ಡಾ. ನಾಗಪ್ಪ ಟಿ. ಗೋಗಿ
ವೃತ್ತಿಯಿಂದ ಸಹ- ಪ್ರಾಧ್ಯಾಪಕರಾಗಿರುವ ಡಾ. ನಾಗಪ್ಪ ಟಿ. ಗೋಗಿ ನೇರ ನೇರ ನೀಷ್ಣುರ ವಾದಿಗಳಾಗಿದ್ದಾರೆ. ಸತತ ಅಧ್ಯಯನ ಸಂಘಟನೆ ಹಾಗೂ ಸಾಹಿತ್ಯಕ ಚಟುವಟಿಕೆಗಳಿಂದಾಗಿ ಹೆಸರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿಪೇಠದವರಾದ ಶ್ರೀಯುತರು ತಿಪ್ಪಣ್ಣ ಹಾಗೂ ಯಂಕಮ್ಮ ದಂಪತಿಗಳ ಸುಪುತ್ರರಾಗಿ ೨೭ -೦೭-೧೯೮೦ ರಲ್ಲಿ ಜನಿಸಿದ್ದಾರೆ. ಇವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು, ಕಡು ಬಡತನದಲ್ಲಿಯೇ ಬೆಳೆದವರು. ಸೋದರ ಮಾವ ಮತ್ತು ಅಣ್ಣ-ಅತ್ತಿಗೆಯರ ಆರೈಕೆಯಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದವರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ. ತೇರ್ಗಡೆಯಾಗಿದ್ದಾರೆ. ಲಿಂಗಣ್ಣ ಸತ್ಯಂಪೇಟೆಯವರ ಕೃತಿಗಳ ಕುರಿತು ಎಂ.ಫಿಲ್ ಅಧ್ಯಯನ ಮಾಡಿದ್ದಾರೆ, ಅಂಬಿಗರ ಚೌಡಯ್ಯನ ಜೀವನ ಕುರಿತು ಪಿಎಚ್.ಡಿ. ಸಂಶೋಧನೆ ಪೂರೈಸಿದ್ದಾರೆ. ಹೀಗಾಗಿ ಶ್ರೀಯುತರ ಅರಿವು ಮತ್ತು ಆಲೋಚನೆಗಳಲ್ಲಿ ಬಂಡಾಯದ ಧೋರಣೆ ಕಾಣಿಸಿಕೊಂಡಿದೆ.
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕನ್ನಡ ಬೋಧಕರಾಗಿ ಆಯ್ಕೆಗೊಂಡ ಇವರು ಪ್ರಾರಂಭದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೆಂಭಾವಿಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ನಂತರ ಹುಮನಾಬಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರು ವರ್ಷ ಸೇವೆ ಪೂರೈಸಿದ್ದಾರೆ. ಪ್ರಸ್ತುತ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಕಲಬುರಗಿಯ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಬಂಡಾಯ ಸಾಹಿತಿ ಲಿಂಗಣ್ಣ ಸತ್ಯಂಪೇಟೆ, ಅಂಬಿಗರ ಚೌಡಯ್ಯ ಎಂಬ ಸಂಶೋಧನ ಕೃತಿಗಳನ್ನು ಪ್ರಕಟಿಸದ್ದಾರೆ. ಸಾಂಸ್ಕೃತಿಕ ಸಾಧಕರು, ಪ್ರಬಂಧ ಸಂಗ್ರಹ, ಜ್ಞಾನಸಿರಿ, ರಂಗಸಿರಿ ಮುಂತಾದ ಸಂಪಾದಿತ ಕೃತಿಗಳು ಇವರ ಪ್ರತಿಭಾ ಸಾಮರ್ಥ್ಯವನ್ನು ಎತ್ತಿತೋರಿಸುತ್ತವೆ. ಮೊದಲಿನಿಂದಲೂ ಕವಿತೆಗಳನ್ನು ಬರೆಯುವಲ್ಲಿ ನಿರತರಾಗಿರುವ ಇವರ ಅನೇಕ ಕವಿತೆಗಳು ಕಲಬುರಗಿ ಆಕಾಶವಾಣಿಯ ಯುವವಾಣಿಯಲ್ಲಿ, ಪುಸ್ತಕ ಪರಿಚಯದ ಲೇಖನಗಳು ಹೊಸ ಓದು ವಿಭಾಗದಲ್ಲಿ ಪ್ರಸಾರವಾಗಿವೆ. ಶೋಧ ಗಂಗಾ, ಜೋಗಿ ಕೊಳ್ಳ ಕನ್ನಡ ಕಾವ್ಯ ಸಂಚಯ, ರಚನಾ, ಕವಿಮಾರ್ಗ, ಕವಿಜನಮಾರ್ಗ ಮುಂತಾದ ಸಂಪುಟಗಳಲ್ಲಿ ವಿವಿಧ ನಿಯತಕಾಲಿಕೆಗಳಲ್ಲಿ ಇವರ ಅನೇಕ ಲೇಖನಗಳು ಪ್ರಕಟವಾಗಿವೆ. ಇವರು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಅನೇಕ ಸಂಶೋಧನ ಲೇಖನಗಳನ್ನು ಸಾದರಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ನೃಪತುಂಗ ಹಾಗೂ ಕರ್ಮವೀರ ಸಾಹಿತ್ಯ ವೇದಿಕೆಯ ಸಂಘಟನಾ ಕಾರ್ಯದರ್ಶಿಯಾಗಿ, ಹೈ.