ಸಿದ್ದರಾಮ ಹೊನ್ಕಲ್

ಸಿದ್ದರಾಮ ಹೊನ್ಕಲ್

       ವಾಚಿಕೆ-18

    ಸಿದ್ದರಾಮ ಹೊನ್ಕಲ್

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಆದ ಇವರು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಬಹುತೇಕ ಕೃತಿಗಳು ಉಪಲಬ್ಧವಿರುವುದಿಲ್ಲ.ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸುಮಾರು ಹತ್ತು ಸಾವಿರ ಪುಟಗಳು ದಾಟುತ್ತವೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದವರಾದ ನಮ್ಮ ಸದಿಚ್ಛೆಯಾಗಿದೆ.

 ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯ ಅಂಗವಾಗಿ ಹಿರಿಯ ಲೇಖಕರಾದ ಇವರ ಸಮಗ್ರ ಪ್ರಕಾರದ ಬರವಣಿಗೆಯ ವಾಚಿಕೆ ಈ ಕೃತಿ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಸಂತೋಷ ಎಸ್. ಕಂಬಾರ ಅವರು ಸಿದ್ದರಾಮ ಹೊನ್ಕಲ್ ಅವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ . ಸಿದ್ದರಾಮ ಹೊನ್ಕಲ್‌ರವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ಕೂಡಾ ಲಭಿಸಿದೆ. ಇವರೊಬ್ಬ ಶ್ರೇಷ್ಠ ಲೇಖಕರಾಗಿದ್ದು, ಅವರ ಒಟ್ಟು ಸಾಹಿತ್ಯದ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಕಲ್ಯಾಣ ಕರ್ನಾಟಕದ ಭಾಗದ ಸಗರನಾಡಿನ ಮೂಲಕ ನಾಡಿನಾದ್ಯಂತ ಸಾಹಿತ್ಯದ ಕರುಳಬಳ್ಳಿ ಸಂಬಂಧ ಹೊಂದಿ ಗುರುತಿಸಿಕೊಂಡಿರುವ, ಈ ನಾಡು ಕಂಡ ಬಹುಮುಖ ಪ್ರತಿಭೆಯುಳ್ಳ ಅಪರೂಪದ ಬರಹಗಾರ ಶ್ರೀ ಸಿದ್ದರಾಮ ಹೊನ್ಕಲ್‌ರು. ಯುವ ಪೀಳಿಗೆಯ ಮೇಲೆ ದಟ್ಟ ಪ್ರಭಾವ ಬೀರುವ ಹಾಗೂ ಮೈತ್ರಿ ಭಾವ ಹೊಂದಿರುವ ಇವರು ಅಂತಃಕರಣದ ಸೃಜನಶೀಲ ಕವಿಯಾಗಿ ಸಮಕಾಲೀನ ಎಲ್ಲ ಸಂಗತಿಗಳಿಗೆ ತಮ್ಮ ಸೂಕ್ಷ್ಮ ಸಂವೇದನೆಯ ಅನನ್ಯ ಒಳನೋಟಗಳ ಮೂಲಕ ಆಪ್ತವಾಗಿ ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡಿ ಚಿರಪರಿಚಿತರಾಗಿದ್ದಾರೆ. ಸ್ವಯಂ ಪ್ರತಿಭೆಯಿಂದ ನಾಡಿನ ಪ್ರಮುಖ ಬರಹಗಾರರ ನಿಕಟವರ್ತಿಯಾಗಿ ತಾವೊಬ್ಬ ಸೃಜನಶೀಲ ಬರಹಗಾರ ಎಂಬುದನ್ನು ಋಜುವಾತು ಮಾಡಿದವರು. ಪ್ರಾದೇಶಿಕ ಭಾಷೆಯನ್ನು ಸರಳವಾಗಿ ಮತ್ತು ಅಷ್ಟೇ ಸಮರ್ಥವಾಗಿ ಕಾವ್ಯಾತ್ಮಕವಾಗಿ, ಕಥಾನಕ ಶೈಲಿಯಲ್ಲಿ ದಿನನಿತ್ಯದ ಬದುಕಿನಂಗಳದಲ್ಲಿನ ಜೀವನಾನುಭವಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತಾ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ.

ಇವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲಿ 23-12-1960 ರಲ್ಲಿ ಜನಿಸಿದರು.ಎಂ. ಎ, ಎಲ್. ಎಲ್. ಬಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಆರೋಗ್ಯ ಶಿಕ್ಷಣ ಮತ್ತು ನ್ಯೂಟ್ರಿಷನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ವೃತ್ತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಮಾಜಶಾಸ್ತ್ರ ಬೋಧಕರಾಗಿ ಅತ್ಯಂತ ದಕ್ಷ, ಪ್ರಾಮಾಣಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವರು.

