿಸಿವೆ. ನಾ.ನಾ.ಸಂ. ಮೂಲಕ (೧೯೯೧ ರಿಂದ ಇಂದಿನವರೆಗೂ) ‘ಅಳ್ಳೊಳ್ಳಿ ಶ್ರೀ ಅಯ್ಯಪ್ಪಯ್ಯ ಮಹಾತ್ಮೆ’, ‘ಜಗದ್ಗುರು ತಿಂತಿಣ ಮೌನೇಶ್ವರರ ಮಹಾತ್ಮೆ’, ‘ಮಹಾತ್ಮಾ ಪೀಠದೊಡತಿ ಶಿವಶರಣೆ ಭಾಗಮ್ಮ ತಾಯಿ’ ಇಂತಹ ಅನೇಕ ಭಕ್ತಿಪ್ರಧಾನ ನಾಟಕಗಳ ಮೂಲಕ “ಇವು ಕೇವಲ ನಾಟಕಗಳಲ್ಲ, ಭಕ್ತಿಯ ಉತ್ಸವಗಳು” ಎನ್ನುವ ಹಿರಿಮೆಯನ್ನು ಜನಮಾನಸದಲ್ಲಿ ನೆಲೆನಿಲ್ಲಿಸಿವೆ. ಮಠದ ಆಚರಣಾ ಲೋಕದ ಭಾಗವಾಗಿ ಪ್ರಕಟವಾದ ರಂಗಭೂಮಿ ಸಂಗೀತಗಳಲ್ಲಿ ಸ್ಥಳೀಯ ಸಾಮಾಜಿಕ, ಆರ್ಥಿಕ ಹಾಗೂ ಸಾಮುದಾಯಿಕ ಜಗತ್ತಿನೊಂದಿಗೆ ಬೆಸುಗೆ ಇದೆ.
ಹೀಗಾಗಿ ಜಾತ್ರೆ, ಉತ್ಸವ ಹಾಗೂ ಹಬ್ಬಗಳ ಧಾರ್ಮಿಕತೆಯನ್ನು, ಸಮುದಾಯಗಳ ಸಾಮಾಜಿಕ ಬದುಕಿನ ವಾಸ್ತವಗಳನ್ನು, ಸಂಗೀತ, ರಂಗಭೂಮಿ, ಸಾಹಿತ್ಯ, ಕುಣ ತ, ಕಾರಣ ಕ, ಪುರವಂತಿಕೆ, ಮೊಹರಂ ಮುಂತಾದ ಅಭಿವ್ಯಕ್ತಿಯ ರೂಪಗಳನ್ನು ಒಟ್ಟೊಟ್ಟಿಗೆ ಇಟ್ಟು ಅಭ್ಯಾಸ ಮಾಡಬೇಕಾಗುತ್ತದೆ. ಕರ್ನಾಟಕದ ಗ್ರಾಮಾಂತರ ಜನಬದುಕು ದೇಶ, ಕಾಲ, ಜಾತಿ, ಮತಗಳನ್ನು ಮೀರಿದ ಮಾನವ ಸಂಬಂಧಗಳ ಮೀಮಾಂಸೆಯನ್ನು ಹುಡುಕುವುದು ಈ ವಿಚಾರ ಸಂಕಿರಣದ ಉದ್ದೇಶವಾಗಿದೆ.
