ಅಟಲ್ ಬಿಹಾರಿ ವಾಜಪೇಯಿ 101ನೇ ಜಯಂತಿ ಆಚರಣೆ
ಅಟಲ್ ಬಿಹಾರಿ ವಾಜಪೇಯಿ 101ನೇ ಜಯಂತಿ ಆಚರಣೆ
ಕಲಬುರಗಿ : ಇಂದು (25.12.2025) ಮಧ್ಯಾಹ್ನ 2 ಗಂಟೆಗೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಅಜಾತಶತ್ರು, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಅರ್ಪಿಸುವ ಮೂಲಕ ಆಚರಿಸಲಾಯಿತು.
ಸಪ್ತ ನೇಕಾರರ ಸಂಕೇತವಾಗಿ ಸಪ್ತ ಜನರು ಸೇರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಹಣಮಂತರಾಯ ಜವಳಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಜೆ. ವಿನೋದಕುಮಾರ ಅವರು, ಬಿಜೆಪಿ ಇಂದು ರಾಜಕೀಯ ಉತ್ತುಂಗಕ್ಕೆ ಏರಲು ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮವೇ ಪ್ರಮುಖ ಕಾರಣವಾಗಿದ್ದು, ಅದಕ್ಕೆ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಆದರ್ಶ ಮತ್ತು ನಾಯಕತ್ವವೇ ಪ್ರೇರಣೆಯಾಗಿದೆ. ಅವರ ಆದರ್ಶ ಗುಣಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಪಕ್ಷ ನಮ್ಮನ್ನು ಗುರುತಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ಬಗಲಿ ಅವರು ಮಾತನಾಡಿ, ಸೂರ್ಯ-ಚಂದ್ರ ಇರುವವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಹಾಗೂ ಕಾರ್ಯಗಳು ಅಮರವಾಗಿರುತ್ತವೆ ಎಂದರು. ಕಳೆದ ವರ್ಷದ ಅಂತ್ಯದಲ್ಲಿ ಕೇಂದ್ರ ಸರ್ಕಾರವು ಸಪ್ತ ಜವಳಿ ಪಾರ್ಕ್‌ಗಳ ಘೋಷಣೆ ಮಾಡಿದ್ದು, ಅದರಲ್ಲಿ ಒಂದಾಗಿ ಕಲಬುರಗಿ ಜಿಲ್ಲೆ ಆಯ್ಕೆಯಾಗಿದೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ಪಿಎಂ ಮಿತ್ರ ಟೆಕ್ಸ್ಟೈಲ್ ಪಾರ್ಕ್ ಯೋಜನೆ ಸ್ಥಾಪನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಹಾವೇರಿ ಸಂಸದರು ಮತ್ತು ಪ್ರಸ್ತುತ ಕೇಂದ್ರ ಜವಳಿ ಮತ್ತು ಕೌಶಲ್ಯಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಸುಮಾರು 3 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಶೀಘ್ರವಾಗಿ ಆರಂಭಿಸಲು ಉತ್ಸುಕರಾಗಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಸಹಕರಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿದ್ದು ಪಾಟೀಲ, ನಾಗರಾಜ ಚಿಂಚೋಳಿ, ವಿಠ್ಠಲ್ ಜಮಾದಾರ ಸೇರಿದಂತೆ ಇತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
