ವಡಗಾಂವ ಹೋಬಳಿಯಲ್ಲಿ ಶಾಸಕ ಪ್ರಭು ಚವ್ಹಾಣ ಗ್ರಾಮ ಸಂಚಾರ

ವಡಗಾಂವ ಹೋಬಳಿಯಲ್ಲಿ ಶಾಸಕ ಪ್ರಭು ಚವ್ಹಾಣ ಗ್ರಾಮ ಸಂಚಾರ

ವಡಗಾಂವ ಹೋಬಳಿಯಲ್ಲಿ ಶಾಸಕ ಪ್ರಭು ಚವ್ಹಾಣ ಗ್ರಾಮ ಸಂಚಾರ  ವಿದ್ಯುತ್ ಸಮಸ್ಯೆ ತುರ್ತಾಗಿ ಸರಿಪಡಿಸಲು ಸೂಚನೆ

-ಮಾಜಿ‌ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜ.7ರಂದು ವಡಗಾಂವ ಹೋಬಳಿ ವ್ಯಾಪ್ತಿಯಲ್ಲಿನ ವಿವಿಧ ಹಳ್ಳಿಗಳಲ್ಲಿ ಗ್ರಾಮ ಸಂಚಾರ ನಡೆಸಿದರು.

ಕೌಡಗಾಂವ, ಬಲ್ಲೂರ(ಜೆ) ಕೌಠಾ(ಕೆ), ಕೌಠಾ(ಬಿ), ಪಾಶಾಪೂರ, ಗಡಿಕುಶನೂರ, ಬೇಲೂರ(ಎನ್), ಆಲೂರ(ಬಿ), ಆಲೂರ(ಕೆ) ಗ್ರಾಮಗಳಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.

ಕೌಡಗಾಂವ, ಬಲ್ಲೂರ(ಜೆ), ಕೌಠಾ(ಕೆ), ಕೌಠಾ(ಬಿ) ಗ್ರಾಮಗಳಲ್ಲಿ ಜನತೆ ಹಿಂದೆ ಸುರಿದ ವಿಪರೀತ ಮಳೆಯಿಂದಾಗಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ತಂತಿಗಳು ಹಾಳಾದ ಕಾರಣ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಈ ಬಾರಿ ಬಹಳಷ್ಟು ರೈತರು ಕಬ್ಬು ಬಿತ್ತನೆ ಮಾಡಿದ್ದು ವಿದ್ಯುತ್ ಸಮಸ್ಯೆಯ ಕಾರಣ ಪಂಪ್ ಸೆಟ್‌ಗಳು ನಡೆಯದೇ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಆತಂಕದಲ್ಲಿದ್ದಾರೆ. ಇಲಾಖೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ರೈತರು ಗೋಳು ತೋಡಿಕೊಂಡರು.

ಈ ವೇಳೆ ಶಾಸಕರು ಮಾತನಾಡಿ, ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಕೃಷಿ ಭೂಮಿಗಳು ಮುಳುಗಡೆಯಾಗಿ ಸಾವಿರಾರು ರೈತರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದಾರೆ. ನದಿ ತೀರದ ಗ್ರಾಮಗಳಲ್ಲಿನ ಕೃಷಿ ಭೂಮಿಗಳಲ್ಲಿನ ವಿದ್ಯುತ್ ಕಂಬಗಳು ಸಂಪೂರ್ಣ ಹಾಳಾಗಿವೆ. ವಿದ್ಯುತ್ ಪರಿವರ್ತಕಗಳು ನಿರುಪಯುಕ್ತವಾಗಿದ್ದು, ವಿದ್ಯುತ್ ತಂತಿಗಳು ಕಡಿದುಬಿದ್ದಿವೆ. ರೈತರು ಸಮಸ್ಯೆ ಎದುರಿಸುತ್ತಿದ್ದರೂ ಏಕೆ ನಿಷ್ಕಾಳಜಿ ವಹಿಸುತ್ತಿದ್ದೀರಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಮಳೆ ಹಾಗೂ ಮತ್ತಿತರೆ ಕಾರಣಗಳಿಂದ ಶಿಥಿಲಗೊಂಡ‌ ಎಲ್ಲ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕು. ಬಹಳಷ್ಟು ಗ್ರಾಮಗಳಲ್ಲಿ ತಂತಿಗಳು ತುಂಡಾಗಿ ಜೋತು ಬಿದ್ದಿರುವುದು ಗಮನಕ್ಕೆ ಬಂದಿದೆ. ಇವು ಅಪಾಯಕಾರಿಯಾಗಿದ್ದು, ಇಂತಹ ವಿದ್ಯುತ್ ತಂತಿಗಳನ್ನು ಬದಲಾಯಿಸಬೇಕೆಂದು ಶಾಸಕರು ನಿರ್ದೇಶನ ನೀಡಿದರು.

ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋದರೆ ತಕ್ಷಣ ಸರಿಪಡಿಸಬೇಕು. ವಿದ್ಯುತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ರೈತರಿಂದ‌ ಬರುವ ದೂರವಾಣಿ ಕರೆಗಳಿಗೆ ಸ್ಪಂದಿಸಬೇಕು. ಲೈನ್ ಮ್ಯಾನ್ ಗಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

 ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಗ್ರಾಮ ಸಂಚಾರದ ವೇಳೆ ಕೌಠಾ(ಬಿ) ಹಾಗೂ ಬಲ್ಲೂರ(ಜೆ) ಗ್ರಾಮಗಳಲ್ಲಿ ಮಹಿಳೆಯರು ಶಾಸಕರನ್ನು ಭೇಟಿಯಾಗಿ ಗ್ರಾಮಗಳಲ್ಲಿ ಮದ್ಯ ಮಾರಾಟ ವಿಪರೀತವಾಗಿ ನಡೆಯುತ್ತಿದ್ದು, ಗ್ರಾಮದ ಬಹಳಷ್ಟು ಜನರು ವಿಪರೀತ ಮದ್ಯಪಾನ ಮಾಡುತ್ತಿದ್ದಾರೆ. ಬಹಳಷ್ಟು ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೇಗಾದರೂ ಮಾಡಿ ನಮ್ಮ‌ ಗ್ರಾಮದಲ್ಲಿ ಮದ್ಯ ಮಾರಾಟ‌ ನಿಲ್ಲಿಸಬೇಕೆಂದು ಮನವಿ ಸಲ್ಲಿಸಿದರು.

ಅಕ್ರಮ‌ ಮದ್ಯ ಮಾರಾಟಕ್ಕೆ ತುರ್ತಾಗಿ ಕಡಿವಾಣ ಹಾಕಿ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಪೊಲೀಸ್ ಅಧಿಕಾರಿಗೆ ನಿರ್ದೇಶನ ನೀಡಿದರು. 

ಸಂಪೂರ್ಣ ಮಧ್ಯಪಾನ ನಿಷೇಧ ಮಾಡಬೇಕೆಂಬುದು‌ ನನ್ನ ಆಶಯವಾಗಿದ್ದು, ಈ ದಿಶೆಯಲ್ಲಿ ಪ್ರಯತ್ನ ಮುಂದುವರೆಸುತ್ತೇನೆ. ಕುಡಿತದ ವ್ಯಸನ ಬಹಳಷ್ಟು ಅಪಾಯಕಾರಿಯಾಗಿದ್ದು ಆರೋಗ್ಯ ಕೆಡುವುದಲ್ಲದೇ ಸಂಪೂರ್ಣ ಕುಟುಂಬ ಬೀದಿಗೆ ಬರುತ್ತದೆ. ಅದ್ದರಿಂದ ಕಡಿಯುವ ಅಭ್ಯಾಸ ಹೊಂದಿದವರು ಸ್ವಯಂ ಪ್ರೇರಣೆಯಿಂದ ಕುಡಿತವನ್ನು ಬಿಡಲು ಯತ್ನಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಪಂಚಾಯತ ರಾಜ್ ಎಂಜಿನಿಯರಿಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಪಿಎಂಜಿಎಸ್‌ವೈ ಎಇಇ ಸುಭಾಷ ವಾಗಮಾರೆ, ಎಡಿಎಲ್ಆರ್ ರಾಜಶ್ರೀ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಖಂಡೋಬಾ ಕಂಗಟೆ, ಪ್ರಕಾಶ ಮೇತ್ರೆ, ಮಂಜು ಸ್ವಾಮಿ, ಪ್ರಕಾಶ ಜೀರ್ಗೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.