ಮಕ್ಕಳಿಗೆ ಸಂಸ್ಕಾರ ಭರೀತ ಶಿಕ್ಷಣ ನೀಡಿ

ಮಕ್ಕಳಿಗೆ ಸಂಸ್ಕಾರ ಭರೀತ ಶಿಕ್ಷಣ ನೀಡಿ
ಶಹಪುರ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ
ನೀಡುವುದು ಅತ್ಯವಶ್ಯಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಾಯ್.ಎಸ್.ಹರಗಿ ಹೇಳಿದರು.ತಾಲೂಕಿನ ಸೈದಾಪುರ ಗ್ರಾಮದ ಹೊಸ ಬೆಳಕು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಯುನೈಟೆಡ್ ಪಬ್ಲಿಕ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಅಲ್ಲದೆ ಮಕ್ಕಳ ಪ್ರತಿಭೆಗೆ ಈ ವೇದಿಕೆ ಸೂಕ್ತ ಎಂದು ನುಡಿದರು.ಯುವ ಮುಖಂಡ ಹಾಗೂ ಶಿಕ್ಷಣ ಪ್ರೇಮಿ ಡಾ: ಭೀಮಣ್ಣ ಮೇಟಿ ಮಾತನಾಡಿ ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಇಂಥ ಉತ್ತಮ ಶಿಕ್ಷಣ ನೀಡುತ್ತಿರುವುದು ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ನೆಲಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಫರ್ಹಾನಾಜ ಮಸ್ಕಿ ಉಪನ್ಯಾಸ ನೀಡುತ್ತಾ ಕಲ್ಯಾಣ ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದು,ಇಲ್ಲಿ ಶಿಕ್ಷಣದ ಕ್ರಾಂತಿಯ ಬೆಳವಣಿಗೆಗೆ ಪಾಲಕರು,ಪೋಷಕರು, ವಿದ್ಯಾರ್ಥಿಗಳು,ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.ಅಲ್ಲದೆ ಕೌಟುಂಬಿಕ ಕಲಹ,ಪಾಲಕರ ಮನಸ್ತಾಪದಿಂದ ಮಕ್ಕಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ.ಆದ್ದರಿಂದ ಪಾಲಕರು ಮಕ್ಕಳ ಅಭ್ಯಾಸದ ಕಡೆಗೆ ಗಮನಕೊಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಮಾರಂಭದಲ್ಲಿ ಹೋತಪೇಟೆ ಕೈಲಾಸ ಮಠದ ಆಶ್ರಮದ ಶಿವಲಿಂಗ ಸ್ವಾಮಿಗಳು,ಸೈದಾಪುರ ಮಾಳಿಂಗೇಶ್ವರ ದೇವಸ್ಥಾನದ ಮಹಾದೇವಪ್ಪ ಪೂಜಾರಿ ದಿವ್ಯ ಸಾನಿಧ್ಯ ವಹಿಸಿದ್ದರು,ಈ ಸಂದರ್ಭದಲ್ಲಿ ಅನೇಕ ಸಾಧಕರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.ವೇದಿಕೆಯ ಮೇಲೆ ಭೀಮನಗೌಡ ಮರಿಗೌಡ ಪಾಟೀಲ್,ವಕೀಲರಾದ ಆರ್.ಚನ್ನಬಸು ವನದುರ್ಗ,ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ್ ಹೊಸಮನಿ,ಮಲ್ಲಣ್ಣ ಐಕೂರ, ಶಾಂತಗೌಡ ಪಾಟೀಲ್,ತಿರುಪತಿ ಹತ್ತಿಕಟಗಿ,ನಾಗಲೇಖ ಅನುಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶರಣಗೌಡ ಪೊಲೀಸ್ ಬಿರಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು ನಂತರ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಮಡಿವಾಳಪ್ಪ ಪಾಟೀಲ್ ಸ್ವಾಗತಿಸಿದರು,ಸುರೇಶ್ ಅರುಣಿ ನಿರೂಪಿಸಿದರು,ತಿಪ್ಪಣ್ಣ ಖ್ಯಾತನಾಳ ವಂದಿಸಿದರು.