ಪುರಾಣಗಳ ಮೂಲಕ, ಪವಾಡಗಳ ಮೂಲಕ, ಮಹಾತ್ಮೆಗಳ ಮೂಲಕ, ನಾಟಕಗಳ ಮೂಲಕ ತನ್ನ ಚರಿತ್ರೆಯನ್ನು ವರ್ತಮಾನೀಕರಿಸಿಕೊಳ್ಳುವ, ಹೊಸದರ ಜೊತೆ, ಸಮಾನ ಮನೋಧರ್ಮದ ಜೊತೆ, ಸಂಬಂಧ ಸ್ಥಾಪಿಸಿಕೊಳ್ಳುವ ಸೃಜನಶೀಲತೆಯ ಬಗೆಗಳನ್ನು ಅರ್ಥಮಾಡಿಕೊಳ್ಳುವುದು ಈ ವಿಚಾರ ಸಂಕಿರಣದ ಉದ್ದೇಶವಾಗಿದೆ. ನಾ.ನಾ.ಸಂ. ಮೂಲಕ ಪ್ರಯೋಗವಾದ ೯೩ ಸಾಮಾಜಿಕ ನಾಟಕಗಳ ೫೭೫ ಪ್ರಯೋಗಗಳು, ೨೧ ಆಧ್ಯಾತ್ಮಿಕ ನಾಟಕಗಳ ೩೬೫ ಪ್ರಯೋಗಗಳು, ಶ್ರೀಮಠದ ಜಾತ್ರೆಯಲ್ಲಿ ಪ್ರದರ್ಶನಗೊಂಡ ೩೨ ನಾಟಕಗಳು, ೧೫ ವಾದ್ಯ ಪ್ರಕಾರಗಳನ್ನು ನುಡಿಸುವ ೬೬ ವಾದ್ಯ ಕಲಾವಿದರು, ಅನೇಕ ಕವಿಗಳು, ಕಲಾವಿದರು, ರಂಗ ಮತ್ತು ಸಂಗೀತ ನಿರ್ದೇಶಕರನ್ನು ನೀಡಿದ ಕೀರ್ತಿ ಶ್ರೀಮಠದ್ದು. ಇಷ್ಟೆಲ್ಲ ಸಾಧನೆ ಮಾಡಿಯೂ ಶ್ರೇಷ್ಠ ಸಾಧಕರ ಪಾಲಿಗೆ ಸೇರದ ಶ್ರೀ ಅಳ್ಳೊಳ್ಳಿ ಗದ್ದುಗೆ ಮಠದ ಕುರಿತು ನಡೆಯುತ್ತಿರುವ ಇಂದಿನ ಈ ವಿಚಾರ ಸಂಕಿರಣವು ಚಿತ್ತಾಪುರ ತಾಲ್ಲೂಕಿನ ರಂಗಭೂಮಿ ಹಾಗೂ ಸಂಗೀತ ಕಲೆಗಳ ಮಸುಕಾದ ಭಾಗವೊಂದನ್ನು ಮರುಕಟ್ಟಿಕೊಳ್ಳುವ ಉದ್ದೇಶ ಹೊಂದಿದೆ.
ಅಳ್ಳೊಳ್ಳಿ ಗದ್ದುಗೆ ಮಠದ ಕಲಾ ಶ್ರೇಷ್ಠತೆಯನ್ನು ಮಠದ ಪೂಜ್ಯರು, ಭಕ್ತರು, ಕಲಾವಿದರು, ಕಲಾಕಾರರ ಕಲಾ ಕಾಳಜಿ, ಕನ್ನಡ ಪ್ರೀತಿ ಹಾಗೂ ಸಾಂಸ್ಕೃತಿಕ ವಿನಿಮಯ ಹಾಗೂ ಅವುಗಳ ಅಲೋಚನಾ ಕ್ರಮಗಳನ್ನು ಅರಿಯುವುದಾಗಿದೆ. ಇದು ಕೇವಲ ಅಳ್ಳೊಳ್ಳಿ ಗದ್ದುಗೆ ಮಠ ಅಥವಾ ಅಲ್ಲಿನ ಅಪ್ಪಗಳ ವರ್ಣರಂಜಿತ ಕಥನವಲ್ಲ. ಇದು ಸಾಂಸ್ಕೃತಿಕ ಮನಸ್ಸುಳ್ಳವರ ನಾಡಿನ ಕಥನ, ನಾಡಿಗರ ಕಥನವಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ.
ಡಾ. ವೀರೇಶ ಬಡಿಗೇರ ,ಮುಖ್ಯಸ್ಥರು, ನಾಟಕ ವಿಭಾಗ
ಸಂಚಾಲಕರು ಶ್ರೀರಂಗ ದತ್ತಿನಿಧಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ೫೮೩ ೨೭೬ ಮೊ: ೯೪೪೮೮೪೫೭೮೯