ರೈತರ ಪಹಣಿ ಸಮಸ್ಯೆ ಬೇಗ ಇತ್ಯರ್ಥಪಡಿಸಿ: ಶಾಸಕ ಪ್ರಭು ಚವ್ಹಾಣ
ರೈತರ ಪಹಣಿ ಸಮಸ್ಯೆ ಬೇಗ ಇತ್ಯರ್ಥಪಡಿಸಿ: ಶಾಸಕ ಪ್ರಭು ಚವ್ಹಾಣ
ರೈತರ ಪಹಣಿಗಳಲ್ಲಿ ಉಂಟಾಗಿರುವ ದೋಷದಿಂದಾಗಿ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ರೈತರ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಔರಾದ (ಬಿ) ತಾಲ್ಲೂಕಿನ ಇಟಗ್ಯಾಳ, ನಾಗನಪಲ್ಲಿ, ಚಿಂತಾಕಿ, ಬೆಲ್ದಾಳ, ಗುಡಪಳ್ಳಿ, ಮೆಡಪಳ್ಳಿ, ಉಜನಿ ಸುಂಕನಾಳ ಹಾಗೂ ಚಿಕ್ಲಿ(ಜೆ)ನಲ್ಲಿ ಡಿ.24ರಂದು ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಇಟಗ್ಯಾಳ, ನಾಗನಪಲ್ಲಿ, ಚಿಂತಾಕಿ, ಬೆಲ್ದಾಳ ಸೇರಿದಂತೆ ಹಲವು ಗ್ರಾಮಗಳಲ್ಲಿನ ರೈತರ ಪಹಣಿಗಳಲ್ಲಿ ಕಾಣಿಸಿರುವ ದೋಷದಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ಪಹಣಿಯಲ್ಲಿ ರೈತರ ಹೆಸರು ಬದಲಾಗಿರುವುದು, ಊರಿನ ಹೆಸರು ಮತ್ತು ಮಾಲೀಕರ ಹೆಸರುಗಳ ಕಾಗುಣಿತಗಳು ತಪ್ಪಾಗಿರುವುದರಿಂದ ಬೆಳೆ ಹಾನಿ ಪರಿಹಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಬೆಳೆ ವಿಮೆ ಹೀಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ. ಸಮಸ್ಯೆ ಸರಿಪಡಿಸಿಕೊಡುವಂತೆ ತಹಸೀಲ್ ಕಛೇರಿಗೆ ಅಲೆದು ಸಾಕಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಸ್ಥಳದಲ್ಲಿದ್ದ ಕಂದಾಯ ನಿರೀಕ್ಷಕರಿಂದ ಶಾಸಕರು ರೈತರ ಸಮಸ್ಯೆಗಳ ಬಗ್ಗೆ ವಿವರಣೆ ಕೇಳಿದಾಗ, ಇಲಾಖೆಯಿಂದಲೇ ಈ ರೀತಿಯ ಸಮಸ್ಯೆಯಾಗಿರುವುದು ಕಂಡುಬAದಿದೆ. ಇದನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದರು. ಇದು ಒಂದು ಗ್ರಾಮದ ಸಮಸ್ಯೆಯಲ್ಲ. ಗ್ರಾಮ ಸಂಚಾರದಲ್ಲಿ ಪ್ರತಿ ಊರಿನಲ್ಲಿ ರೈತರು ಈ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ರೈತರ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಪ್ರತಿದಿನ ಒಂದಿಲ್ಲೊAದು ಗ್ರಾಮದ ರೈತರು ಪಹಣಿ ದೋಷದ ಬಗ್ಗೆ ತಿಳಿಸುತ್ತಿದ್ದಾರೆ.
ರೈತರು ತುಂಬಾ ಅಮಾಯಕರು. ಅವರಿಗೆ ಕೃಷಿಯನ್ನು ಬಿಟ್ಟು ಬೇರೆ ಏನು ಗೊತ್ತಾಗುವುದಿಲ್ಲ. ಇಲಾಖೆಯಿಂದ ಆದ ಸಮಸ್ಯೆಗೆ ರೈತರನ್ನೇಕೆ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ ? ರೈತರಿಗೆ ಪ್ರತಿದಿನ ಕಛೇರಿಗೆ ಅಲೆದಾಡಲು ಸಾಧ್ಯವಾಗುವುದಿಲ್ಲ. ಇಲಾಖೆಯ ಅಧಿಕಾರಿಗಳು ಬೇಗ ಸಮಸ್ಯೆಗೆ ಪರಿಹಾರ ಒದಗಿಸಬೇಕು. ತಹಸೀಲ್ದಾರರು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಂಬAಧಪಟ್ಟ ಅಧಿಕಾರಿಗಳ ಸಭೆ ನಡೆಸಿ ತುರ್ತಾಗಿ ಪಹಣಿ ಸಮಸ್ಯೆ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು.
