ಈಶ್ವರ ಖಂಡ್ರೆ ಆಯ್ಕೆಯಿಂದ ಮಹಾಸಭೆಯ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ : ಶರಣು ಪಾಟೀಲ ಮೋತಕಪಳ್ಳಿ
ಈಶ್ವರ ಖಂಡ್ರೆ ಆಯ್ಕೆಯಿಂದ ಮಹಾಸಭೆಯ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ : ಶರಣು ಪಾಟೀಲ ಮೋತಕಪಳ್ಳಿ
ಚಿಂಚೋಳಿ:120 ವರ್ಷಕ್ಕೂ ಮೊದಲು ಭಾರತದಲ್ಲಿ ಹರಿದು ಹಂಚಿ ಹೋಗಿದ್ದ ವೀರಶೈವ ಲಿಂಗಾಯತ ಸಮಾಜವನ್ನು ಸಂಘಟಿಸುವ ಮೂಲಕ ಲಿಂಗೈಕ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಹುಟ್ಟು ಹಾಕಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸರ್ವಾoನುಮತದಿಂದ ಆಯ್ಕೆಗೊಂಡಿರುವುದು ಸಮಾಜದ ಸಂಘಟನೆ ಮತ್ತಷ್ಟು ಬಲಬಂಧಂತಾಗಿದೆ ಎಂದು ಚಿಂಚೋಳಿ ಘಟಕದ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ತಿಳಿಸಿದ್ದಾರೆ.
ಶಿರಸಂಗಿ ಲಿಂಗರಾಜರು, ಫ. ಗು. ಹಳಕಟ್ಟಿ, ಸಿದ್ದಗಂಗಾ ಶಿವಕುಮಾರ ಶ್ರೀಗಳು, ಶರಣಬಸಪ್ಪ ಅಪ್ಪ, ಎನ್ ತಿಪ್ಪಣ್ಣ, ಶತಾಯುಷಿ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಸೇರಿದಂತೆ 23 ಧೀಮಂತ ವ್ಯಕ್ತಿಗಳು ಶತಮಾನದಿಂದ ರಾಷ್ಟ್ರದಲ್ಲಿ ವೀರಶೈವ ಲಿಂಗಾಯತ ಸಮಾಜದ ಮಾತೃ ಸಂಸ್ಥೆಯಾಗಿ, ಸಮಾಜದ ಒಳಿತಿಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಜವಾಬ್ದಾರಿ ಹೊತ್ತು ಸಮಾಜದ ಸುದೀರ್ಘ ಸೇವೆ ಮಾಡಿ ಜನರ ಹೃದಯದಲ್ಲಿ ಅಚ್ಚಳಿಯದೆ ನೆಲೆಸುವ ಕಾರ್ಯ ಮಾಡಿ ಅಗಲಿದ್ದಾರೆ.ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸುದೀರ್ಘ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ 14 ವರ್ಷ ಗಳಿಂದ ಸಮಾಜದ ಸಂಘಟನೆಯಲ್ಲಿರುವ ಈಶ್ವರ್ ಖಂಡ್ರೆ ಅವರನ್ನು ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಿಂದ ತೆರವಾದ
ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ 24ನೇ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದು, ಸಮಾಜದ ಏಕತೆ ಮತ್ತೊಮ್ಮೆ ಎತ್ತಿ ತೋರಿದೆ. ಕಲ್ಯಾಣ ಕರ್ನಾಟಕ ಭಾಗದ ಒಬ್ಬರು ಉನ್ನತ ಹುದ್ದೆಗೆ ಏರಿರುವುದು ನಮ್ಮ ಭಾಗಕ್ಕೆ ಮತ್ತಷ್ಟು ಗೌರವ ಬಂದಿದೆ ಎಂದು ಅಧ್ಯಕ್ಷ ಮೋತಕಪಳ್ಳಿ ಅವರು ಪ್ರಕಟಣೆಯ ಮೂಲಕ ಖಂಡ್ರೆ ಅವರ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
