ಅದ್ದೂರಿಯಾಗಿ ಜರುಗಿದ ಕರಿಬಸವೇಶ್ವರ ರಥೋತ್ಸವ
ಅದ್ದೂರಿಯಾಗಿ ಜರುಗಿದ ಕರಿಬಸವೇಶ್ವರ ರಥೋತ್ಸವ
ಶಹಾಪುರ : ಕಲ್ಯಾಣ ಕರ್ನಾಟಕದ ಭಕ್ತಿ ಭಾವ ಹಾಗೂ ಜ್ಞಾನದ ಸಂಕೇತವಾದ ತಾಲೂಕಿನ ಸಗರ ಗ್ರಾಮದ ಒಕ್ಕಲಿಗರ ಹಿರೇಮಠದ ಶ್ರೀ ಕರಿಬಸವೇಶ್ವರ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಜಯ ಘೋಷ ಹಾಗೂ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಶ್ರೀ ಕರಿಬಸವೇಶ್ವರ ಮಹಾರಾಜ್ ಕಿ ಜೈ ಎಂಬ ಜಯ ಘೋಷ ಹಾಗೂ ಮಂತ್ರ ಘೋಷ ಮೊಳಗಿದವು ಪುಷ್ಪ ಅಲಂಕಾರದೊಂದಿಗೆ ಸಿಂಗರಿಸಿದ ರಥಕ್ಕೆ ಭಕ್ತರು ಉತ್ತತ್ತಿ ಹೂವು ಹಣ್ಣು ಹಾರಿಸಿ ಭಕ್ತಿ ಸಮರ್ಪಿಸಿದರು. ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಅಕ್ಕ ಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ ಹಾಗೂ ಅಕ್ಕನ ಬಳಗದ ವತಿಯಿಂದ ಕಳಸ ಹಾಗೂ ತೇರಿನ ಮಿಣಿ ಮತ್ತು ಪಿಡ್ದಪ್ಪ ನಂದಿಕೋಲ ಅವರ ಮನೆಯಿಂದ ಭಕ್ತಿ ಮತ್ತು ಶಕ್ತಿಯ ಸಂಕೇತವಾದ ನಂದಿ ಧ್ವಜ ಮಠಕ್ಕೆ ಆಗಮಿಸುವುದು,ತೇರಿನ ಮುಂಭಾಗದಲ್ಲಿ ಭಕ್ತರು ನಂದಿ ಧ್ವಜವನ್ನು ಹೊತ್ತು ಶಿವನ ಸಾನಿಧ್ಯದಲ್ಲಿ ಕುಣಿದು ಕುಪ್ಪಳಿಸಿದರು,
ಸಾಯಂಕಾಲ 5.30 ಕ್ಕೆ ಶ್ರೀ ಕರಿಬಸವೇಶ್ವರ ಕರ್ತೃ ಗದ್ದುಗೆಗೆ ಸಂಪ್ರದಾಯಗಳ ಪ್ರಕಾರ ವಿಶೇಷ ಪೂಜೆ ಪುನಸ್ಕಾರ ಜರುಗಿತು, ನಂತರ ಶ್ರೀ ಮಠದ ಪೀಠಾಧಿಪತಿಗಳು ಹಾಗೂ ಸಗರನಾಡಿನ ನಂದಾದೀಪ,ಭಕ್ತರಿಗೆ ದಾರಿ ತೋರುವ ಶಕ್ತಿ ಶ್ರೀ ಮರುಳ ಮಹಾಂತ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.
ಭವ್ಯ ರಥೋತ್ಸವ ಜರುಗಿದ ನಂತರ
ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿಧರ್ಮಸಭೆ ಹಾಗೂ ವಿವಿಧ ಧಾರ್ಮಿಕ ಹಾಗೂ ಗ್ರಾಮೀಣ ಕ್ರೀಡೆಗಳಾದ ಭಾರ ಎತ್ತುವ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,ಸ್ಪರ್ಧೆ ವಿಜೇತರಿಗೆ ಬೆಳ್ಳಿಯ ಕಡಗ ಬಹುಮಾನ ನೀಡಿ ಶ್ರೀ ಮಠದ ಪರವಾಗಿ ಗೌರವಿಸಿದರು.ನಂತರ ಹಲವಾರು ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕರಾದ ಗುರು ಪಾಟೀಲ ಶಿರವಾಳ ಹಾಗೂ ಬಿಜೆಪಿ ಯುವ ಮುಖಂಡ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ,ಚಂದಣ್ಣ ಸೇರಿ ತಿರುಪತಿ ಹತ್ತಿಕಟಗಿ ಸೇರಿದಂತೆ ಸಗರ ಗ್ರಾಮ ಹಾಗೂ ಸುತ್ತಮುತ್ತಲಿನ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