ಬಹಳಷ್ಟು ಗ್ರಾಮಗಳಲ್ಲಿ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆಯ ಹಣ ಪಾವತಿಯಾಗಿಲ್ಲವೆಂದು ರೈತರು ರೈತರು ಶಾಸಕರಿಗೆ ತಿಳಿಸಿದಾಗ ರೈತರಿಗೆ ಡಿಬಿಟಿ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊತ್ತ ಜಮೆ ಮಾಡಲಾಗುತ್ತಿದೆ. ಎಫ್‌ಐಡಿ ಸಂಖ್ಯೆ ಹೊಂದಿಲ್ಲದವರು, ಕೆವೈಸಿ ಅಪಡೇಟ್ ಆಗಿಲ್ಲದ ಮತ್ತು ಹೆಸರು ಹೊಂದಾಣಿಕೆ ಆಗದ ಕೆಲವು ರೈತರಿಗೆ ಸರ್ಕಾರದ ಬೆಳೆ ಹಾನಿ ಪರಿಹಾರ ಸಿಕ್ಕಿಲ್ಲ. ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿಕೊಂಡರೆ ಹಣ ಜಮೆಯಾಗುತ್ತದೆ ಎಂದು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.
ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ಕೆಲವು ಇಲಾಖೆಗಳಲ್ಲಿ ರೈತರ ಕೆಲಸಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ರೈತರು ಕಛೇರಿಗೆ ಬಂದಾಗ ಅಧಿಕಾರಿಗಳು ಮತ್ತು ಸಿಬ್ಬಂದಿ ಸೌಜನ್ಯದಿಂದ ವ್ಯವಹರಿಸಬೇಕು. ಅವರಿಗೆ ವಿನಾ ಕಾರಣ ಸತಾಯಿಸದೇ ಬೇಗ ಕೆಲಸ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಸಂಚಾರದ ಸಂದರ್ಭದಲ್ಲಿ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು. ಸರಿಯಾದ ಬಿಸಿಯೂಟ ನೀಡಬೇಕು ಎಂದು ನಿರ್ದೇಶನ ನೀಡಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ನಾಗನಪಲ್ಲಿ ಎಸ್ಸಿ ವಾರ್ಡ್ನಲ್ಲಿ 25 ಲಕ್ಷದ ಸಿಸಿ ರಸ್ತೆ, ಚಿಂತಾಕಿ ಎಸ್ಸಿ ಓಣಿಯಲ್ಲಿ 25 ಲಕ್ಷದ ಸಿಸಿ ರಸ್ತೆ, 3.50 ಲಕ್ಷದ ಹೈಮಾಸ್ಟ್ ವಿದ್ಯುತ್ ದೀಪ, ಗುಡಪಳ್ಳಿಯಲ್ಲಿ 15 ಲಕ್ಷದ ಸಿಸಿ ರಸ್ತೆ, ಗೋಪಿನಾಯಕ ತಾಂಡಾ ಮೆಡಪಳ್ಳಿಯಲ್ಲಿ 20 ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಉಲಾಖೆ ಎಇಇ ಪ್ರೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿAಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಜೆಸ್ಕಾಂ ಎಇಇ ರವಿ ಕಾರಬಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಸಣ್ಣ ನೀರಾವರಿ ಇಲಾಖೆಯ ಎಇಇ ಸಂಗಮೇಶ ಖಳೂರೆ, ಅಕ್ಷರ ದಾಸೋಹ ಯೋಜನೆಯ ಧೂಳಪ್ಪ, ಪಿಎಂಜಿಎಸ್‌ವೈ ಎಇಇ ಸುಭಾಷ ವಾಗಮಾರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಮುಖಂಡರಾದ ವಸಂತ ಬಿರಾದಾರ, ಶಿವಾಜಿರಾವ ಪಾಟೀಲ ಮುಂಗನಾಳ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಯಾದುರಾವ ಸಗರ, ರಾಮರೆಡ್ಡಿ ಪಾಟೀಲ, ಶಿವಾಂಜಯ ಬಿರಾದಾರ, ರವೀಂದ್ರ ರೆಡ್ಡಿ ಉಜನಿ, ಈರಾರೆಡ್ಡಿ ನಾಗನಪಲ್ಲಿ, ರಾವಸಾಬ ಪಾಟೀಲ, ಶರಣು ಪಾಟೀಲ, ಪ್ರಕಾಶ ಮೇತ್ರೆ, ಮಾರುತಿರೆಡ್ಡಿ ಪಟ್ನೆ, ಗೋವಿಂದ ರೆಡ್ಡಿ, ಸಂಜು ಉಪ್ಪಾರ, ಸಂಜುರೆಡ್ಡಿ, ಶಿವಾರೆಡ್ಡಿ, ವಿಠಲರೆಡ್ಡಿ, ಪ್ರಕಾಶ ಬೇರಕೂರೆ, ದೀಪಕ ಸಜ್ಜನಶೆಟ್ಟಿ, ಉದಯ ಸೋಲಾಪೂರೆ, ಪ್ರಕಾಶ ಜೀರ್ಗೆ, ಪ್ರಕಾಶ ಜೀರ್ಗೆ, ಪ್ರದೀಪ ಪವಾರ, ಧನಾಜಿ ರಾಠೋಡ, ವಿಲಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.