 ಪ್ರವೃತ್ತಿಯಿಂದ ಕನ್ನಡ ಸಾಹಿತ್ಯದ ಆರಾಧಕರಾಗಿ ಅಪಾರ ಆಸಕ್ತಿ ಮತ್ತು ಅಭಿರುಚಿಯ ಸೆಳೆತದಿಂದ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕಾವ್ಯ ಸಂಕಲನ (ಕವನ, ಹನಿಗವನ, ಗಜಲ್, ಹೈಕು, ಶಾಯಿರಿ)-೧೭, ಕಥಾ ಸಂಕಲನ- ೪, ಲಲಿತ ಪ್ರಬಂಧ ಸಂಕಲನ-೫, ಪ್ರವಾಸ ಕಥನ-೭, ಶರಣರ ಕುರಿತಾದ ಕೃತಿಗಳು- ೩. ವಿಮರ್ಶೆ ಕೃತಿ-೨, ಜೀವನ ಕಥನ ಕೃತಿಗಳು-೫, ಹೊನ್ನುಡಿಗಳು-೩, ಸಂಪಾದನೆ ಹಾಗೂ ಇತರೆ-೨೦ ಹೀಗೆ ಕನ್ನಡ ಸಾಹಿತ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ದೈತ್ಯಪ್ರತಿಭೆ.

 ಸಾಮಾಜಿಕ ಕಳಕಳಿ, ಪ್ರಗತಿಪರ ಚಿಂತನೆ, ಜೀವಪರ, ಮಾನವೀಯ ಮೌಲ್ಯಗಳುಳ್ಳ ಹೋರಾಟಗಾರರಾಗಿ, ಉತ್ತಮ ಸಂಘಟಕರಾಗಿ, ಪ್ರಖರ ವಾಗ್ಮಿಗಳೆಂದು ಖ್ಯಾತಿ ಪಡೆದವರು. ಸೂಕ್ಷ್ಮ ಸಂವೇದನೆ, ಸತ್ಯ, ನಿಷ್ಠೆ, ಪ್ರಾಮಾಣಿಕತೆ, ದಿಟ್ಟತನದಿಂದ ಸ್ಪಂದಿಸುವ ಸೃಜನಶೀಲ ಬರಹಗಾರ. ಕೆಂಡದುಂಡೆಗಳಂತೆ ಉರಿಯುತ್ತಿರುವ ಬಿರುಬಿಸಿಲಿನ ಉತ್ತರ ಕರ್ನಾಟಕದ ಕೆನ್ನೆ ನೆಲದಲ್ಲಿ ಅಲೆದಾಡುತ್ತಾ, ತಾವು ಕಂಡುಂಡ ನೋವು, ನಲಿವು, ಜೀವನಾನುಭವಗಳಿಗೆ ವಿಶಿಷ್ಟವಾಗಿ, ಸಂವೇದನಾತ್ಮಕ ಕಥನ ಶೈಲಿಯ ಭಾವನೆಗಳಿಗೆ ಭಾಷಿಕ ಆಕೃತಿಯನ್ನು ನೀಡುತ್ತಾ, ಓದುಗರನ್ನು ಸೆಳೆಯುವಂತೆ ನಿರೂಪಿಸುತ್ತಿರುವ ನಾಡಿನ ಹಿರಿಯ ಲೇಖಕರಾಗಿದ್ದಾರೆ. ಈ ಯುಗದ ಕಾಲಘಟ್ಟದಲ್ಲಿ ಧಾರ್ಮಿಕ, ಸಾಮಾಜಿಕ ನೆಲೆಗಳಲ್ಲಿ ಮಾತ್ರವೇ ಪರಿವರ್ತನೆ ಕಂಡು ಬರಲಿಲ್ಲ. ಸಾಹಿತ್ಯದಲ್ಲಿಯೂ ಸ್ಥಿತ್ಯಂತರಗಳು ಕಾಣಿಸಿಕೊಂಡು ಸಾಹಿತ್ಯ ಜನಮುಖಿಯಾಗಿ, ಪರಿಣಾಮಕಾರಿಯಾಗಿ ವೈವಿಧ್ಯಮಯ ಛಂದೋ ರೂಪಗಳಲ್ಲಿ ಕಾವ್ಯ ರಚನೆಯಾಯಿತು. ದೇಸೀ ಶೈಲಿಯ ಕಾವ್ಯ ರೂಪದಿಂದ, ಜನಪರ ಕವಿ, ಬರಹಗಾರ ಎನಿಸಿಕೊಂಡು ಜನಮನದಲ್ಲಿ ನೆಲೆನಿಂತು ಜೀವವಾಹಿನಿಯಾಗಿ, ಮೌಲಿಕ ಗುಣ ಮತ್ತು ಕಲ್ಪನಾಶಕ್ತಿ ಸಾಮರ್ಥ್ಯಗಳಿಂದ ಜನಮನ್ನಣಿ ಪಡೆದಿದ್ದಾರೆ.

ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 200 ಪುಟಗಳನ್ನು ಹೊಂದಿದ್ದು 200 ರೂಪಾಯಿ ಬೆಲೆ ನಿಗದಿ ಪಡಿಸಲಾಗಿದೆ.

ಪ್ರಕಾಶಕರು,

ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ

ಕಲಬುರ್ಗಿ