ಜಯದೇವಿತಾಯಿ ಲಿಗಾಡೆ

ಜಯದೇವಿತಾಯಿ ಲಿಗಾಡೆ

ವಾಚಿಕೆ-1

ಜಯದೇವಿತಾಯಿ ಲಿಗಾಡೆ

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಶಿವಾಜಿ ಮೇತ್ರೆಯವರು ಡಾ.ಜಯದೇವಿತಾಯಿ ಲಿಗಾಡೆಯವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಜಯದೇವಿತಾಯಿಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಬೀದರ ಸೊಲ್ಲಾಪುರ ಗಡಿ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆ ಸಾಹಿತ್ಯ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಜಯದೇವಿತಾಯಿ ಲಿಗಾಡೆ ಕನ್ನಡ ನಾಡು ಕಂಡ ಅಪರೂಪದ ಸಾಧಕಿ, ಎರಡು ಭಾಷಿಕ ಪರಂಪರೆಯ ಮಧ್ಯೆ ಅರಳಿದ ಅವರ ಸಾಂಸ್ಕೃತಿಕ ಪ್ರಜ್ಞೆ ಸಾಮಾಜಿಕ ವಲಯವನ್ನೇ ಪ್ರಭಾವಿಸಿದೆ. ಮನೆಮಾತು ಕನ್ನಡವಾಗಿದ್ದರೂ ಕಲಿತ ಶಾಲೆ ಮರಾಠಿಯಾಗಿತ್ತು. ಆದರೆ ಕನ್ನಡ ಮೇಲಿನ ಅಭಿಮಾನದಿಂದ ಅಧ್ಯಯನಗೈದು ವಚನ, ರಗಳೆ, ಷಟ್ಟದಿ, ಹಳೆಗನ್ನಡ ಕಾವ್ಯ ಓದಿ ಚೆನ್ನಾಗಿ ಅರ್ಥೈಸುವಷ್ಟು ಪರಿಣಿತಿ ಹೊಂದಿದರು. ಮತ್ತು ಕನ್ನಡ ಸಾಹಿತ್ಯಕ್ಕೆ ಆಸ್ತಿಯಾಗುವಂತ ಹಲವು ಮೌಲಿಕ ಕೃತಿಗಳನ್ನು ನೀಡಿದರು.

ಬುದ್ಧ ಬಸವ ಅಂಬೇಡ್ಕರಂತಹ ಮಹನೀಯರ ವಿಚಾರಗಳಿಂದ ವಿಕಾಸಗೊಂಡ ಜಯದೇವಿತಾಯಿಯವರ ವ್ಯಕ್ತಿತ್ವ ಮಾನವ ಸಮಾಜಕ್ಕೆ ಒಂದು ಮಾದರಿ ಎನಿಸಿದೆ. ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಕವಾಗಿ ಅವರ ಕೊಡುಗೆ ಅಪಾರವಾದುದು. ಅಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ 'ಶ್ರೀ ಸಿದ್ಧರಾಮೇಶ್ವರ ಪುರಾಣ'ದಂತ ಮಹಾಕಾವ್ಯ ತ್ರಿಪದಿಯಲ್ಲಿ ಬರೆದಿರುವುದು ಅವರ ಶ್ರೇಷ್ಠ ಕೊಡುಗೆ ಎಂದೇ ಹೇಳಬೇಕು. ಇಂಥ ಅಪರೂಪದ ಸಾಧಕಿಯನ್ನು ಅವರ ಬರಹಗಳನ್ನು ಅರಿತುಕೊಳ್ಳಬೇಕಾಗಿರುವುದು ಈ ಕಾಲದ ಅಗತ್ಯವೇ ಆಗಿದೆ.

ಶರಣರ ತತ್ವಚಿಂತನೆಗಳಿಂದ ಪ್ರಭಾವಿಸಿದ ಅವರ ಸಾಂಸ್ಕೃತಿಕ ಪ್ರಜ್ಞೆ ಹಲವು ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿದೆ. ವಚನ ಚಳವಳಿಯ ಪ್ರಧಾನ ಆಶಯವಾಗಿ ಬೆಳೆದು ಬಂದ ಅನುಭಾವ ಸಾಹಿತ್ಯ ಜಯದೇವಿತಾಯಿಯವರ ಸೃಜನಶೀಲತೆಯ ಮಾರ್ಗವನ್ನು ನಿರ್ಮಿಸಿಕೊಟ್ಟಿದೆ. ಇದರ ಪರಿಣಾಮದ ಫಲವಾಗಿ ಕನ್ನಡ ಮತ್ತು ಮರಾಠಿಯಲ್ಲಿ ಹಲವು ಬಗೆಯ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಜನಪದರ ಬದುಕಿನ ಸಮೃದ್ಧಿಯ ಭಾಗವಾಗಿ ಬಂದ ತ್ರಿಪದಿಗಳು ತಾಯಿಯವರ ಅನುಭಾವಲೋಕ ವನ್ನು ಬೆಳಗಿಸಿವೆ. ಈ ನೆಲೆಯಲ್ಲಿಯೇ ಅವರ ಸಾವಿರಾರು ಅನುಭವ ಗೀತೆಗಳು ರಚನೆಯಾಗಿವೆ. ಶರಣರ ಆಶಯಗಳಿಗೆ ದನಿಯಾಗುವ ಅವರ ಅಭಿವ್ಯಕ್ತಿ ಕ್ರಮ ವಚನಗಳನ್ನೇ ಹೋಲುವಂತಿವೆ.

 ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 192 ಪುಟಗಳನ್ನು ಹೊಂದಿದ್ದು 190 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.