ಕ. ಸರಕಾರಿ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಗುಲಬರ್ಗಾ ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಸಂಘದ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತು ಸಮುದಾಯ ವೇದಿಕೆ ಮೊದಲಾದ ಸಂಘ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಹೆಸರಾಗಿದ್ದಾರೆ. ಶ್ರೀಯುತರ ನಿಜಶರಣ ಅಂಬಿಗರ ಚೌಡಯ್ಯ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರ ಪ್ರಬಂಧ ಸಂಗ್ರಹ ಕೃತಿಯು ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಸೊಲ್ಲಾಪುರ ವಿಶ್ವವಿದ್ಯಾಲಯದ ಸ್ನಾತಕ ತರಗತಿಗಳಿಗೆ ಪಠ್ಯವಾಗಿದೆ. ಸಾಂಸ್ಕೃತಿಕ ಸಾಧಕರು ಎನ್ನುವ ಇವರ ಸಂಪಾದಿತ ಕೃತಿಯು ಕಲಬುರಗಿಯ ಸ್ವಾಯತ್ತ ಸರಕಾರಿ ಮಹಾವಿದ್ಯಾಲಯದ ಬಿ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ರಂಗಸಿರಿಯು ಸ್ವಾಯತ್ತ ಸರಕಾರಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ತರಗತಿಗಳಿಗೆ ಪಠ್ಯವಾಗಿದೆ. ಇವರ ಸಾಹಿತ್ಯಕ ಮತ್ತು ಸಾಮಾಜಿಕ ಸಾಧನೆಯನ್ನು ಗುರುತಿಸಿ ಕಲಬುರಗಿಯ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಸಂಘಟನೆಗಳು ದೇವನಾಂಪ್ರಿಯ ಪ್ರಶಸ್ತಿ, ಡಿ, ದೇವರಾಜ ಅರಸು ಪ್ರಶಸ್ತಿ, ಸಾಧನಾ ಪ್ರಶಸ್ತಿ ನಾಡಶ್ರೀ ಪ್ರಶಸ್ತಿ, ಅವ್ವ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಶ್ರೀಯುತರು ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರ್ ರಾಷ್ಟ್ರೀಯ ಸಂಘಟನೆಯ ಕಲಬುರಗಿ ಜಿಲ್ಲೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಒಂದಿಲ್ಲೊಂದು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕಂತಿಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡು, ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಕಲಬುರಗಿಯಲ್ಲಿಫೆಬ್ರುವರಿ ೭ ೨೦೨೦ ರಂದು ನಡೆದದಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.ಡಾ.ನಾಗಪ್ಪ ಟಿ. ಗೋಗಿಯವರು ಈ ಭಾಗದಲ್ಲಿ ಉತ್ಸಾಹಿ ಸಂಘಟಕರಾಗಿ, ಯುವ ಸಾಹಿತಿಯಾಗಿ, ಕ್ರಿಯಾಶೀಲ ಕನ್ನಡ ಪ್ರಾಧ್ಯಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಡಾ. ಶರಣಬಸಪ್ಪ ವಡ್ದನಕೇರಿ