ತಮಟೆ ಚಳವಳಿ ಮೂಲಕ ಒಳ ಮೀಸಲಾತಿ ಜಾರಿಗೆ ಒತ್ತಾಯ
ತಮಟೆ ಚಳವಳಿ ಮೂಲಕ ಒಳ ಮೀಸಲಾತಿ ಜಾರಿಗೆ ಒತ್ತಾಯ
ಆಳಂದ: ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ತೀರ್ಪುನು ಗೌರವಿಸಿ ಕಾಲಹರಣ ಮಾಡದೇ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಪಟ್ಟಣದಲ್ಲಿ ಶನಿವಾರ ಮಾದಿಗ ಸಮುದಾಯ ಕಾರ್ಯಕರ್ತರು ಪ್ರಮುಖ ರಸ್ತೆಗಳ ಮೂಲಕ ತಮಟೆ ಚಳವಳಿಯ ಕೈಗೊಂಡು ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ಬಸ್ ನಿಲ್ದಾಣದಿಂದ ಸುಮಾರು 5 ಕಿ.ಮೀ ಅಂತರದ ತಾಲೂಕು ಆಡಳಿತಸೌಧವರೆಗೆ ತಮಟೆ ಚಳವಳಿಯ ಮೂಲಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಒಳಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕಲಾಗಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಡಾ. ಬಾಬುಜಗಜೀವನರಾಮ ಅವರ ಅಭಿಮಾನಿಗಳ ಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಬರಾಯ ಎಂ. ಕೆ. ಚಲಗೇರಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಒಳ ಮೀಸಲಾತಿ ಒತ್ತಡಕ್ಕೆ ಮಣಿದು ಸರ್ಕಾರ ಕಾಟಾಚಾರದ ಆಯೋಗ ನೇಮಕದ ನಾಟಕವಾಡುತ್ತಿದೆ. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ವಂಚಿಸುವುದನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಡಾ. ಬಾಬುಜಗಜೀವನರಾಮ ಕಾಲದಿಂದಲೂ ಕಾಂಗ್ರೆಸ್ ಮೋಸಮಾಡಿಕೊಂಡು ಬರುತ್ತಿದೆ. ಒಳಮೀಸಲಾತಿ ಜಾರಿ ಆಗುವವರೆಗೂ ಸರ್ಕಾರಿ ನೇಮಕಾತಿ ಮಾಡಕೊಡದು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರದಲ್ಲಿ ಮಾಧುಸ್ವಾಮಿ ವರದಿಯನ್ನು ಸಿದ್ಧಪಡಿಸುವಾಗ ಆದಿ ಕರ್ನಾಟಕ ಆದಿ ದ್ರಾವಿಡ ಸಮಸ್ಯೆಗೆ ಉತ್ತರಿಸಲಾಗಿದೆ. 