“ನಿರುದ್ಯೋಗಿಗಳ ಭವಿಷ್ಯದೊಂದಿಗೆ ರಾಜ್ಯ ಸರಕಾರ ಚೆಲ್ಲಾಟ'
“ನಿರುದ್ಯೋಗಿಗಳ ಭವಿಷ್ಯದೊಂದಿಗೆ ರಾಜ್ಯ ಸರಕಾರ ಚೆಲ್ಲಾಟ'
ಕಲಬುರಗಿ: ನಿರುದ್ಯೋಗಿಗಳಿಗೆ ವಯಸ್ಸಿನ ಸಂಕಟವಾದರೆ, ಅವರ ಭವಿಷ್ಯದೊಂದಿಗೆ ರಾಜ್ಯ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಮ್ಮ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳು ಕನಸಿನ ಮೂಟೆ ಹೊತ್ತು, ಬೇರೆ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ, ಸರಕಾರಿ ಉದ್ಯೋಗ ಅರಸಿ ಪರೀಕ್ಷೆ ಬರೆದಿರುತ್ತಾರೆ. ಅಂತಹ ಉದ್ಯೋಗಾಕಾಂಕ್ಷಿ ಗಳನ್ನು ಸರಕಾರ ಮತ್ತೊಮ್ಮೆ ಸಂಕಷ್ಟಕ್ಕೆ ದೂಡಿದೆ. ನಾನಾ ಗ್ರೂಪ್ -ಬಿ ಹುದ್ದೆಗಳಿಗೆ ಸೆ. 14 ಮತ್ತು 15ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆ.5 ರಂದೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿಯೂ ವ್ಯತ್ಯಯ ಕಂಡುಬಂದಿದ್ದು, ತಾತ್ಕಾಲಿಕವಾಗಿ ಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆ ಸ್ಥಗಿತಗೊಳಿಸುವ ಮೂಲಕ ಕೆಪಿಎಸ್‌ಸಿ ಹಾಗೂ ಸರಕಾರದ ಹುಳುಕು ಬಯಲಾಗಿದೆ ಎಂದು ಟೀಕಿಸಿದ್ದಾರೆ.
ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರಕಾರ, ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ನ್ಯೂನತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಗುರಿಯಾಗಿತ್ತು. ಇದೀಗ ಅಂಥದ್ದೇ ಎಡವಟ್ಟು ಮಾಡಲು ಸರಕಾರ ಮುಂದಾಗಿದೆ. ಸೆ.22ರಂದು ಯುಪಿಎಸ್ಸಿ ಹಾಗೂ ಎಸ್ಎಸ್ ಸಿ ಪರೀಕ್ಷೆಗಳ ದಿನಾಂಕ ನಿಗದಿಯಾಗಿದ್ದು, ಅದೇ ದಿನ ಪಿಎಸ್‌ಐ ಪರೀಕ್ಷೆ ನಡೆಸಲು ಮುಂದಾಗಿದ್ದು, ಉದ್ಯೋಗಾಕಾಂಕ್ಷಿಗಳ ವಿರೋಧಿ ಧೋರಣೆ ಅಲ್ಲದೆ ಬೇರೇನೂ ಅಲ್ಲ. ಹೀಗಾಗಿ ಪಿಎಸ್‌ಐ ಪರೀಕ್ಷೆ ಮುಂದೂಡಿ, ಗ್ರೂಪ್-ಬಿ ಪರೀಕ್ಷೆಯ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರ ಮೊದಲೇ ನಿಗದಿಪಡಿಸಿದ ಯುಪಿಎಸ್‌ಸಿ ಪರೀಕ್ಷೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ, ರಾಜ್ಯ ಸರಕಾರ ಪಿಎಸ್‌ಐ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆ ಮುಂದೂಡದಿದ್ದರೆ ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.