ಅಂಗಾಂಗ ದಾನ ಜೀವದಾನಕ್ಕೆ ಸಮಾನ : ಸ್ಥಾವರಮಠ
ಕಲಬುರಗಿ: ವೈದ್ಯ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೂಡಾ ಮಾನವನ ದೇಹದ ಅಂಗಗಳು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ರಕ್ತ, ಕಿಡ್ನಿ, ಹೃದಯ, ನೇತ್ರ, ಶ್ವಾಸಕೋಶ ಸೇರಿದಂತೆ ಅಂಗಾಂಗಗಳು ಮಾನವನಿಂದಲೇ ಪಡೆಯಬೇಕಾಗಿರುವುದರಿಂದ ಮರಣದ ನಂತರ ದೇಹ ಮಣ್ಣು, ಅಗ್ನಿ ಪಾಲಾಗುವ ಬದಲು, ಅಂಗಾಂಗ, ದೇಹ ದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಯುವುದರ ಜೊತೆಗೆ ದಾನಿ ಸತ್ತ ನಂತರವು ವ್ಯಕ್ತಿ ದಾನ ಮಾಡಿದ ಅಂಗಾಂಗಳ ಮೂಲಕ ಬದುಕಬಹುದಾಗಿದ್ದು, ಅಂಗಾಂಗ ದಾನಿಗಳಿಗೆ ಸಾವಿಲ್ಲ ಎಂದು ದೇಹದಾನ ವಾಗ್ದಾನಿ, ಮಾಜಿ ಸೈನಿಕ ರೇಣುಕಾಚಾರ್ಯ ಎಸ್.ಸ್ಥಾವರಮಠ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ ರಾಷ್ಟ್ರೀಯ ಅಂಗಾಂಗ ದಾನ ದಿನಾಚರಣೆ’ಯ ಪ್ರಯುಕ್ತ ದೇಹದಾನ ವಾಗ್ದಾನಿಯಾದ ತಮಗೆ ಗೌರವ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ಅಂಗಾಂಗಗಳ ಬೇಡಿಕೆ ಹೆಚ್ಚಾಗಿದ್ದು, ದಾನಿಗಳ ಸಂಖ್ಯೆ ಕಡಿಮೆಯಿದೆ. ಅಂಗದಾನಗಳಿಂದ ಯಾವುದೇ ತೊಂದರೆಯಿಲ್ಲ ಎಂಬುದನ್ನು ಅರಿತು, ದಾನ ಮಾಡಲು ಮುಂದಾಗಬೇಕು. ಇದರ ಬಗ್ಗೆ ಚಳುವಳಿಯ ರೂಪದಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಅಂಗಾಂಗ ವೈಫಲ್ಯತೆ ಹೆಚ್ಚಾಗಿದ್ದು, ದಾನಿಗಳ ಸಂಖ್ಯೆ ಅಧಿಕವಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಮನುಷ್ಯ ಸ್ವಾರ್ಥಕ್ಕಾಗಿ ಬದುಕಿದರೆ, ಅಂತಹ ಜೀವನಕ್ಕೆ ಅರ್ಥವಿಲ್ಲ. ಕೈಲಾದಷ್ಟು ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು. ಸ್ಥಾವರಮಠ ದಂಪತಿಗಳು ದೇಹದಾನದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ, ಅವರು ಮಾಡಿರುವ ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಬಸವೇಶ್ವರ ಸಮಾಜ ಸೇವಾ ಬಳಗವು ಮಾಡುತ್ತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಮಾಜಿ ಸೈನಿಕರಾದ ಸಿದ್ದಲಿಂಗಪ್ಪ ಮಲಶೆಟ್ಟಿ, ರಾಜು ಕೊರಳ್ಳಿ, ನಿವೃತ್ತ ಶಿಕ್ಷಕ ಚಂದ್ರಕಾಂತ ಬಿರಾದಾರ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು