ಅಪರಾಜೀತ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಅದ್ಧೂರಿಯಾಗಿ ಜರುಗಿತು
ಅಪರಾಜೀತ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಅದ್ಧೂರಿಯಾಗಿ ಜರುಗಿತು
ಕಲಬುರಗಿ : ನಗರದ ಜೈ ಭವಾನಿ ಶಿಕ್ಷಣ ಸಂಸ್ಥೆಯ ಸಂಚಾಲಿತ ಅಪರಾಜೀತ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವನ್ನು “A Spectrum of Success” ಎಂಬ ದ್ಯೇಯದೊಂದಿಗೆ ದಿ. 24-01-2026ರಂದು ಸಂಜೆ 6.30ಕ್ಕೆ ಶಾಲೆಯ ಮುಂಭಾಗದ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳಿಂದ ಸ್ವಾಗತ ನೃತ್ಯಗೀತೆಯೊಂದಿಗೆ ಗಣ್ಯರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಶಾಲೆಯ ಆಡಳಿತಾಧಿಕಾರಿ ಕು. ಭೂಮಿಕಾ ಭಂಡಾರಿ ಅವರು ಎಲ್ಲರನ್ನು ಸ್ವಾಗತಿಸಿದರು. ವಾರ್ಷಿಕೋತ್ಸವವನ್ನು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಅಲ್ಲಮಪ್ರಭು ಪಾಟೀಲ್ ನೆಲೋಗಿ ಅವರು ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಸತಿ-ಪತಿ ಇಬ್ಬರೂ ಸೇರಿ ಕಾಲಕ್ಕೆ ತಕ್ಕಂತೆ ಮೊದಲು ಗಣಕಯಂತ್ರ ತರಬೇತಿ ಕೇಂದ್ರ ಆರಂಭಿಸಿ, ಇಂದು ಆಂಗ್ಲ ಪೂರ್ವ ಹಾಗೂ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಕೀಲ ವೃತ್ತಿಯ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಕಾರ್ಯದರ್ಶಿಗಳ ಕಾರ್ಯ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ರಾಜಗೋಪಾಲ ಭಂಡಾರಿ ಅವರು ಶಾಲೆಯ ಉನ್ನತೀಕರಣ ಹಾಗೂ ಸ್ಥಳೀಯ ಶಿಕ್ಷಣಾಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಪಿಸಿಸಿ ಸದಸ್ಯ ಹಾಗೂ ರಾಜಕೀಯ ಮುಖಂಡ ಶ್ರೀ ನೀಲಕಂಠರಾವ ಮೂಲಗೆ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆ ಪಡೆಯಬಹುದಾದ ಶ್ರೀಮತಿ ಪುಷ್ಪಾಂಜಲಿ ಭಂಡಾರಿ ಅವರು, ಎರಡು ದಶಕಗಳ ಹಿಂದೆ ಈ ಭಾಗದ ಬಡ ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಶಿಕ್ಷಣ ಕ್ಷೇತ್ರಕ್ಕೆ ಅರ್ಪಿಸಿಕೊಂಡಿರುವುದು ಅಭಿನಂದನೀಯವಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಎಲ್ಲರೂ ತನು-ಮನ-ಧನದಿಂದ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಮಾಜಿ ಉಪ ಮಹಾಪೌರರು ಹಾಗೂ ಸರ್ಕಾರಿ ವಕೀಲರಾದ ಶ್ರೀ ಮಹೇಶ್ ಹೊಸೂರಕರ ಮಾತನಾಡಿ, ಕಳೆದ ಒಂದು ದಶಕದಿಂದ ಸಂಸ್ಥೆಯ ಶ್ರಮವನ್ನು ಗಮನಿಸುತ್ತ ಬಂದಿದ್ದೇನೆ. ಇವರ ಪರಿಶ್ರಮಕ್ಕೆ ತಕ್ಕ ಗೌರವ ಹಾಗೂ ನ್ಯಾಯ ದೊರಕಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಿಕ್ಷಣಪ್ರೇಮಿ ಹಾಗೂ ವಕೀಲ ಜೆ.ಎಸ್. ವಿನೋದಕುಮಾರ, ಹಿರಿಯ ವಕೀಲರಾದ ದೌಲತರಾವ ಮಾಲಿಪಾಟೀಲ್, ಶಿವಲಿಂಗಪ್ಪ ಅಷ್ಟಗಿ, ಬಡಾವಣೆಯ ಮುಖಂಡ ಧರ್ಮರಾಜ ಹೇರೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾಂಜಲಿ ಭಂಡಾರಿ ಅವರು ವಾರ್ಷಿಕ ವರದಿ ವಾಚಿಸಿ, ಶಾಲೆಯಲ್ಲಿ ಹಮ್ಮಿಕೊಂಡಿರುವ ವಿಶೇಷ ಶೈಕ್ಷಣಿಕ ಚಟುವಟಿಕೆಗಳು, ಗುಣಮಟ್ಟದ ಪಠ್ಯಪುಸ್ತಕ, ಬ್ಯಾಗ್ ಹಾಗೂ ಕಲಿಕೆಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಪ್ರೇಕ್ಷಕರ ಮನಗೆದ್ದವು. ಕಾರ್ಯಕ್ರಮದಲ್ಲಿ ಸಮಾಜಸೇವಕ ಬಸವಂತರಾಯ ಕೊಳಕುರ, ಯುವ ವಕೀಲ ಕೆ. ಗುಂಡಪ್ಪ, ಗಣಕ ತರಬೇತಿ ಪ್ರಾಚಾರ್ಯ ಗುರುನಾಥ, ಹಣಕಾಸು ಸಂಸ್ಥೆಯ ರಾಜು ಬಿರಾದಾರ, ಕಲಾ ಶಿಕ್ಷಕ ಅಮಿತ್, ವೇದಿಕೆ ಅಲಂಕಾರಕ ಬಸವರಾಜ ಕುರಹಿನಶೆಟ್ಟಿ, ಸಮಾಜದ ಪ್ರಧಾನ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ, ಸಹ ಕಾರ್ಯದರ್ಶಿ ರಾಜಶೇಖರ್ ಸಬಸಗಿ ಸೇರಿದಂತೆ ಅನೇಕ ಗಣ್ಯರು, ಪಾಲಕರು ಹಾಗೂ ಬಡಾವಣೆಯ ನಿವಾಸಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಗೂ ಉಪಹಾರ ವಿತರಿಸಲಾಯಿತು.
