ಫೆ 15 ರಂದು ಜಯನಗರ ಶಿವಮಂದಿರದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಆಚರಣೆ
ಫೆ 15 ರಂದು ಜಯನಗರ ಶಿವಮಂದಿರದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಆಚರಣೆ.
ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ನಗರದ ಜಯನಗರ ಶಿವಮಂದಿರದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಫೆಬ್ರವರಿ 15 ಭಾನುವಾರ ರಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಅದ್ದೂರಿಯಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ಜರುಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅವರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಂದು ಬೆಳಿಗ್ಗೆ 5 ಗಂಟೆಗೆ ಶಿವನಿಗೆ ರುದ್ರಾಭಿಷೇಕ ನಡೆಯುವುದು.ನಂತರ ಭಕ್ತಾದಿಗಳಿಂದ ಅಭಿಷೇಕ ನಡೆಯುತ್ತವೆ.ಬೆಳಿಗ್ಗೆ 10:30 ಗಂಟೆಗೆ ಟ್ರಸ್ಟ್ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಬಡಾವಣೆಯ ಮಹಿಳೆಯರ ನೇತೃತ್ವದಲ್ಲಿ ವಿಶೇಷವಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ ಅಂಗವಾಗಿ ಮಂಗಲ ಕಾರ್ಯ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆಯುವವು.ಇಂಥ ಆಚರಣೆ ಕೇವಲ ಜಯನಗರ ಶಿವಮಂದಿರದಲ್ಲಿ ಮಾತ್ರ ನೋಡಲು ಸಿಗುವುದು ವಿಶೇಷವಾಗಿದೆ.ನಂತರ ಪಲ್ಲಕ್ಕಿ ಮೆರವಣಿಗೆಗೆ ಕೆಕೆಆರ್ ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡುವರು. ಹೊರಾಟಗಾರ ಡಾ.ಲಕ್ಷ್ಮಣ ದಸ್ತಿ, ಸಾಹಿತಿ ಡಾ.ಚಿ.ಸಿ.ನಿಂಗಣ್ಣ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ ಸೇರಿದಂತೆ ಅನೇಕ ಮುಖಂಡರು, ಪೂಜ್ಯರು, ಗಣ್ಯರು ಉಪಸ್ಥಿತರಿರುವರು.
ಅಂದು ಸಂಜೆ ವಿಶೇಷ ಪೂಜೆ ನಂತರ ರಾತ್ರಿ 8 ಗಂಟೆಗೆ ಜಾಗರಣೆ ಅಂಗವಾಗಿ ಭಜನಾ ತಂಡದ ವತಿಯಿಂದ ಭಕ್ತಿ ಗೀತೆಗಳು, ಭಜನೆ ಹಾಗೂ ಕಲಾವಿದರಿಂದ ಭಾವಗೀತೆಗಳ ಸಂಗೀತ ಸಂಜೆ ನಡೆಯಲಿದೆ.ಈ ಸಂದರ್ಭದಲ್ಲಿ ಅನೇಕ ಗಣ್ಯರು, ಸಾಹಿತಿಗಳು ಉಪಸ್ಥಿತರಿರುವರು.ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯನಗರ ಶಿವಮಂದಿರಕ್ಕೆ ಆಗಮಿಸಿ ಶಿವನ ಆಶೀರ್ವಾದ ಪಡೆಯಬೇಕು ಎಂದು ಅವರು ಕೋರಿದ್ದಾರೆ.
