ಚಂದನಕೇರಾ ಗ್ರಾಮದಲ್ಲಿ ಶಿವಶರಣ ಮಾದರ ಚೆನ್ನಯ್ಯರ 975ನೇ ಜಯಂತಿ ಆಚರಣೆ

ಚಂದನಕೇರಾ ಗ್ರಾಮದಲ್ಲಿ ಶಿವಶರಣ ಮಾದರ ಚೆನ್ನಯ್ಯರ 975ನೇ ಜಯಂತಿ ಆಚರಣೆ

ಚಂದನಕೇರಾ ಗ್ರಾಮದಲ್ಲಿ ಶಿವಶರಣ ಮಾದರ ಚೆನ್ನಯ್ಯರ 975ನೇ ಜಯಂತಿ ಆಚರಣೆ

ಚಿಂಚೋಳಿ ತಾಲೂಕು ಚಂದನಕೇರಾ ಗ್ರಾಮದಲ್ಲಿ ದಿನಾಂಕ 26.01.2026 ರಂದು ಡಾ. ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಪೂಜ್ಯ ಶಿವಶರಣ ಮಾದರ ಚೆನ್ನಯ್ಯರ 975ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಶರಣಗೌಡ ಪಾಟೀಲ್ (ಶ್ರೀ ಮಾದಾರ ಚೆನ್ನಯ್ಯ) ಅವರು, 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರ ಸಮಕಾಲೀನರಾಗಿದ್ದ ಮಾದರ ಚೆನ್ನಯ್ಯರು ಶರಣರಲ್ಲಿ ಒಬ್ಬ ಶ್ರೇಷ್ಠ ವಚನಕಾರರಾಗಿದ್ದು, ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಮಹಾನ್ ಶರಣರು ಎಂದು ಸ್ಮರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಊರಿನ ಮುಖಂಡರಾದ ಶ್ರೀ ದತ್ತಾತ್ರೇಯ ಬಿ. ರಾಯಗೋಳ ಅವರು, ಶ್ರೀ ಮಾದರ ಚೆನ್ನಯ್ಯರು ಉತ್ತಮ ವಚನಕಾರರಾಗಿದ್ದು, ಅವರ ವಚನಗಳಲ್ಲಿ ತತ್ವ ಬೋಧನೆ ಸ್ಪಷ್ಟವಾಗಿ ಕಾಣುತ್ತದೆ. ಇಂತಹ ಮಹಾನ್ ಶರಣರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಅವರ ಜನ್ಮದಿನದಂದೇ ಜಯಂತಿ ಆಚರಣೆ ಮಾಡಿದರೆ ಇನ್ನಷ್ಟು ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೋರ್ವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಸಿರಂಜಿ ಅವರು ಮಾತನಾಡಿ, ಶಿವಶರಣ ಮಾದರ ಚೆನ್ನಯ್ಯರ ಜಯಂತಿ ಆಚರಣೆ ನಡೆದಿರುವುದು ಬಹಳ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಮೆರವಣಿಗೆಯೊಂದಿಗೆ ಆಚರಣೆ ನಡೆಸಿದರೆ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಜಗದೀಶ್ ಗೌಡ ಅವರು, ಇಂತಹ ಮಹಾನ್ ಶರಣರ ಜಯಂತಿ ಆಚರಣೆಗೆ ತಮ್ಮ ಸಂಪೂರ್ಣ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು. ಪಡಶೆಟ್ಟಿ ಅವರು ಮಾತನಾಡಿ, ಮಹಾನ್ ಶರಣರ ಜಯಂತಿಗಳನ್ನು ಆಚರಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಬೆಳೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಸಮಾಜದ ಯುವ ಮುಖಂಡರಾದ ಶ್ರೀ ಹಣಮಂತ ಪಂಗರಗಾ ಅವರು ಮಾತನಾಡಿ, ಮಾದರ ಚೆನ್ನಯ್ಯರು ಬೆಳೆದು ಬಂದ ಹಾದಿ, ಚೋಳರಾಜ ಚೆನ್ನಯ್ಯನ ಕಾಲಿಗೆರೆದು “ನೀವು ಶ್ರೇಷ್ಠ ಕುಲದವರು, ನನಗೆ ಜ್ಞಾನೋದಯವಾಯಿತು” ಎಂದು ಹೇಳಿದ ಐತಿಹಾಸಿಕ ಘಟನೆ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಜಗದೀಶ್ ಗೌಡ, ಕಮಲಾಕರ್ ಕಡಗದ, ಡಾ. ಬಾಬು ಜಗಜೀವನ್ ರಾಮ್ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶ ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ, ಸಹಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಸಂಘದ ಸದಸ್ಯರು, ಸಮಾಜದ ಹಿರಿಯರು, ಯುವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಗೌರವಾನ್ವಿತ ಅತಿಥಿಗಳು ಹಾಗೂ ಗ್ರಾಮ ಮುಖಂಡರನ್ನು ಡಾ. ಬಾಬು ಜಗಜೀವನ್ ರಾಮ್ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶ ಸಂಘದ ಅಧ್ಯಕ್ಷರಾದ ಶ್ರೀ ಗಿನ್ನಪ್ಪ ಬಿ. ತಿಮ್ಮಪೂರ ಅವರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮಕ್ಕೆ ನೇರ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮವನ್ನು ಶ್ರೀ ತುಕಾರಾಮ ಜಿ. ಬಸಂತಪೂರ ಅವರು ನಿರೂಪಿಸಿ ಸ್ವಾಗತಿಸಿದರು. ಕೊನೆಯಲ್ಲಿ ಶ್ರೀ ಪುಂಡಲೀಕ ಎಂ. ಬಸಂತಪೂರ ಅವರು ವಂದಿಸಿದರು.