ಪಾಲಕರು ಶಾಲೆಯ ಆಧಾರ ಸ್ತಂಭಗಳು – ಡಾ. ರುದ್ರಪ್ಪ ಗುಗ್ಗವಾಡ
ಪಾಲಕರು ಶಾಲೆಯ ಆಧಾರ ಸ್ತಂಭಗಳು – ಡಾ. ರುದ್ರಪ್ಪ ಗುಗ್ಗವಾಡ
ಕಲಬುರಗಿ: ಶಾಲೆಯ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಸ್ತಂಭಗಳಾದರೆ, ಪಾಲಕರು ಶಾಲೆಯ ಅಭಿವೃದ್ಧಿಯ ಆಧಾರ ಸ್ತಂಭಗಳಾಗಿದ್ದಾರೆ. ಪಾಲಕರು ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮಕ್ಕಳ ಹೋಮ್ವರ್ಕ್ ಹಾಗೂ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿದಾಗ ಮಕ್ಕಳ ಗುಣಮಟ್ಟ ಹೆಚ್ಚುವುದರ ಜೊತೆಗೆ ಶಾಲೆಯೂ ಅಭಿವೃದ್ಧಿ ಹೊಂದುತ್ತದೆ ಎಂದು ಜಯದೇವ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರುದ್ರಪ್ಪ ಗುಗ್ಗವಾಡ ಹೇಳಿದರು.
ಅವರು ದಿನಾಂಕ 25.01.2026 ರಂದು ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿದ್ಯಾನಗರದ ರಾಜ್ವಿಕಾ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ 40 ಮಕ್ಕಳಿಂದ ಪ್ರಾರಂಭವಾದ ಈ ಶಾಲೆಯಲ್ಲಿ ಇಂದು 200ಕ್ಕಿಂತಲೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಶಿಕ್ಷಕರು ಹಾಗೂ ಪಾಲಕರ ಸಹಕಾರದ ಫಲವೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಮಾತನಾಡಿ, ಮಕ್ಕಳಿಗೆ ಕೇವಲ ಪಠ್ಯ ಶಿಕ್ಷಣವಷ್ಟೇ ಅಲ್ಲದೆ ಬಾಲ್ಯದಿಂದಲೇ ಪಠ್ಯೇತರ ಚಟುವಟಿಕೆಗಳನ್ನು ರೂಢಿಸಿಕೊಂಡಾಗ ಮಾತ್ರ ಅವರು ಯಶಸ್ವಿ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ಹೇಳಿದರು. ರಾಜ್ವಿಕಾ ಶಾಲೆಯಲ್ಲಿ ವರ್ಷಪೂರ್ತಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಅಧ್ಯಕ್ಷ ಸಂಜಯ್ ಸಿಂಗ್ ಮಾತನಾಡಿ, ರಾಜ್ವಿಕಾ ಶಾಲೆ ಹಂತ ಹಂತವಾಗಿ ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಿ.ಬಿ.ಎಸ್.ಸಿ. ಮಾನ್ಯತೆ ಪಡೆಯುವ ಹಂತದಲ್ಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶ್ರೀದೇವಿ ಕವಡಿಮಠ, ಶೋಭಾ ಓಕಳಿ, ಸುಹಾಸಿನಿ ಸಿಂಗ್ ಉಪಸ್ಥಿತರಿದ್ದರು. ಮಕ್ಕಳಿಂದ ನೃತ್ಯ, ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿದವು.
ಆರಂಭದಲ್ಲಿ ಶಾಲೆಯ ಮುಖ್ಯಗುರು ಶಿಲ್ಪಾ ಕೋಟೆ ಸ್ವಾಗತಿಸಿದರು. ಸಮನ್ವಿ ಹಾಗೂ ಸುಮಯ್ಯ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಅಭಯ್ ಸಿಂಗ್, ನಸೀಮಾ, ನಿರ್ಮಲಾ, ದೀಪಿಕಾ ಅನ್ನಪೂರ್ಣ, ಸುವಾಸಿನಿ ಸಿಂಗ್ ಸೇರಿದಂತೆ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.
