ಪುತ್ತೂರು ತಾಲೂಕು ಮಾಡ್ನೂರು ಗ್ರಾಮದಲ್ಲಿನ ಮಳೆ ಮಾಪಕದ ಅವ್ಯವಸ್ಥೆ – ರೈತರ ಆತಂಕ

ಪುತ್ತೂರು ತಾಲೂಕು ಮಾಡ್ನೂರು ಗ್ರಾಮದಲ್ಲಿನ ಮಳೆ ಮಾಪಕದ ಅವ್ಯವಸ್ಥೆ – ರೈತರ ಆತಂಕ

ಪುತ್ತೂರು ತಾಲೂಕು ಮಾಡ್ನೂರು ಗ್ರಾಮದಲ್ಲಿನ ಮಳೆ ಮಾಪಕದ ಅವ್ಯವಸ್ಥೆ – ರೈತರ ಆತಂಕ

ಪುತ್ತೂರು: ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಗ್ರಾಮಾಧಿಕಾರಿಗಳ ಕಚೇರಿಯ ಮೇಲ್ಚಾವಣಿಯಲ್ಲಿ (ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲೆ) ಅಳವಡಿಸಲಾದ ಮಳೆ ಮಾಪಕದ ಸ್ಥಿತಿ ಇದೀಗ ಸಾರ್ವಜನಿಕರು ಹಾಗೂ ರೈತರಲ್ಲಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಈ ಮಳೆ ಮಾಪಕದಲ್ಲಿ ಸಿಲಿಂಡರ್ ಆಕಾರದ ನೀರು ಸಂಗ್ರಹಣಾ ಪಾತ್ರ, ಅದರೊಳಗೆ ಮಳೆನೀರು ಹರಿದು ಹೋಗುವ ವ್ಯವಸ್ಥೆ, ಒಂದು ಬದಿಯಲ್ಲಿ ಸೋಲಾರ್ ಪ್ಯಾನಲ್ ಹಾಗೂ ಇನ್ನೊಂದು ಬದಿಯಲ್ಲಿ ತುಕ್ಕು ಹಿಡಿದ ಬೀಗವಿರುವ ಪೆಟ್ಟಿಗೆ ಇರುವುದು ಕಾಣಸಿಗುತ್ತದೆ. ಆದರೆ ಇದರ ಮೂಲಕ ಸುರಿದ ಮಳೆಯ ಪ್ರಮಾಣವನ್ನು ಹೇಗೆ ದಾಖಲಿಸಲಾಗುತ್ತಿದೆ, ಮಾಹಿತಿ ಯಾರಿಗೆ ತಲುಪುತ್ತಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಈ ಯಂತ್ರವನ್ನು ಯಾರು ಅಳವಡಿಸಿದ್ದಾರೆ, ಇದರ ನಿರ್ವಹಣೆ ಯಾರ ಹೊಣೆ ಎಂಬ ಮಾಹಿತಿಯೂ ಲಭ್ಯವಿಲ್ಲ.

ಮೇಲ್ನೋಟಕ್ಕೆ ಇದು ಕೇವಲ ಕಣ್ಕಟ್ಟಿಗಾಗಿ ಅಳವಡಿಸಿದ ಯಂತ್ರವೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇದೇ ಮಳೆ ಮಾಪಕದ ಆಧಾರದಲ್ಲಿ ಹಿಂದಿನ ಸಾಲಿನ ಮಳೆಯ ಲೆಕ್ಕ ದಾಖಲಿಸಿ, ಈ ಗ್ರಾಮದ ರೈತರಿಗೆ ಹವಾಮಾನಾಧಾರಿತ ಬೆಳೆ ವಿಮಾ ಪರಿಹಾರ ಅತೀ ಕಡಿಮೆ ಪ್ರಮಾಣದಲ್ಲಿ ದೊರೆತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದರಿಂದ ಫಲಾನುಭವಿ ರೈತರು ತೀವ್ರ ಅಸಮಾಧಾನಗೊಂಡಿದ್ದು, ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಈ ಮಳೆ ಮಾಪಕವನ್ನು ಸಮರ್ಪಕವಾಗಿ ಪರಿಶೀಲಿಸಿ, ನಿಖರ ಮತ್ತು ವಿಶ್ವಾಸಾರ್ಹ ಮಾಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಮಳೆ ಲೆಕ್ಕದ ಪಾರದರ್ಶಕತೆ ಇಲ್ಲದಿದ್ದರೆ ರೈತರ ಹಕ್ಕುಗಳಿಗೆ ಅನ್ಯಾಯವಾಗುತ್ತದೆ ಎಂಬುದು ಅವರ ಕಳವಳವಾಗಿದೆ.