2011ರ ಜನಸಂಖ್ಯೆ ಅಂಕಿ, ಅಂಶ ಆಧರಿಸಿಯೇ ವರದಿ ಸಿದ್ಧಪಡಿಸಿ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಮತ್ತೆ ಅದೇ ಪ್ರಶ್ನೆಗಳಿಗೆ ಸದ್ಯ ಉತ್ತರ ಹುಡಕಲು ಇನ್ನೊಂದು ಆಯೋಗದ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಸಮಾಜದ ಯುವ ಮುಖಂಡ ಸಿದ್ಧು ನಾವದಗಿ ಮಾತನಾಡಿ, ಒಳ ಮೀಸಲಾತಿ ಜಾರಿಗಾಗಿ ಸದನದಲ್ಲಿ ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಾರಿಗೆ ತರಲು ಒತ್ತಡಹಾಕಬೇಕು ಎಂದು ಮಾದಿಗ, ಸಮಗಾರ, ಮಚಗಾರ, ಡೊಹರ, ಡಕ್ಕಲಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟವು ಇಂದು ರಾಜ್ಯದ ಎಲ್ಲ ಶಾಸಕರ ಮನೆಯ ಮುಂದೆ ತಮಟೆ ಚಳವಳಿ ಮೂಲಕ ಒತ್ತಾಯಿಸಲಾಗುತ್ತಿದೆ. ಶಾಸಕರುಗಳು ಸದನದಲ್ಲಿ ಒಳ ಮೀಸಲಾತಿ ಜಾರಿ ಕುರಿತು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಕಳೆದ ಅಗಷ್ಟ 1ರಂದು ಸುಪ್ರೀಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಕೊಟ್ಟು ಈಗ 4 ತಿಂಗಳಾದರು ರಾಜ್ಯ ಸರ್ಕಾರ ಮೀನಮೇಷ ತೋರಿದೆ ಎಂದು ಟೀಕಿಸಿದರು. ನ್ಯಾ ನಾಗಮೋಹನದಾಸ ನೇತೃತ್ವದ ಆಯೋಗ ರಚಿಸಿದೆ. ಎರಡು ತಿಂಗಳಲ್ಲಿ ವರದಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಸುಳ್ಳು ಹೇಳಿತು. ಹೀಗೆ ಹೇಳಿ 45 ದಿನಗಳಾದರು ಆಯೋಗ ತನ್ನ ಕೆಲಸ ಆರಂಭಿಸಿಯೇ ಇಲ್ಲ. ಆಯೋಗವನ್ನು ನಾಮಕಾವಸ್ತೆ ಘೋಷಿಸಿರುವುದು ಬಿಟ್ಟರೆ ಆಯೋಗಕ್ಕೆ ಕಚೇರಿ, ಸಿಬ್ಬಂದಿ ಹಣಕಾಸಿನ ನೆರವೂ ಯಾವುದನ್ನು ಕೊಟ್ಟಿಲ್ಲ ಎಂದ ಮೇಲೆ ಕೆಲಸ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಸದಾಶಿವ ಆಯೋಗ, ಮಧುಸ್ವಾಮಿ ಆಯೋಗ ವರದಿ ಇರುವಾಗ ಮತ್ತೊಂದು ಆಯೋಗಬೇಕು ಎಂದು ಯಾವ ಒಳಮೀಸಲಾತಿ ಹೋರಾಟಗಾರರೂ ಬೇಡಿಕೆ ಇಟ್ಟಿರಲಿಲ್ಲ. ಆಯೋಗ ರಚಿಸುವ ಬೇಡಿಕೆ ಒಳಮೀಸಲಾತಿಯನ್ನು ಅಂತರ್ಯದಲ್ಲಿ ಒಪ್ಪದ ಸೋಗಲಾಡಿಗಳದ್ದು, ಈಗ ನಿಖರ ದತ್ತಾಂಶದ ಕ್ಯಾತೆ ತೆಗೆಯುವವರು ಸದಾಶಿವ ಆಯೋಗ, ಮಧುಸ್ವಾಮಿ ಸಮಿತಿಯ ಮುಂದೆ ಹೋಗಿರಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಮಾಜ ಮುಖಂಡ ಕೃಷ್ಣಾ ಪಾತ್ರೆ, ಕರಬಸಪ್ಪ ಬೊಮ್ಮನಳ್ಳಿ, ಮಹೇಂದ್ರ ಲೋಕಂಡೆ, ಗ್ರಾಪಂ ಸದಸ್ಯ ಮಹಾದೇವ ಹತ್ತಗಾಳೆ, ಮಹೇಂದ್ರ ಕ್ಷೀರಸಾಗರ, ಲಕ್ಕಪ್ಪ ದಣ್ಣೂರ, ರಾಜು ಗೊಳೋಳ್ಳಿ, ಓಂ ಪ್ರಕಾಶ ಪಾತ್ರೆ, ಸಂದೇಶ ಪಾತ್ರೆ ಅನೇಕರು ಭಾಗವಹಿಸಿದ್ದರು.