ತೊಗರಿ ಬೆಳೆಗಾರರ ಬೇಡಿಕೆಗಳಿಗೆ ಒತ್ತಾಯ ಕಲಬುರ್ಗಿಯಲ್ಲಿ ರೈತರ ಧರಣಿ ಸತ್ಯಾಗ್ರಹ

ತೊಗರಿ ಬೆಳೆಗಾರರ ಬೇಡಿಕೆಗಳಿಗೆ ಒತ್ತಾಯ ಕಲಬುರ್ಗಿಯಲ್ಲಿ ರೈತರ ಧರಣಿ ಸತ್ಯಾಗ್ರಹ

ತೊಗರಿ ಬೆಳೆಗಾರರ ಬೇಡಿಕೆಗಳಿಗೆ ಒತ್ತಾಯ

ಕಲಬುರ್ಗಿಯಲ್ಲಿ ರೈತರ ಧರಣಿ ಸತ್ಯಾಗ್ರಹ

ಕಲಬುರ್ಗಿ: ತೊಗರಿ ಬೆಳೆಗಾರರ ಸಂರಕ್ಷಣೆ, ಬೆಂಬಲ ಬೆಲೆ (ಎಂಎಸ್ಪಿ ) ಜಾರಿಗೊಳಿಕೆ, ಬೆಳೆ ವಿಮೆ ಹಾಗೂ ನಷ್ಟ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ಪರಿಹಾರ ವಿತರಣೆಯಲ್ಲಿ ನಡೆದಿರುವ ತಾರತಮ್ಯವನ್ನು ಬಗೆಹರಿಸಿ ಎಲ್ಲ ರೈತರಿಗೆ ಸಮಾನ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಹಾಗೂ ಇಷ್ಟೋ ಟೋಕಿಯೋ ಜನರಲ್ ಇನ್ಸುರೆನ್ಸ್ ಕಂಪೆನಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಭಾಷ್ ಜೇವರ್ಗಿ, ದಿಲೀಪ್ ನಾಗೂರೆ, ರಾಯಪ್ಪ ಹುರುಮುಂಜಿ, ದೇವು ಬಿರಾದಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತಿಭಟನೆಯ ಬಳಿಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು, ಇಷ್ಟೋ ಟೋಕಿಯೋ ಜನರಲ್ ಇನ್ಸುರೆನ್ಸ್ ಕಂಪೆನಿಯ ಪ್ರಧಾನ ವ್ಯವಸ್ಥಾಪಕರು ಹಾಗೂ ಶಾಖಾ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲೆಯ ಆರ್ಥಿಕತೆ ತೊಗರಿ ಬೆಳೆಯ ಮೇಲೆ ಅವಲಂಬಿತವಾಗಿದ್ದು, ಬಂಪರ್ ಬೆಳೆ ಬಂದಾಗ ಮಾತ್ರ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಆದರೆ ಒಂದೆಡೆ ಬರ, ಮತ್ತೊಂದೆಡೆ ಅತಿವೃಷ್ಟಿ ಹಾಗೂ ನೆರೆ ಎದುರಾದರೂ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗುವಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ತೊಗರಿ ಬೆಳೆಗಾರರ ಜಾಥಾ ಮೂಲಕ ತೆರಳಿ, ಗೊಡ್ಡು ಹಿಡಿದ ತೊಗರಿ ಹೊರೆ ತಲೆಯ ಮೇಲೆ ಹೊತ್ತುಕೊಂಡು ಪ್ರತಿಭಟನೆ ನಡೆಸಿ ಸಚಿವರಿಗೆ ಮನವಿ ಸಲ್ಲಿಸಿದಾಗ ರಾಜ್ಯ ಸರ್ಕಾರ ಇನ್ಸೆಂಟಿವ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇಂದಿಗೂ ನೈಪೈಸೆಯೂ ದೊರಕಿಲ್ಲ ಎಂದು ರೈತರು ದೂರಿದರು. ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ತೊಗರಿ ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ವಹಿಸಿ, ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದಿದ್ದೇವೆ ಎಂದು ಹೇಳಿ ಕೈ ತೊಳೆದುಕೊಂಡAತಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಭಾರೀ ಕುಸಿತ ಕಂಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಂಎಸ್ಸಿ ನೀಡುವ ವಿಷಯದಲ್ಲಿ ರೈತ ವಿರೋಧಿ ನಿಲುವು ತಾಳಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ತೊಗರಿ (5,95,150 ಹೆಕ್ಟೇರ್), ಹೆಸರು (50,121 ಹೆಕ್ಟೇರ್), ಉದ್ದು (30.890 ಹೆಕ್ಟೇರ್), (23.440 ಸೋಯಾಬಿನ್ ಹೆಕ್ಟೇರ್) ಹಾಗೂ ಹತ್ತಿ (98,550 ಹೆಕ್ಟೇರ್)

ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿದೆ. ಉತ್ತಮ ಬೆಳೆ ಬಂದಿದ್ದರೂ ಗೊಬ್ಬರ, ಬೀಜ, ಔಷಧಿ ಸಿಂಪರಣೆ, ಲಾಗೋಡಿ ಸೇರಿದಂತೆ ಖರ್ಚು ಮಾಡಿದ ರೈತರು ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದ್ದು, ಬೆಳೆ ನಷ್ಟ ಪರಿಹಾರ ವಿತರಣೆಯಲ್ಲೂ ತಾರತಮ್ಯ ನಡೆದಿದೆ ಎಂದು ಅವರು ಆರೋಪಿಸಿದರು.

ಭೂಮಿಯಲ್ಲಿ ಹಸಿವು ಹೆಚ್ಚಿರುವುದರಿಂದ ತೊಗರಿಯಲ್ಲಿ ಗೊಡ್ಡು ರೋಗ (ಲಕ್ಕಿ) ವ್ಯಾಪಿಸುತ್ತಿದ್ದು, ತಕ್ಷಣವೇ ಸಮೀಕ್ಷೆ ಕೈಗೊಳ್ಳಬೇಕು. ಜೊತೆಗೆ ಹೊಸ ಹಾಗೂ ಉತ್ತಮ ತೊಗರಿ ತಳಿಗಳನ್ನು ಅಭಿವೃದ್ಧಿಪಡಿಸಬೇಕು. ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕೆಂದು ರೈತ ಸಂಘವು ಆಗ್ರಹಿಸಿದೆ.