ರಾಷ್ಟ್ರೀಯ ಬಂಜಾರಾ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸರ್ವಾನುಮತದ ಆಯ್ಕೆ

ರಾಷ್ಟ್ರೀಯ ಬಂಜಾರಾ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸರ್ವಾನುಮತದ ಆಯ್ಕೆ
ಹೈದರಾಬಾದ್ : ಅಖಿಲ ಭಾರತ ಬಂಜಾರಾ ಸೇವಾ ಸಂಘದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಹೈದರಾಬಾದ್ ನ ಖೈತಾಬಾದ್ ವಿದ್ಯುತ್ ಗಿರಿಜನ ಭವನದಲ್ಲಿ ಮೇ 25 ರಂದು ಭಾನುವಾರ ನಡೆದ ಅಖಿಲ ಭಾರತ ಬಂಜಾರಾ ಸೇವಾ ಸಂಘದ ಸೇವಾ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆ ನಡೆಯಿತು. ಈ ಹಿಂದಿನ ಅಧ್ಯಕ್ಷರಾದ ಶಂಕರ್ ಪವಾರ್ ಅವರ ಅವಧಿ ಪೂರ್ಣಗೊಂಡು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ಕಾರ್ಯಕಾರಿ ಸಭೆ ನಡೆದಾಗ ಡಾ. ಜಾಧವ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ನೂತನ ಅಧ್ಯಕ್ಷರ ಚುನಾವಣೆಯ ಸಂಚಾಲಕರಾಗಿ ಡಾ. ರಮೇಶ್ ಆರ್ಯ ಕಾರ್ಯನಿರ್ವಹಿಸಿದ್ದರು.
ಕಳೆದ ಐದಾರು ವರ್ಷಗಳಿಂದ ದೆಹಲಿಯಲ್ಲಿ ಬಂಜಾರಾ ಹಾಗೂ ಲಕ್ಕೀಶಾ ಬಂಜಾರಾ ಸಮಾವೇಶಗಳನ್ನು ಹಾಗು ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ ಮಾಡಿ ಬಂಜಾರಾ ಜನಾಂಗದ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ ಡಾ. ಉಮೇಶ್ ಜಾಧವ್ ದೇಶಾದ್ಯಂತ ಪ್ರವಾಸ ಮಾಡಿ ಬಂಜಾರಾ ಜನರ ಒಗ್ಗಟ್ಟಿಗೆ ಶ್ರಮಿಸಿದವರು ವಿವಿಧ ರಾಜ್ಯಗಳಲ್ಲಿ ಬಂಜಾರಾ ಸಮುದಾಯದವರಿಗೆ ಸೌಲಭ್ಯಗಳನ್ನು ಒದಗಿಸಿ, ರಾಷ್ಟ್ರ ನಾಯಕರಾಗಿ ಬೆಳೆದ ಪರಿಣಾಮವಾಗಿ ಪ್ರಸ್ತುತ ಈ ಪ್ರತಿಷ್ಠಿತ ಅಖಿಲ ಭಾರತ ಬಂಜಾರಾ ಸೇವಾ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಡಾ. ಜಾಧವ್ ಅವರಿಗೆ ನಿರ್ಗಮಿತ ಅಧ್ಯಕ್ಷರಾದ ಶಂಕರ್ ಪವಾರ್ ಶುಭಾಶಯ ಕೋರಿ ರಾಷ್ಟ್ರಮಟ್ಟದಲ್ಲಿ ಬಂಜಾರಾ ಜನಾಂಗಕ್ಕೆ ಉತ್ತಮ ನಾಯಕತ್ವವನ್ನು ನೀಡಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಲಿ ಎಂದು ಹಾರೈಸಿದರು.
ಸಮುದಾಯದ ಜನರು ಇಟ್ಟ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಮತ್ತು ಬಂಜಾರಾ ಜನಾಂಗದ ಅಭ್ಯುದಯಕ್ಕಾಗಿ ಕಾಯ,ವಾಚಾ, ಮನಸಾ ದುಡಿದು ಸಮುದಾಯದ ಜನರನ್ನು ಪ್ರಗತಿಯಲ್ಲಿ ಕೊಂಡೊಯ್ಯಲು ಅವಿರತವಾಗಿ ಶ್ರಮಿಸುವುದಾಗಿ ಹೇಳಿ ಈ ಆಯ್ಕೆಗೆ ಸಹಕರಿಸಿದ ಕಾರ್ಯಕಾರಿಣಿಯ ಎಲ್ಲ ಸದಸ್ಯರಿಗೆ ಸದಾ ಋಣಿಯಾಗಿರುತ್ತೇನೆ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿದ ಡಾ. ಉಮೇಶ್ ಜಾಧವ್ ಹೇಳಿದರು.
ಕಾರ್ಯಕಾರಿಣಿ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷರಾದ ಶಂಕರ್ ಪವಾರ್, ಮಹಾರಾಷ್ಟ್ರದ ಮಾಜಿ ವಿಧಾನ ಪರಿಷತ್ ಸದಸ್ಯರಾದ ನೀಲಯ್ಯ ನಾಯಕ್ ರಾಮುಲು ನಾಯಕ್, ಆಂಧ್ರ ಪ್ರದೇಶದ ಮಾಜಿ ಡಿಐಜಿ ಕೆ ಜಗನ್ನಾಥ್, ಮಾಜಿ ಸಂಸದರಾದ ಪ್ರೊಫೆಸರ್ ಸೀತಾರಾಮ ನಾಯಕ್ ,ಅಖಿಲ ಭಾರತ ಬಂಜಾರಾ ಸೇವಾ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸದಸ್ಯರಾದ ಮಾಜಿ ಮಂತ್ರಿಗಳಾದ ರೇವು ನಾಯಕ್ ಬೆಳಮಗಿ, ಮಾಜಿ ಶಾಸಕರಾದ ಪಿ ರಾಜೀವ್,ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಲಜಾ ನಾಯಕ್, ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.