ಬಿಳವಾರ ಗ್ರಾಮದ ವಾರ್ಡ್–1ರ ಮೂಲಭೂತ ಸಮಸ್ಯೆಗಳಿಗೆ ತಕ್ಷಣ ಪರಿಹಾರಕ್ಕೆ ಆಗ್ರಹ

ಬಿಳವಾರ ಗ್ರಾಮದ ವಾರ್ಡ್–1ರ ಮೂಲಭೂತ ಸಮಸ್ಯೆಗಳಿಗೆ ತಕ್ಷಣ ಪರಿಹಾರಕ್ಕೆ ಆಗ್ರಹ

 ಬಿಳವಾರ ಗ್ರಾಮದ ವಾರ್ಡ್–1ರ ಮೂಲಭೂತ ಸಮಸ್ಯೆಗಳಿಗೆ ತಕ್ಷಣ ಪರಿಹಾರಕ್ಕೆ ಆಗ್ರಹ

– ಮೆಹಬೂಬ್ ಸಾಬ್ ಚೌದ್ರಿ ವಕೀಲರಿಂದ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಎಚ್ಚರಿಕೆ

ಯಡ್ರಾಮಿ:“ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ?” ಎಂಬ ಪ್ರಶ್ನೆ ಇಂದು ಗ್ರಾಮೀಣ ಭಾಗದ ಜನತೆಯನ್ನು ಕಾಡುತ್ತಿದೆ. ಸ್ವಾತಂತ್ರ್ಯ ಸರ್ವರಿಗೂ ಸಿಗಬೇಕಾದರೆ, ಇಂದಿನ ದಿನಮಾನಗಳಲ್ಲಿ ಅದು ರಾಜಕಾರಣಿಗಳ ಜೇಬಿಗೆ, ಪೊಲೀಸರ ಲಾಟಿಗೆ, ಸರ್ಕಾರಿ ಅಧಿಕಾರಿಗಳ ಮನೆಯ ತಿಜೋರಿಗೆ ಸೀಮಿತವಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಹೆಚ್ಚುತ್ತಿದೆ.

ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ, ಭ್ರಷ್ಟಾಚಾರ, ನಿರ್ಲಕ್ಷ್ಯಗಳು ಬಡವರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ. ನರೇಗಾ ಯೋಜನೆ, ಸಿಸಿ ರಸ್ತೆ, ವಿದ್ಯುತ್ ಕಂಬಗಳ ಬಲ್ಬು, ಕುಡಿಯುವ ನೀರಿನ ನಲ್ಲಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮಗಳು ನಡೆಯುತ್ತಿರುವುದನ್ನು ಕಂಡು ಹಳ್ಳಿಯ ಯುವಕರು ಕೂಡ “ಲೂಟಿ ಲೂಟಿ ಈ ಭೂಮಿ ಮೇಲೆ ಎಲ್ಲಾ ಲೂಟಿ” ಎಂಬ ಹಾಡನ್ನು ರಚಿಸಿ ಹಾಡುತ್ತಿರುವುದು ಇಂದಿನ ಪರಿಸ್ಥಿತಿಯ ಕಟುವಾದ ಚಿತ್ರಣವಾಗಿದೆ.

ಅದೇ ರೀತಿಯಾಗಿ, ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ನಂಬರ್–1ರಲ್ಲಿ ಕಳೆದ 15 ವರ್ಷಗಳಿಂದ ವಿದ್ಯುತ್ ಕಂಬಗಳಿಗೆ ದೀಪಗಳ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಇಲ್ಲಿನ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಚಿಕ್ಕ ಮಕ್ಕಳಿಗೆ ರಾತ್ರಿಯ ಸಮಯದಲ್ಲಿ ಓಡಾಡಲು ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ, ಈ ರಸ್ತೆಯಲ್ಲಿ ಹಾವು, ಚೇಳು ಸೇರಿದಂತೆ ಅಪಾಯಕಾರಿ ಜಂತುಗಳ ಭಯವೂ ಹೆಚ್ಚಾಗಿದೆ.

ಈ ಸಮಸ್ಯೆಯನ್ನು ಕುರಿತು ಹಲವಾರು ಬಾರಿ ಬಿಳವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಅವರು “ಡೋಂಟ್ ಕೇರ್” ಎನ್ನುವ ಧೋರಣೆ ತೋರಿಸಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಕೀಲರಾದ ಮೆಹಬೂಬ್ ಸಾಬ್ ಚೌದ್ರಿ ಅವರು ಬಿಳವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತೀವ್ರವಾಗಿ ಆಗ್ರಹಿಸಿದ್ದು, ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಮತ್ತೆ ನಿರ್ಲಕ್ಷ್ಯ ತೋರಿದರೆ, ಕಾನೂನು ಹೋರಾಟ ನಡೆಸಿ ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

-ವರದಿ: ಜೇಟ್ಟೆಪ್ಪ ಎಸ್. ಪೂಜಾರಿ